ಮೋದಿ ಸರಕಾರ ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ಸಹಿಸದು: ಸಿಎಎ ಕುರಿತು ಸಚಿವ ರಮೇಶ್ ಪೋಖ್ರಿಯಾಲ್

Update: 2019-12-30 18:09 GMT

ಕೋಲ್ಕತ್ತಾ, ಡಿ. 30: ಶಿಕ್ಷಣ ಸಂಸ್ಥೆಗಳು ಯಾವುದೇ ರೀತಿಯಲ್ಲಿ ರಾಜಕೀಕರಣಗೊಳ್ಳುವುದನ್ನು ಕೇಂದ್ರ ಸರಕಾರ ಸಹಿಸದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ರವಿವಾರ ತಿಳಿಸಿದ್ದಾರೆ.

ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶ ಇದೆ. ಆದರೆ, ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳನ್ನು ಇವುಗಳಿಂದ ಹೊರಗಿರಿಸಬೇಕು. ಯಾಕೆಂದರೆ ಇಲ್ಲಿಗೆ ಕಲಿಯಲು ಬಹುದೂರದಿಂದ ಅನೇಕ ವಿದ್ಯಾರ್ಥಿಗಳು ಬರುತ್ತಾರೆ ಎಂದು ಅವರು ಹೇಳಿದರು.

ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳು ಯಾವುದೇ ರೀತಿಯಲ್ಲಿ ರಾಜಕೀಕರಣಗೊಳ್ಳುವುದನ್ನು ನರೇಂದ್ರ ಮೋದಿ ಸರಕಾರ ಸಹಿಸದು ಎಂದು ಅವರು ಪ್ರತಿಪಾದಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯ, ದಿಲ್ಲಿ ವಿಶ್ವವಿದ್ಯಾನಿಲಯ, ಜಾದವ್‌ಪುರ ವಿಶ್ವವಿದ್ಯಾನಿಲಯ ಹಾಗೂ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯ ಸೇರಿದಂತೆ ದೇಶದಾದ್ಯಂತ ವಿಶ್ವವಿದ್ಯಾನಿಲಯಗಳಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ತಪ್ಪು ಮಾಹಿತಿ ಹರಡುವ ಮೂಲಕ ದೇಶವನ್ನು ಧಾರ್ಮಿಕ ಆಧಾರದಲ್ಲಿ ವಿಭಜಿಸುತ್ತಿರುವುದಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದು ಪೋಖ್ರಿಯಾಲ್ ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, 2005ರಲ್ಲಿ ರಾಜ್ಯದಲ್ಲಿ ಅಕ್ರಮ ವಲಸೆ ಬಗ್ಗೆ ನಡೆದ ಪ್ರತಿಭಟನೆಯಲ್ಲಿ ಆಗ ಸಂಸದೆಯಾಗಿದ್ದ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News