ಪೇಜಾವರ ಶ್ರೀಗಳು ಆರಿಸಿದ ಸಾತ್ವಿಕ ದಾರಿ

Update: 2019-12-31 06:59 GMT

ಪೇಜಾವರ ವಿಶ್ವೇಶ ತೀರ್ಥರು ನಿಧನರಾಗಿದ್ದಾರೆ. ಅವರ ಅಗಲಿಕೆಗೆ ದೇಶದ ರಾಜಕೀಯ ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸಿದೆ. ಬ್ರಾಹ್ಮಣ ಸಮುದಾಯದಲ್ಲಿ ಒಂದು ನಿರ್ದಿಷ್ಟ ಪಂಥದ ಪ್ರತಿನಿಧಿಯಾಗಿದ್ದ ಪೇಜಾವರಶ್ರೀ ಇಡೀ ದೇಶದ ಪಾಲಿನ ‘ರಾಜಕೀಯ ಸನ್ಯಾಸಿ’ಯಾಗಿ ಬೆಳೆದ ಪರಿ ಅಚ್ಚರಿ ಹುಟ್ಟಿಸುವಂತಹದು. ಪೇಜಾವರ ಶ್ರೀಗಳ ವರ್ಚಸ್ಸು ಲಿಂಗಾಯತ ಸ್ವಾಮೀಜಿ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳ ವರ್ಚಸ್ಸಿಗಿಂತ ಭಿನ್ನವಾದುದು. ಸಿದ್ದಗಂಗಾ ಸ್ವಾಮೀಜಿ ವ್ಯಕ್ತಿತ್ವ ರೂಪುಗೊಂಡದ್ದು ತ್ರಿವಿಧ ದಾಸೋಹಗಳ ಮೂಲಕ. ಲಿಂಗಾಯತ ಧರ್ಮದ ಸ್ವಾಮೀಜಿಯಾಗಿದ್ದರೂ, ಬಡವರ ಸೇವೆಯ ಮೂಲಕ ತಮ್ಮ ವ್ಯಕ್ತಿತ್ವವನ್ನು ಧರ್ಮದಾಚೆಗೆ ವಿಸ್ತರಿಸಿಕೊಂಡಿದ್ದರು. ಸಿದ್ದಗಂಗಾ ಸ್ವಾಮೀಜಿ ಸಾರ್ವಜನಿಕ ಆಶೀರ್ವಚನಗಳಿಗಿಂತ ಕೃತಿಗಳಿಗೆ ಹೆಚ್ಚು ಆದ್ಯತೆಯನ್ನು ನೀಡಿದವರು. ಆದುದರಿಂದಲೇ ದೇಶದ ಇತರ ಸಂತರ ಜೊತೆಗೆ ಬಹಿರಂಗವಾಗಿ ಕಾಣಿಸಿಕೊಳ್ಳುವ, ರಾಜಕೀಯ ನಾಯಕರ ಜೊತೆಗೆ ರಾಜಕೀಯ ಸಂಬಂಧಗಳನ್ನು ಇಟ್ಟುಕೊಳ್ಳುವ ಅಗತ್ಯ ಅವರಿಗೆ ಬೀಳಲಿಲ್ಲ. ಸಂದರ್ಭ ಬಂದಾಗ ರಾಜಕಾರಣಿಗಳೇ ಅವರೆಡೆಗೆ ಧಾವಿಸುತ್ತಿದ್ದರೇ ಹೊರತು, ಅವರೆಂದೂ ರಾಜಕಾರಣಿಗಳೆಡೆಗೆ, ದಿಲ್ಲಿಯ ಅಧಿಕಾರ ಕೇಂದ್ರದೆಡೆಗೆ ಧಾವಿಸಿದವರಲ್ಲ. ಕಾಯಕವನ್ನೇ ಧರ್ಮವಾಗಿ ಸ್ವೀಕರಿಸಿ ಬದುಕಿದರು. ಹಾಗೆಯೇ ಯಾವುದೇ ವಿವಾದಗಳಿಗೆ ಸಿಲುಕಿಕೊಳ್ಳದೆ ತಮ್ಮ ಸಾರ್ವಜನಿಕ ಬದುಕನ್ನು ಕಾಪಾಡಿಕೊಂಡರು. ‘ಲಿಂಗ ಅಹುದಹುದೆನಿಸುವಂತೆ ಬದುಕಿ’ ಇಹಲೋಕ ತ್ಯಜಿಸಿದರು. ಅವರು ಉಳಿಸಿ ಹೋದ ತ್ರಿವಿಧ ದಾಸೋಹ ಮಾತ್ರ ಈಗಲೂ ಮುಂದುವರಿಯುತ್ತಿದೆ.

ಪೇಜಾವರ ಶ್ರೀಗಳ ವ್ಯಕ್ತಿತ್ವಕ್ಕೆ ಸಾಮಾಜಿಕ ಹಿನ್ನೆಲೆಯಿಲ್ಲ. ಅವರು ರಾಜಕೀಯ ಮತ್ತು ಧರ್ಮ ರಾಜಕಾರಣದ ಮೂಲಕ ರಾಷ್ಟ್ರಮಟ್ಟದ ವರ್ಚಸ್ಸನ್ನು ರೂಪಿಸಿಕೊಂಡವರು. ಆಳದಲ್ಲಿ ವೈಚಾರಿಕ ಚಿಂತನೆಗಳ ಕುರಿತಂತೆ ಅವರಿಗೆ ಆಸಕ್ತಿಯಿತ್ತಾದರೂ, ಅವರು ಕುಳಿತ ಪೀಠದ ಜೊತೆ ಜೊತೆಗೆ ಅವುಗಳನ್ನು ಕೊಂಡೊಯ್ಯುವುದು ಅವರಿಗೆ ಕಷ್ಟವಾಯಿತು. ತನ್ನ ಸಂಪ್ರದಾಯಗಳನ್ನು ಮೀರದೆಯೇ ಸಮಾಜದಲ್ಲಿ ಕ್ರಾಂತಿ ಮಾಡುವುದಕ್ಕೆ ಅವರು ಪ್ರಯತ್ನಿಸಿದರಾದರೂ, ಅವುಗಳೆಲ್ಲವೂ ವಿವಾದ, ದ್ವಂದ್ವಗಳಲ್ಲೇ ಮುಕ್ತಾಯ ಕಂಡಿತು. ಆದುದರಿಂದಲೇ ರಾಜಕೀಯವಾಗಿ ‘ಹಿಂದುತ್ವದ ಸನ್ಯಾಸಿ’ಯಾಗಿ ಪೇಜಾವರಶ್ರೀ ಯಶಸ್ವಿಯಾದರು. ಆದರೆ ಸಾಮಾಜಿಕವಾಗಿ ಸಿದ್ದಗಂಗಾರಂತಹ ಸ್ವಾಮೀಜಿಗಳು ಸಾಧಿಸಿದ್ದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಪಂಕ್ತಿ ಭೇದ, ಮಡೆಸ್ನಾನ, ವೈಷ್ಣವ ಧೀಕ್ಷೆ, ದಲಿತರ ಕೇರಿಗೆ ಭೇಟಿ ಇವೆಲ್ಲವೂ ಯಶಸ್ವಿಯಾಗದೇ ಇರುವುದಕ್ಕೆ ಇದೇ ಕಾರಣ. ಶರಣ ಚಳವಳಿಯಿಂದ ಹಿಡಿದು, ಈ ದೇಶದಲ್ಲಿ ನಡೆದ ಎಲ್ಲ ಕ್ರಾಂತಿಗಳೂ ಸಂಪ್ರದಾಯವನ್ನು ಮುರಿಯುವ ಮೂಲಕ ನಡೆಯಿತು. ಸಮಾಜ ಸೇವೆಯನ್ನು ಅಧ್ಯಾತ್ಮವಾಗಿ ಸ್ವೀಕರಿಸಿದ ಒಬ್ಬ ಸಂತ ಅನಿವಾರ್ಯವಾಗಿ ಸಂಪ್ರದಾಯವನ್ನು ಎದುರು ಹಾಕಿಕೊಳ್ಳಲೇಬೇಕು. ಎರಡನ್ನು ಜೊತೆ ಜೊತೆಯಾಗಿ ಸಾಧಿಸುತ್ತೇನೆ ಎಂದು ಹೊರಡುವುದಿದ್ದರೆ, ಆ ಸಂಪ್ರದಾಯ ಒಂದಿಷ್ಟಾದರೂ ಜಗತ್ತಿಗೆ ತೆರೆದುಕೊಳ್ಳುವ ಅಂಶಗಳನ್ನು ತನ್ನೊಳಗೆ ರೂಢಿಸಿಕೊಂಡಿರಬೇಕು.

ಮಧ್ವ ಚಿಂತನೆಗಳನ್ನು ವಿಶ್ವ ಚಿಂತನೆಗೆ ವ್ಯಾಖ್ಯಾನಿಸುವ ಪ್ರಯತ್ನವನ್ನು ಕಟ್ಟಕಡೆಯವರೆಗೂ ವಿಶ್ವೇಶ ತೀರ್ಥರು ಮಾಡಿದರು. ಆದರೆ, ಅದನ್ನು ಕ್ರಿಯೆಗೆ ಇಳಿಸುವ ಸಂದರ್ಭದಲ್ಲಿ ಮಾತ್ರ ವಿಫಲರಾದರು. ಉಡುಪಿಗೆ ಸೀಮಿತರಾಗಿದ್ದ ಪೇಜಾವರ ಶ್ರೀಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟದ್ದು ಸೇವೆಯ ಕಾರಣದಿಂದಲ್ಲ, ರಾಮಜನ್ಮಭೂಮಿ ವಿವಾದದ ಕಾರಣದಿಂದ. ಅಲ್ಲಿಯವರೆಗೂ ಅವರು ನಾಡಿನ ಹಲವು ಚಿಂತಕರ ಜೊತೆಗೆ ಸಂಬಂಧ, ಸಂಪರ್ಕಗಳನ್ನು ಇಟ್ಟುಕೊಂಡಿದ್ದರು. ಯು. ಆರ್. ಅನಂತಮೂರ್ತಿಯಂತಹ ಲೇಖಕರ ಪಾಲಿಗೆ ಗುರುವಾಗಿದ್ದರು. ಆದರೆ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಅವರು ತೆಗೆದುಕೊಂಡ ನಿಲುವುಗಳು ಪ್ರಗತಿಪರ ಚಿಂತನೆಗಳ ಜೊತೆಗಿದ್ದ ಅವರ ಸಂಬಂಧಗಳಲ್ಲಿ ಬಿರುಕನ್ನು ತಂದವು. ಬಿಜೆಪಿಯ ರಾಜಕೀಯ ಅಗತ್ಯವಾಗಿದ್ದ ಶ್ರೀರಾಮಮಂದಿರ, ಸಕಲ ಹಿಂದೂಗಳ ಅಗತ್ಯವಾಗಿ ಬಿಂಬಿಸುವಲ್ಲಿ ಪೇಜಾವರಶ್ರೀಗಳ ಪಾತ್ರ ಬಹುದೊಡ್ಡದಿದೆ. ರಾಮಮಂದಿರ ಚಳವಳಿ ಉತ್ತರ ಭಾರತದ ಸಂತರ ನೇತೃತ್ವವನ್ನು ಹೊಂದಿತ್ತು. ದಕ್ಷಿಣ ಭಾರತದಲ್ಲಿ ಅದನ್ನು ಪ್ರತಿನಿಧಿಸಿದವರು ಪೇಜಾವರಶ್ರೀಗಳು. ದಕ್ಷಿಣ ಭಾರತದಲ್ಲಿ ಸಂಘಪರಿವಾರದ ಹಿಂದುತ್ವ ಚಿಂತನೆಗಳನ್ನು ಜಾರಿಗೆ ತರಲು ಕರ್ನಾಟಕವನ್ನು ಪ್ರಯೋಗ ಶಾಲೆಯಾಗಿಸುವ ಉದ್ದೇಶಕ್ಕೆ ಆರೆಸ್ಸೆಸ್ ಜೊತೆ ಪೇಜಾವರಶ್ರೀ ಕೈ ಜೋಡಿಸಿದರು. ಇದೇ ಸಂದರ್ಭದಲ್ಲಿ ಜಾತ್ಯತೀತ ವೇದಿಕೆಗಳಲ್ಲಿ ತಾನು ರಾಜಕೀಯ ಉದ್ದೇಶಗಳುಳ್ಳ ಸ್ವಾಮೀಜಿಯಲ್ಲ ಎನ್ನುವುದನ್ನು ಸಾಧಿಸುವಲ್ಲೂ ಪ್ರಯತ್ನ ನಡೆಸಿದರು.

ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ತಾನು ಸ್ಥಳದಲ್ಲಿದ್ದೆ ಎನ್ನುವುದನ್ನು ಒಪ್ಪಿಕೊಂಡಿರುವ ಪೇಜಾವರ ಶ್ರೀ, ಧ್ವಂಸವನ್ನು ಖಂಡಿಸುತ್ತಲೇ ಆ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಪ್ರತಿಪಾದಿಸಿದರು. ಧ್ವಂಸಗೈದವರ ಜೊತೆಗೆ ಸರ್ವ ನಂಟನ್ನೂ ಇಟ್ಟುಕೊಂಡಿದ್ದರು. ಬಾಬರಿ ಮಸೀದಿ ಧ್ವಂಸಗೊಳಿಸಿರುವುದೇ ರಾಮಮಂದಿರ ನಿರ್ಮಾಣಕ್ಕೆ ಎಂದಿರುವಾಗ, ಪೇಜಾವರ ಶ್ರೀಗಳ ಖಂಡನೆಗೆ ಏನು ಅರ್ಥ ಉಳಿಯಿತು? ಮಡೆಸ್ನಾನವನ್ನು ಕಟ್ಟ ಕಡೆಯವರೆಗೂ ಬೆಂಬಲಿಸಿದ ಶ್ರೀಗಳು, ನ್ಯಾಯಾಲಯದ ತೀರ್ಪು ಅದರ ವಿರುದ್ಧ ಬಂದಾಗ ಮಡೆ ಸ್ನಾನವನ್ನು ‘ಎಡೆ ಸ್ನಾನ’ವಾಗಿ ಪರಿವರ್ತಿಸಿದರು. ಎಲ್ಲೂ ಮಡೆಸ್ನಾನ ತಪ್ಪು ಎಂದು ಬಹಿರಂಗವಾಗಿ ಸಮಾಜಕ್ಕೆ ಕರೆ ಕೊಡುವ ಧೈರ್ಯವನ್ನು ಅವರು ತೋರಲಿಲ್ಲ. ದಲಿತರ ಕೇರಿಗೆ ಅವರ ಭೇಟಿ ಶ್ಲಾಘನೀಯ. ಆದರೆ ದಲಿತರ ಕೈಯಲ್ಲಿ ತಮ್ಮ ಪಾದಗಳನ್ನು ತೊಳೆಸಿದ ಶ್ರೀಗಳು ದಲಿತರ ಜೊತೆಗೆ ಉಣ್ಣುವುದನ್ನು ಕೊನೆಯವರೆಗೂ ನಿರಾಕರಿಸಿದರು. ರಾಮಮಂದಿರ ನಿರ್ಮಾಣಕ್ಕೆ ‘ಹಿಂದೂಗಳು ಒಂದಾಗಬೇಕು’ ಎಂದ ಕರೆ ನೀಡುತ್ತಲೇ, ಮಠದಲ್ಲಿ ಪಂಕ್ತಿಗಳನ್ನು ಒಂದು ಪಂಕ್ತಿಯಾಗಿ ಪರಿವರ್ತಿಸುವಲ್ಲಿ ಅವರು ಸೋತರು. ಮಠದಲ್ಲಿ ‘ಇಫ್ತಾರ್ ಕೂಟ’ವನ್ನು ನೆರವೇರಿಸುವ ಸಂದರ್ಭದಲ್ಲಿ ಅವರ ಮುಂದೆ ರಾಮಮಂದಿರದ ಹೆಸರಿನಲ್ಲಿ ಅವರಿಗೆ ಅಂಟಿಕೊಂಡಿರುವ ಕಳಂಕವನ್ನು ಒಂದಿಷ್ಟಾದರೂ ತೊಳೆದುಕೊಳ್ಳುವ ಬಯಕೆಯಿತ್ತು. ಆದರೆ ಅದರ ವಿರುದ್ಧ ಸಂಘಪರಿವಾರದೊಳಗಿಂದಲೇ ಆಕ್ಷೇಪಗಳು ಬಂದವು.

ಮಠದ ಇಪ್ತಾರ್‌ನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಒಂದೆಡೆ ಸರ್ವ ಹಿಂದೂಗಳ ಪ್ರತಿನಿಧಿ ಎಂದು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಲೇ, ‘ಬ್ರಾಹ್ಮಣ ಸಮುದಾಯಕ್ಕೆ ಸರಕಾರದಲ್ಲಿ ಆದ್ಯತೆ ನೀಡಬೇಕು’ ಎಂದು ಮಾಧ್ಯಮಗಳಲ್ಲಿ ಒತ್ತಾಯಿಸಿ ಟೀಕೆಗೊಳಗಾದರು. ಮಧ್ವಾಚಾರ್ಯರು ‘ಶೂದ್ರರು ನಿತ್ಯ ನಾರಕಿಗಳು(ಸದಾ ನರಕಕ್ಕೆ ಅರ್ಹರು)’ ಎಂದು ಹೇಳಿದ ಹಿನ್ನೆಲೆಯಲ್ಲಿ ಕುವೆಂಪು ಮಧ್ವ ಚಿಂತನೆಯನ್ನು ನಖಶಿಖಾಂತ ಟೀಕಿಸಿದ್ದರು. ತಮ್ಮ ‘ಭಾರತ ಜನನಿಯ ತನುಜಾತೆ’ ಪದ್ಯದಲ್ಲಿ ರಾಮಾನುಜಾಚಾರ್ಯ, ಶಂಕರಾಚಾರ್ಯರ ಸಾಲಿನಲ್ಲಿ ಮಧ್ವಾಚಾರ್ಯರನ್ನು ಸೇರಿಸಿರಲಿಲ್ಲ. ಆ ಪದ್ಯ ನಾಡಗೀತೆಯಾದಾಗ, ‘ಮಧ್ವಾಚಾರ್ಯರ ಹೆಸರನ್ನು ಹಾಕಲೇಬೇಕು’ ಎಂದು ಹಟ ಹಿಡಿದು ಅದರಲ್ಲಿ ಯಶಸ್ವಿಯಾದರು. ತಮ್ಮ ಮಠದ ಜಾತೀಯತೆ ಚರ್ಚೆಗೆ ಬಂದಾಗಲೆಲ್ಲ ‘ನೀವು ಬೇರೆ ಧರ್ಮವನ್ನು ಯಾಕೆ ಪ್ರಶ್ನಿಸುವುದಿಲ್ಲ’ ಎಂದು ಕೇಳುವ ಮೂಲಕ ಬಾಯಿ ಮುಚ್ಚಿಸುವ ಹತಾಶೆಗೂ ಅವರು ಇಳಿದಿದ್ದರು. ಸಿಎಎಯನ್ನು ಬೆಂಬಲಿಸುತ್ತಾ ‘‘ಹಿಂದೂಗಳಿಗೆ ಭಾರತ ಬಿಟ್ಟರೆ ಬೇರೆ ದೇಶಗಳಿಲ್ಲ, ಮುಸ್ಲಿಮರಿಗೆ ಬೇರೆ ದೇಶಗಳಿವೆ’’ ಎಂದು ಸಂಘಪರಿವಾರದ ನಾಯಕರಂತೆಯೇ ಹೇಳಿಕೆ ನೀಡಿದ್ದರು.

ಇಷ್ಟೆಲ್ಲ ಇದ್ದರೂ ಕಟ್ಟ ಕಡೆಯವರೆಗೆ ತಮ್ಮ ಟೀಕಾಕಾರರ ಜೊತೆಗೂ ಸೌಹಾರ್ದ ಸಂಬಂಧಗಳನ್ನು ಉಳಿಸಿಕೊಂಡಿದ್ದರು. ಸಂವಾದದ ದಾರಿಯನ್ನು ಅವರು ಎಂದೂ ಮುಚ್ಚಿರಲಿಲ್ಲ. ಆದರೆ ಅವರ ಚರ್ಚೆ, ಸಂವಾದಗಳೆಲ್ಲವೂ ಒಂದು ಹಂತದಲ್ಲಿ ಮುಂದುವರಿಯಲು ದಾರಿಗಳಿಲ್ಲದೆ ಅರ್ಧದಲ್ಲೇ ನಿಂತು ಬಿಡುತ್ತಿದ್ದವು. ಇವೆಲ್ಲದರ ನಡುವೆಯೂ ತಾನು ನಂಬಿದ ಸಿದ್ಧಾಂತ, ತತ್ವದ ಕುರಿತಂತೆ ಆಳವಾದ ಅಧ್ಯಯನ ಮಾಡಿ, ಅದನ್ನು ಸಾಮಾಜಿಕವಾಗಿ ಸಾತ್ವಿಕವಾದ ದಾರಿಯ ಮೂಲಕ ಸಮಾಜಕ್ಕೆ ಹೇಗೆ ತಲುಪಿಸಬಹುದು ಎನ್ನುವುದಕ್ಕೆ ಮಾದರಿಯಾಗಿ ಬದುಕಿ ವಿಶ್ವೇಶ ತೀರ್ಥರು ನಮ್ಮ ನಡುವಿನಿಂದ ಅಗಲಿದ್ದಾರೆ. ಅವರ ಅಗಲಿಕೆ ಮಧ್ವ ಚಿಂತನಾ ಲೋಕಕ್ಕೆ ತುಂಬಲಾರದ ನಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News