ಹುಲಿ- ಚಿರತೆಗಳಿಗೆ 2019 ಕರಾಳ ವರ್ಷ

Update: 2020-01-01 03:53 GMT

ನಾಗ್ಪುರ: ಕಳೆದ ವರ್ಷ ದೇಶದಲ್ಲಿ ಒಟ್ಟು 110 ಹುಲಿಗಳು ಹಾಗೂ 491 ಚಿರತೆಗಳು ಬಲಿಯಾಗಿದ್ದು, ಈ ಪೈಕಿ ಪ್ರತಿ ಮೂರು ಹುಲಿಗಳ ಪೈಕಿ ಒಂದು ಬೇಟೆಗೆ ಬಲಿಯಾಗಿವೆ ಎಂದು ಭಾರತದ ವನ್ಯಜೀವಿ ಸಂರಕ್ಷಣಾ ಸೊಸೈಟಿ (ಡಬ್ಲ್ಯುಪಿಎಸ್‌ಐ) ಕಲೆ ಹಾಕಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಬೇಟೆಗೆ ಒಟ್ಟು 38 ಹುಲಿಗಳು ಬಲಿಯಾಗಿವೆ. 2018ರಲ್ಲಿ 34 ಹುಲಿಗಳು ಬೇಟೆಗೆ ಬಲಿಯಾಗಿದ್ದವು. 2018ಕ್ಕೆ ಹೋಲಿಸಿದರೆ ಚಿರತೆಗಳ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. 2018ರಲ್ಲಿ 500 ಚಿರತೆಗಳು ಬಲಿಯಾಗಿದ್ದವು. ಆತಂಕಕಾರಿ ಅಂಶವೆಂದರೆ ರಸ್ತೆ ಹಾಗೂ ರೈಲು ಅಪಘಾತಗಳಲ್ಲಿ ಸಾವನ್ನಪ್ಪುವ ಸಂಖ್ಯೆ ಹೆಚ್ಚಿರುವುದು ಎಂದು ಡಬ್ಲ್ಯುಪಿಎಸ್‌ಐ ಹೇಳಿದೆ. 2018ರಲ್ಲಿ 104 ಹುಲಿಗಳು ಸಾವನ್ನಪ್ಪಿದ್ದರೆ, ಕಳೆದ ವರ್ಷ ಈ ಸಂಖ್ಯೆಯಲ್ಲಿ ಅಲ್ಪ ಹೆಚ್ಚಳವಾಗಿದ್ದು, 110 ಹುಲಿಗಳು ಸತ್ತಿವೆ.

"ರಸ್ತೆ ಹಾಗೂ ರೈಲು ಅಪಘಾತಗಳಲ್ಲಿ ಚಿರತೆಗಳು ಅಧಿಕ ಸಂಖ್ಯೆಯಲ್ಲಿ ಜೀವ ಕಳೆದುಕೊಳ್ಳಲು ಪ್ರಮುಖ ಕಾರಣವೆಂದರೆ ಸಂಚಾರ ಪ್ರಮಾಣ ಹೆಚ್ಚಿರುವುದು ಮಾತ್ರವಲ್ಲದೇ ರಸ್ತೆಗಳ ಅಗಲೀಕರಣದಿಂದಾಗಿ ವಾಹನಗಳ ವೇಗ ಹೆಚ್ಚಿರುವುದು" ಎಂದು ಡಬ್ಲ್ಯುಪಿಎಸ್‌ಐ ಕೇಂದ್ರ ಭಾರತದ ನಿರ್ದೇಶಕ ನಿತಿನ್ ದೇಸಾಯಿ ಹೇಳುತ್ತಾರೆ.

ಮಧ್ಯಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ (29) ಹುಲಿಗಳು ಮೃತಪಟ್ಟಿದ್ದರೆ, ಮಹಾರಾಷ್ಟ್ರ (22) ನಂತರದ ಸ್ಥಾನದಲ್ಲಿದೆ. 2018ರಲ್ಲಿ ಕೂಡಾ ಕ್ರಮವಾಗಿ 23 ಹಾಗೂ 19 ಹುಲಿಗಳು ಈ ಎರಡು ರಾಜ್ಯಗಳಲ್ಲಿ ಬಲಿಯಾಗಿದ್ದವು.

ಕರ್ನಾಟಕದಲ್ಲಿ 12, ಉತ್ತರಾಖಂಡದಲ್ಲಿ 12, ಉತ್ತರ ಪ್ರದೇಶ 6, ರಾಜಸ್ಥಾನ 3 ಹಾಗೂ ಕೇರಳದಲ್ಲಿ ಮೂರು ಹುಲಿಗಳು ಸತ್ತಿವೆ. ಕರ್ನಾಟಕದಲ್ಲಿ 2018ರಲ್ಲಿ 16 ಹುಲಿಗಳು ಮೃತಪಟ್ಟಿದ್ದರೆ, 2019ರಲ್ಲಿ ಈ ಪ್ರಮಾಣ ಇಳಿಕೆಯಾಗಿದೆ.

ಒಟ್ಟು 110 ಹುಲಿಗಳ ಪೈಕಿ 38 ಹುಲಿಗಳು ಬೇಟೆಗೆ ಬಲಿಯಾಗಿವೆ. 26 ಸಹಜ ಸಾವನ್ನಪ್ಪಿದ್ದು, 36 ಹುಲಿಗಳು ಇತರ ಹುಲಿಗಳ ಜತೆಗಿನ ಕಾದಾಟದಲ್ಲಿ ಜೀವ ಕಳೆದುಕೊಂಡಿವೆ. ಮೂರು ಹುಲಿಗಳು ರಸ್ತೆ/ರೈಲು ಅಪಘಾತದಲ್ಲಿ ಮೃತಪಟ್ಟಿದ್ದರೆ, ಆರು ಹುಲಿಗಳು ರಕ್ಷಣಾ ಕಾರ್ಯಾಚರಣೆ ವೇಳೆ ಸಾವನ್ನಪ್ಪಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News