​ವೇಶ್ಯಾಗೃಹದಿಂದ ನೌಕಾಪಡೆ ಸೈನಿಕರಿಬ್ಬರ ಬಂಧನ

Update: 2020-01-01 04:08 GMT

ಕಾರವಾರ: ನಗರ ಹೊರವಲಯದ ವೇಶ್ಯಾಗೃಹವೊಂದರ ಮೇಲೆ ದಾಳಿ ಮಾಡಿದ ಪೊಲೀಸರು ನೌಕಾಪಡೆಯ ಇಬ್ಬರು ಯೋಧರನ್ನು ಬಂಧಿಸಿದ್ದಾರೆ.

ಬಂಧಿತ ಸಿಬ್ಬಂದಿ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಉದ್ಯೋಗದಲ್ಲಿದ್ದರು ಎಂದು ತಿಳಿದುಬಂದಿದೆ. ವೇಶ್ಯಾಗೃಹದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಮಹಿಳೆಯನ್ನು ರಕ್ಷಿಸಿ ವೇಶ್ಯಾಗೃಹದ ಮಾಲಕಿ ಪ್ರಭಾವತಿ ನಾಯಕ್ ಎಂಬಾಕೆಯನ್ನೂ ಬಂಧಿಸಲಾಗಿದ್ದು, ಪೊಲೀಸರನ್ನು ಕಂಡು ಆಕೆಯ ಪತಿ ಪಾಂಡುರಂಗ ನಾಯಕ್ (69) ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಂಡುರಂಗ ನಾಯಕ್ ಹಾಗೂ ಆತನ ಪತ್ನಿಯನ್ನು ಈ ಹಿಂದೆ ಇಂಥದ್ದೇ ಆರೋಪದಲ್ಲಿ ಬಂಧಿಸಲಾಗಿತ್ತು. ನೌಕಾಪಡೆ ಯೋಧರು ಸೇರಿದಂತೆ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜ.12ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹನಿಟ್ರ್ಯಾಪ್‌ನಂಥ ವಿವಾದದ ನಡುವೆಯೇ ವೇಶ್ಯಾಗೃಹದಲ್ಲಿ ನೌಕಾಪಡೆ ಯೋಧರು ಪತ್ತೆಯಾಗಿರುವ ಬೆನ್ನಲ್ಲೇ ರಕ್ಷಣಾ ಸಚಿವಾಲಯ ಆದೇಶ ಹೊರಡಿಸಿ, ಯುದ್ಧನೌಕೆ, ಡಕ್‌ಯಾರ್ಡ್ ಮತ್ತು ಇತರ ಸೂಕ್ಷ್ಮ ರಕ್ಷಣಾ ನೆಲೆಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ನಿಷೇಧಿಸಿದೆ.

ಡಿ. 20ರಂದು ಆಂಧ್ರಪ್ರದೇಶ ಪೊಲೀಸರು ಐಎನ್‌ಎಸ್ ಕದಂಬ ನೆಲೆಯ ಮೂವರು ಸಿಬ್ಬಂದಿಯನ್ನು ಬೇಹುಗಾರಿಕೆ ಆರೋಪದಲ್ಲಿ ಬಂಧಿಸಿದ್ದರು. ಬಂಧಿತ ಸೈನಿಕರು ಪಾಕಿಸ್ತಾನಿ ಬೇಹುಗಾರಿಕೆ ಏಜೆನ್ಸಿಯ ಹನಿಟ್ರ್ಯಾಪ್‌ಗೆ ಬಲಿಯಾಗಿ ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಗಳನ್ನು ರವಾನಿಸುತ್ತಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News