ಗಡಿ ವಿಚಾರದಲ್ಲಿ ಉದ್ಧವ್ ಉದ್ಧಟತನದ ವರ್ತನೆ: ನಾಡೋಜ ಡಾ.ಎಂ. ಚಿದಾನಂದಮೂರ್ತಿ

Update: 2020-01-02 15:25 GMT

ಬೆಂಗಳೂರು, ಜ.2: ಮಹಾರಾಷ್ಟ್ರದಲ್ಲಿ ಸದ್ಯ ಗಡಿ ವಿಚಾರ ಸಂಪುಟ ವಿಸ್ತರಣೆಗಿಂತ ಹೆಚ್ಚು ಸದ್ದು ಮಾಡುತ್ತಿದೆ. ಸಿಎಂ ಉದ್ಧವ್ ಠಾಕ್ರೆ ಅವರು, ಈ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇದೆ ಎನ್ನುವುದನ್ನೂ ಮರೆತು ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ನಾಡೋಜ ಡಾ. ಎಂ. ಚಿದಾನಂದಮೂರ್ತಿ ಕಿಡಿಕಾರಿದ್ದಾರೆ.

ಗುರುವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಗಡಿಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಿ ಗಡಿ ಉಸ್ತುವಾರಿಗೆ ಇಬ್ಬರು ಸಚಿವರನ್ನು ನೇಮಕ ಮಾಡಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್‌ನ ಪ್ರಕರಣಕ್ಕೆ ಚುರುಕು ನೀಡುವುದರ ಜೊತೆಗೆ, ಭಾಷಾ ಅಸ್ಮಿತೆಯ ವಿಚಾರವಾಗಿ ಮರಾಠಿಗರನ್ನು ಹಿಡಿದಿಡುವ ಪ್ರಯತ್ನ ಆರಂಭಿಸಿದ್ದಾರೆ ಎಂದರು.

ಸಿಎಂ ಉದ್ದವ್ ಠಾಕ್ರೆ ಗಡಿ ವಿಚಾರದಲ್ಲಿ ತುಂಬ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಈ ವಿಚಾರದಲ್ಲಿ ಉದ್ಘಟತನದ ಹೇಳಿಕೆಯನ್ನು ಉದ್ದವ್ ಠಾಕ್ರೆ ನೀಡದೆ ಗಡಿ ಭಾಗದಲ್ಲಿ ಶಾಂತಿ ಸಾಮರಸ್ಯದ ವಾತಾವರಣ ನಿರ್ಮಿಸಲಿ ಎಂದು ತಿಳಿಸಿದರು.

ಕನ್ನಡಿಗರು ಶಾಂತಿ ಪ್ರಿಯರು. ಆದರೆ ಸಮಯ ಬಂದರೆ ಕ್ರಾಂತಿ ಮಾಡಲು ಸಿದ್ಧ. ಈಗಾಗಲೇ ಕರ್ನಾಟಕ ಸರಕಾರವು ಬೆಳಗಾವಿ ಬಗೆಗಿನ ತನ್ನ ನಿಲುವನ್ನು ಸ್ಪಷ್ಟಪಡಿಸಿ ಅದು ಎಂದೆಂದೂ ಕರ್ನಾಟಕದಲ್ಲೇ ಇರುತ್ತದೆ ಎಂಬ ದೃಢ ನಿರ್ಧಾರವನ್ನು ಘೋಷಿಸುವುದು ಅತ್ಯಂತ ಸಮಂಜಸವಾಗಿದೆ ಎಂದು ತಿಳಿಸಿದರು.

ಈಗಿನ ಮಹಾರಾಷ್ಟ್ರ ಎಂಬುದು ಸಾವಿರ ವರ್ಷಗಳ ಹಿಂದೆ ಕನ್ನಡ ಮಾತನಾಡುವ ಪ್ರದೇಶವಾಗಿತ್ತು. ಬಾಲ ಗಂಗಾಧರ ತಿಲಕರು ಸ್ವಾತಂತ್ರಪೂರ್ವದಲ್ಲಿ ಬೆಳಗಾವಿ ಜಿಲ್ಲೆಯ ಗುರಲ್ ಹೊಸೂರಿನಲ್ಲಿ ಮಾತನಾಡಿ ಮರಾಠಿಗರ, ಕನ್ನಡಿಗರ ರಕ್ತ ಭಾಷೆ ಒಂದೇ ಎಂದು ಘೋಷಿಸಿದ್ದು, ಇಂದಿಗೂ ಉಲ್ಲೇಖವಿದೆ. ಬ್ರಿಟಿಷರ ಕಾಲದ ಮುಂಬೈ ಸರಕಾರವು ಪ್ರಕಟಿಸಿರುವ ಶಾಲಾ ಪಠ್ಯ ಪುಸ್ತಕದಲ್ಲಿ ಕರ್ನಾಟಕ ನಕಾಶವೂ ಎಂಬ ನಕ್ಷೆಯಿದ್ದು ಅದರಲ್ಲಿ ಬೆಳಗಾವಿಯೂ ಕರ್ನಾಟಕದ ಭಾಗವಾಗಿದೆ ಎಂದರು.

ಭಾರತಕ್ಕೆ ಸ್ವಾತಂತ್ರ ಬಂದ ನಂತರ ಭಾರತವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಂಗಡಿಸಲು ನೇಮಕವಾದ ಫಜಲ್ ಅಲಿ ನಿಯೋಗವು 1956ರಲ್ಲಿ ಚಂದ್ರಘಡ ಬಿಟ್ಟು ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರಿಸಿತು. ಆದರೆ, ಅದನ್ನು ಮಹಾರಾಷ್ಟ್ರ ಸರಕಾರವು ಒಪ್ಪದೇ ಇದ್ದುದ್ದರಿಂದ 1967ರಲ್ಲಿ ಕರ್ನಾಟಕ-ಮಹಾರಾಷ್ಟ್ರ ಎರಡೂ ಸರಕಾರಗಳ ಒಪ್ಪಿಗೆ ಪಡೆದು ನ್ಯಾಯಮೂರ್ತಿ ಮಹಾಜನ್ ಆಯೋಗವು ಅಸ್ತಿತ್ವಕ್ಕೆ ಬಂದಿತು. ಬೆಳಗಾವಿ ತನಗೆ ಸೇರದಿರುವ ಕಾರಣಕ್ಕೆ ಮಹಾಜನ್ ಆಯೋಗದ ವರದಿಯನ್ನು ಒಪ್ಪದ ಮಹಾರಾಷ್ಟ್ರ ಸರಕಾರವು 2004ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದೆ. ಆದರೆ, ಆ ದಾವೆ ಇನ್ನೂ ಇತ್ಯರ್ಥವಾಗಿಲ್ಲ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News