ಸಿಎಎ- ಎನ್‌ಆರ್‌ಸಿಗೆ ವಿರೋಧ: ಮಹಿಳಾ ಕಾಂಗ್ರೆಸ್ ನಿಂದ ಮೈಸೂರಿನಲ್ಲಿ 'ರಂಗೋಲಿ ಪ್ರತಿಭಟನೆ'

Update: 2020-01-02 16:26 GMT

ಮೈಸೂರು,ಜ.2: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿಯನ್ನು ವಿರೋಧಿಸಿ ಕರ್ನಾಟಕ ಮಹಿಳಾ ಕಾಂಗ್ರೆಸ್ ವತಿಯಿಂದ ರಂಗೋಲಿ ಬಿಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.

ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಗುರುವಾರ ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಜಮಾಯಿಸಿದ ಮಹಿಳೆಯರು ಓಂ, ನೋ ಸಿಎಎ, ಎನ್‌ಆರ್‌ಸಿ ಮತ್ತು ಎನ್‍ಪಿಆರ್, ಗೋ ಬ್ಯಾಕ್ ಮೋದಿ ಎಂದು ಬರೆಯುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ದೇಶದಲ್ಲಿ ಮಹಿಳೆಯರು,ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ರಕ್ಷಣೆಯೆ ಇಲ್ಲದಂತಾಗಿದೆ. ದಿನ ನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಕೊಲೆಗಳು ನಡೆಯುತ್ತಿವೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಪ್ರಧಾನಿ ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೆ ತರಲು ಮುಂದಾಗಿದ್ದಾರೆ. ಇದೊಂದು ಮಹಿಳಾ ವಿರೋಧಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಕ್ಕೆ ಧಕ್ಕೆ ತರುವ ಕಾನೂನುಗಳನ್ನು ಜಾರಿಮಾಡಲಾಗುತ್ತಿದೆ. ಪ್ರಜೆಗಳ ಹಿತಾಸಕ್ತಿಗಿಂತ ಕಾರ್ಪೋರೇಟ್ ಕಂಪನಿ ಮಾಲಕರ ಹಿತ ಮುಖ್ಯವಾಗಿದೆ. ನೋಟ್ ಬ್ಯಾನ್ ಮಾಡಿ ಸಾಕಷ್ಟು ತೊಂದರೆಯನ್ನು ಜನರಿಗೆ ನೀಡಿದ್ದಾರೆ. ಜಿಎಸ್‍ಟಿ ತಂದು ಜನರ ಬದುಕನ್ನು ಅತಂತ್ರಗೊಳಿಸಲಾಗಿದೆ. ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಜಾರಿಗೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಸಿಎಎ ಮತ್ತು ಎನ್‌ಆರ್‌ಸಿ ಜಾರಿಯಾದರೆ ಮುಸ್ಲಿಮರಿಗಷ್ಟೆ ಅಲ್ಲ ದಲಿತರು, ಬುಡಕಟ್ಟು ಜನರು, ಹಿಂದುಳಿದವರು ಮತ್ತು ಸಣ್ಣ ಸಣ್ಣ ಜಾತಿಗಳಿಗೆ ತೊಂದರೆಯಾಗಲಿದೆ. ದೇಶದಲ್ಲಿ ಹುಟ್ಟಿ ಮತದಾನದ ಹಕ್ಕನ್ನು ಪಡೆದು ಸೌಲಭ್ಯಗಳನ್ನು ಪಡೆಯುತ್ತಿರುವವರಿಗೆ ಕಾಗದದ ದಾಖಲೆ ಕೇಳುತ್ತಿರುವುದು ಎಷ್ಟು ಸರಿ ಎಂದು ಜರಿದರು.

ಪ್ರತಿಭಟನೆಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲತಾ ಮೋಹನ್, ಉಪಾಧ್ಯಕ್ಷೆ ಪುಷ್ಪವಲ್ಲಿ, ಮೋದಾಮಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

"ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ"

ಸಿಎಎ ಎನ್‌ಆರ್‌ಸಿ ವಿರೋಧಿಸಿ ರಂಗೋಲಿ ಬಿಟ್ಟು ಪ್ರತಿಭಟಿಸುತ್ತಿದ್ದೇವೆ. ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.

ಕೇರಳದಲ್ಲಿ ಐವರು ವಿದ್ಯಾರ್ಥಿಗಳು ಸಿಎಎ, ಎನ್‌ಆರ್‌ಸಿ ವಿರೋಧಿಸಿ ರಂಗೋಲಿ ಬಿಟ್ಟು ಪ್ರತಿಭಟಿಸಿದರು ಎಂಬ ಕಾರಣಕ್ಕೆ ಬಂಧಿಸಲಾಗಿದೆ. ನಾವೂ ಸಹ ರಂಗೋಲಿ ಬಿಡುವ ಮೂಲಕ ಪ್ರತಿಭಟಿಸಿದ್ದೇವೆ. ನಿಮಗೆ ತಾಕತ್ತಿದ್ದರೆ ಬಂಧಿಸಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News