ಅನುದಾನವಿಲ್ಲದೆ 849 ರಸ್ತೆಗಳ ಕಾಮಗಾರಿ ಸ್ಥಗಿತ: ಡಿಸಿಎಂ ಗೋವಿಂದ ಕಾರಜೋಳ

Update: 2020-01-04 18:30 GMT

ಬೆಂಗಳೂರು, ಜ. 4: ಹಿಂದಿನ ಸರಕಾರ ಕೇಂದ್ರದ ಅನುದಾನದಡಿ ಕೈಗೊಂಡಿದ್ದ ಒಟ್ಟು 5,700 ಕೋಟಿ ರೂ.ವೆಚ್ಚದ 7,685 ಕಿ.ಮೀ.ಉದ್ಧದ ಒಟ್ಟು 849 ರಸ್ತೆಗಳ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಸಿಆರ್‌ಎಫ್ ಅನುದಾನದಡಿ(ಸೆಸ್) ಮೇಲ್ಕಂಡ ರಸ್ತೆಗಳ ಕಾಮಗಾರಿಗಳನ್ನು ಹಿಂದಿನ ಸರಕಾರ ಕೈಗೊಂಡಿತ್ತು. ಆದರೆ, ಕೇಂದ್ರ ಸರಕಾರ ವಾರ್ಷಿಕ 500 ಕೋಟಿ ರೂ.ಗಳನ್ನಷ್ಟೇ ನೀಡುತ್ತಿದೆ. ಅಲ್ಲದೆ, ‘ಇನ್ನು ಮುಂದೆ ನಾವು ಅನುದಾನ ಕೇಳುವುದಿಲ್ಲ’ ಎಂದು ಕೇಂದ್ರಕ್ಕೆ ಹಿಂದಿನ ಸರಕಾರ ಮುಚ್ಚಳಿಕೆ ಬರೆದುಕೊಟ್ಟಿದ್ದರ ಪರಿಣಾಮ ಅನುದಾನವಿಲ್ಲದೆ ಹಲವು ರಸ್ತೆಗಳ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಪ್ರವಾಹ ಸ್ಥಿತಿ ಹಿನ್ನೆಲೆಯಲ್ಲಿ 30ಸಾವಿರ ಕೋಟಿ ರೂ.ಗಳಷ್ಟು ಸರಕಾರಕ್ಕೆ ಹೊರೆಯಾಗಿದೆ. ಹೀಗಾಗಿ ತೊಂದರೆಯುಂಟಾಗಿದೆ ಎಂದರು.

ರಸ್ತೆ ಅಭಿವೃದ್ಧಿಗೆ 3,649 ಕೋಟಿ ರೂ.: ಇಲಾಖೆಗೆ 2019-20ನೆ ಸಾಲಿನಲ್ಲಿ ಒಟ್ಟು 9,549 ಕೋಟಿ ರೂ.ಅನುದಾನ ನಿಗದಿಯಾಗಿದ್ದು, 2019ರ ಅಂತ್ಯಕ್ಕೆ 3,649 ಕೋಟಿ ರೂ.ಗಳ ವೆಚ್ಚ ಮಾಡಲಾಗಿದ್ದು, ಶೇ.60ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ವಿವರಿಸಿದರು.

ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ ಒಟ್ಟು 691 ಕೋಟಿ ರೂ.ಅನುದಾನವನ್ನು ಮೀಸಲಿಟ್ಟಿದ್ದು, ಆ ಪೈಕಿ 193 ಕೋಟಿ ರೂ.ವೆಚ್ಚ ಮಾಡಲಾಗಿದೆ. ಒಟ್ಟು 43,388 ಕಿಮೀ ಉದ್ದದ ರಸ್ತೆ ಗುಂಡಿ ಮುಚ್ಚುವ ಗುರಿ ಹೊಂದಲಾಗಿದ್ದು, ಅದರಲ್ಲಿ 39,041 ಕಿ.ಮೀ(ಶೇ.90) ಪೂರ್ಣಗೊಂಡಿದೆ.

ಕೆಶಿಪ್ ಯೋಜನೆ: ಕೆಶಿಪ್-3 ಎಡಿಬಿ-2ರಡಿ 5,334ಕೋಟಿ ರೂ.ವೆಚ್ಚದಲ್ಲಿ ಬೆಂಗಳೂರು-ಮಾಗಡಿ-ಕುಣಿಗಲ್, ಹೊನ್ನಾಳ್ಳಿ-ಗದಗ, ಚಿಂತಾಮಣಿ-ಆಂಧ್ರ ಗಡಿ ಹಾಗೂ ಕೊಳ್ಳೇಗಾಲ-ಹನೂರು ಮಾರ್ಗ ಸೇರಿ(ಎಂಟು ವರ್ಷ ನಿರ್ವಹಣೆ ಸಹಿತ) 418 ಕಿ.ಮೀ ಉದ್ದದ 5 ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಕಾಮಗಾರಿ ಪ್ರಾರಂಭಿಸಲು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ತಿಂಗಳ ಅಂತ್ಯಕ್ಕೆ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಕರಾರಿನಂತೆ ಎರಡು ವರ್ಷಗಳ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ ಎಂದು ಕಾರಜೋಳ ತಿಳಿಸಿದರು.

ಕೆಆರ್‌ಡಿಸಿಎಲ್ ವತಿಯಿಂದ ಬೆಂಗಳೂರು ಸುತ್ತಮುತ್ತ ವಾಹನ ದಟ್ಟಣೆ ತಗ್ಗಿಸಲು ಒಟ್ಟು 155 ಕಿಮೀ 4 ರಸ್ತೆಗಳ ಅಭಿವೃದಿಗೆ 10 ಪ್ಯಾಕೇಜ್‌ಗಳಲ್ಲಿ 2,095 ಕೋಟಿ ರೂ.ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದೆ. ಆ ಪೈಕಿ 545 ಕೋಟಿ ರೂ.ಗಳನ್ನು ಭೂ ಸ್ವಾಧೀನಕ್ಕಾಗಿ ಮೀಸಲಿಡಲಾಗಿದೆ ಎಂದರು.

ವೆಬ್‌ಸೈಟ್ ಸಿದ್ಧ: ರಸ್ತೆ, ಅಭಿವೃದ್ಧಿ ಕಾಮಗಾರಿಗಳು ಸೇರಿ ಲೋಕೋಪಯೋಗಿ ಇಲಾಖೆ ಸಮಗ್ರ ವಿವರಗಳು ಜನರಿಗೆ ಲಭ್ಯವಾಗುವಂತೆ ಇಲಾಖೆ ವೆಬ್‌ಸೈಟ್ ಪರಿಷ್ಕರಿಸಲಾಗಿದೆ. ಜನವರಿ 15ರಿಂದ ಇಲಾಖೆ ಪ್ರಾರಂಭದ ದಿನದಿಂದ ಈವರೆಗಿನ ಎಲ್ಲ ಮಾಹಿತಿ ಸಾರ್ವಜನಿಕರಿಗೆ ಸಿಗಲಿದೆ ಎಂದರು.

‘ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ ಒಟ್ಟು 1227ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಆ ಪೈಕಿ 320 ಕೋಟಿ ರೂ.ವೆಚ್ಚ ಮಾಡಲಾಗಿದ್ದು, ಉಳಿದ ಮೊತ್ತವನ್ನು ಆರ್ಥಿಕ ವರ್ಷದಲ್ಲೆ ಪೂರ್ಣ ವೆಚ್ಚ ಮಾಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’

-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News