ಬೆದರಿಕೆ ವೀಡಿಯೊ: ವಿಜಯವರ್ಗೀಯ ಸೇರಿ 350 ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ

Update: 2020-01-05 17:52 GMT

ಇಂದೋರ (ಮ.ಪ್ರ), ಜ.5: ಸರಕಾರಿ ಅಧಿಕಾರಿಗಳಿಗೆ ಬೆದರಿಕೆಯೊಡ್ಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಸೇರಿದಂತೆ ಸುಮಾರು 350 ಬಿಜೆಪಿ ಕಾರ್ಯಕರ್ತರ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶುಕ್ರವಾರ ಇಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆ ಸಂದರ್ಭ ಚಿತ್ರೀಕರಿಸಿದ್ದೆನ್ನಲಾದ ಈ ವೀಡಿಯೊ ವಿಜಯವರ್ಗೀಯ ಅವರು,‘ನಮ್ಮ ಸಂಘ (ಆರೆಸ್ಸೆಸ್) ನಾಯಕರು ಇಲ್ಲಿದ್ದಾರೆ,ಇಲ್ಲದಿದ್ದರೆ ಇಂದು ನಾವು ಇಂದೋರಿಗೆ ಬೆಂಕಿ ಹಚ್ಚುತ್ತಿದ್ದೆವು’ ಎಂದು ಹೇಳುತ್ತಿರುವುದನ್ನು ತೋರಿಸಿದೆ.

ಸಂಘಟನೆಯ ಆಂತರಿಕ ಸಮಾವೇಶಕ್ಕಾಗಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಇತರ ಹಿರಿಯ ನಾಯಕರು ಗುರುವಾರದಿಂದ ಇಂದೋರಿನಲ್ಲಿದ್ದರು.

ಸರಕಾರಿ ಅಧಿಕಾರಿಗಳು ಪಕ್ಷಪಾತ ಧೋರಣೆಯನ್ನು ಹೊಂದಿದ್ದಾರೆ ಮತ್ತು ಪಕ್ಷದ ಕಾರ್ಯಕರ್ತರ ವಿರುದ್ಧ ರಾಜಕೀಯ ಪ್ರೇರಿತ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

 ತಹಶೀಲ್ದಾರರ ದೂರಿನ ಮೇರೆಗೆ ವಿಜಯವರ್ಗೀಯ ಮತ್ತು ಇಂದೋರಿನ ಬಿಜೆಪಿ ಸಂಸದ ಶಂಕರ ಲಾಲ್ವಾನಿ ಸೇರಿದಂತೆ ಸುಮಾರು 350 ಜನರ ವಿರುದ್ಧ ಶನಿವಾರ ತಡರಾತ್ರಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಸಂಯೋಗಿತಾಗಂಜ್ ಪೊಲೀಸ್ ಠಾಣಾಧಿಕಾರಿ ನರೇಂದ್ರ ಸಿಂಗ್ ರಘುವಂಶಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News