ಪೌರತ್ವ ಕಾಯ್ದೆಯು ತಾಯಿಯೇ ಮಗನಿಗೆ 'ನೀನು ಯಾರು' ಎಂದು ಕೇಳಿದಂತಿದೆ: ಸಸಿಕಾಂತ್ ಸೆಂಥಿಲ್

Update: 2020-01-07 17:38 GMT

ಜೇವರ್ಗಿ: ಪ್ರಸ್ತುತ ಕೇಂದ್ರ ಸರ್ಕಾರ ತರಲು ಹೊರಟಿರುವ ಪೌರತ್ವ ಕಾಯ್ದೆಯು ತಾಯಿಯೇ ಮಗನಿಗೆ 'ನೀನು ಯಾಎಉ' ಎಂದು ಕೇಳಿದಂತಿದೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು. ಪಟ್ಟಣದ ಮೆಹಬೂಬ ಪಂಕ್ಷನ್ ಹಾಲ್ ನಲ್ಲಿ ಮಂಗಳವಾರ  ಜೇವರ್ಗಿ ಪೀಪಲ್ಸ್ ಫೋರಂ ವತಿಯಿಂದ ಆಯೋಜಿಸಿದ್ದ ಪೌರತ್ವ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ದೇಶದ ಪ್ರಧಾನ ಮಂತ್ರಿಗಳು ಬರೀ ಮಾತೆತ್ತಿದರೆ ಪಾಕಿಸ್ತಾನದ ಹೆಸರು ತೆಗೆದುಕೊಳ್ಳುತ್ತಾರೆ. ಅದೇ ಚೀನಾ, ಅಮೆರಿಕದ ಹೆಸರು ಯಾಕೆ ತೆಗೆದುಕೊಂಡು ಚಾಲೆಂಜ್ ಮಾಡುವುದಿಲ್ಲ ಎಂದು ಪ್ರಶ್ನಿಸಿದರು. ಪಾಕಿಸ್ತಾನಕ್ಕೆ ಬೈದರೆ ಭಾರತದ ಪ್ರಜೆಗಳು ಮತ ಹಾಕುತ್ತಾರೆ ಎನ್ನುವ ಕಾರಣಕ್ಕಾಗಿಯೇ ಪಾಕಿಸ್ತಾನವನ್ನು ಬೈಯುತ್ತಾರೆ ಹೊರತು ಅಭಿವೃದ್ಧಿ ದೃಷ್ಟಿಯಿಂದಲ್ಲ. ರಾಷ್ಟ್ರ ವಿರೋಧಿ ಜನವಿರೋಧಿ ನೀತಿಗಳನ್ನು ತರುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ.  

ಎನ್ ಆರ್ ಸಿಯಿಂದ ಅತಿ ಹೆಚ್ಚು ಮಹಿಳೆಯರಿಗೆ ತೊಂದರೆಯಾಗುತ್ತದೆ. ಪ್ರಸ್ತುತ ಸರಕಾರ ಅರ್ಥಶಾಸ್ತ್ರಜ್ಞರು ಕೊಡುವ ಸಲಹೆಯನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ.  ಹಿಟ್ಲರ್ ನಂತೆಯೇ ಈ ಸರ್ಕಾರವಿದೆ. ಇವತ್ತು ನಾವು ಪ್ರತಿಭಟಿಸದಿದ್ದರೆ ಇತಿಹಾಸ ನಮ್ಮನ್ನು ಕ್ಷಮಿಸಲ್ಲ. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ವಿರುದ್ಧವಿರುವ ಯಾವುದೇ ಕಾನೂನು ಬಂದರೂ ಅದನ್ನು ನಾವು ವಿರೋಧಿಸುತ್ತೇವೆ. ಈ ಕಾಯ್ದೆ ವಿರೋಧಿಸಿ ದಲಿತರು, ಮುಸ್ಲಿಮರು, ಹಿಂದುಳಿದವರು ಕೂಡಿ ಸಂಘಟನೆ ಮಾಡಿದ್ದರಿಂದ ಕೇಂದ್ರದ ಮೈ ಉರಿಯುತ್ತಿದೆ. ದಲಿತರು ಮುಸ್ಲಿಮರು ಹಿಂದುಳಿದವರು ಸಹಪಂಕ್ತಿ ಭೋಜನ, ಹಾಡು ಹಾಡುವುದರ ಮೂಲಕ ಸಂಘಟನೆ ಮಾಡಿ ಹೋರಾಟ ಮಾಡಿ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೋಪದಿಂದಲ್ಲ, ಧೈರ್ಯದಿಂದ ಎದುರಿಸಿ. ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಿದ್ಧರಾಗಿ. ಅಂದು ಬ್ರಿಟಿಷರು, ಇಂದು ಮನುವಾದಿಗಳು. ಮನುವಾದಿಗಳು ಬೇಡ ಅಂದಿದ್ದೆ ನಾವು ಮಾಡಿ ತೋರಿಸಬೇಕಾಗಿದೆ ಎಂದು ಸಶಿಕಾಂತ್ ಸೆಂಥಿಲ್ ನೆರೆದಿದ್ದ ಜನರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಡಾ ಸಂಪತ್ ಕುಮಾರ್, ಮಲ್ಲಣ್ಣ ಕೊಡಚಿ, ಮಲ್ಲಿಕಾರ್ಜುನ ದಿನ್ನಿ, ಶಂಕರ ಕಟ್ಟಿ ಸಂಗಾವಿ, ಡಾ. ಮಹೇಶ್ ರಾಠೋಡ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಜಾಕ್ ಮನಿಯಾರ್, ರಾಜು ಮುದ್ದಡಗಿ, ಶ್ರೀಹರಿ ಕರಕಿಹಳ್ಳಿ, ಆರ್. ಬಿ ಭಂಡಾರಿ, ಸಿದ್ದು ಜನಿವಾರ, ಎಸ್.ಡಿ.ಪಿ.ಐನ ಸೊಹೇಲ್, ಬೆಣ್ಣೆಪ್ಪ ಕೊಂಬಿನ್,  ಡಾ.ಅಶೋಕ್ ದೊಡ್ಮನಿ, ನಿಜಲಿಂಗ ದೊಡ್ಮನಿ, ಬಾಬಾ ಪಟೇಲ್ ಮುತ್ತಕೋಡ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News