ಸಿಎಎ ಭಾರತೀಯರು -ಸರಕಾರದ ನಡುವಿನ ಸಮಸ್ಯೆ: ಹಿರಿಯ ಪತ್ರಕರ್ತ ಹನೀಫ್

Update: 2020-01-07 18:34 GMT

ಸಿದ್ದಾಪುರ, ಜ.7: ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರ ಕಾಂಗ್ರೆಸ್, ಬಿಜೆಪಿ ಅಥವಾ ಹಿಂದೂ, ಮುಸ್ಲಿಮರ ನಡುವಿನ ವಿಚಾರ ಅಲ್ಲ. ಬದಲಾಗಿ ಭಾರತೀಯರು ಮತ್ತು ಭಾರತ ಸರಕಾರದ ನಡುವಿನ ವಿಚಾರ ಎಂದು ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಅಭಿಪ್ರಾಯಪಟ್ಟಿದ್ದಾರೆ.

ಕೊಂಡಂಗೇರಿಯ ಶಾದಿ ಮಹಲ್‌ನಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್ ಕೊಡಗು ಜಿಲ್ಲೆಯ ಅಧ್ಯಕ್ಷ ಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೋಸ್ ಕಿಲ್ಲೂರು ತಂಙಳ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾರಣ ಮತ್ತು ಪರಿಣಾಮಗಳು ವಿಚಾರೋಷ್ಠಿಯಲ್ಲಿ ಅವರು ಮಾತನಾಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವ ವಿಧಾನ ಹಾಗೂ ಇದರಲ್ಲಿ ಎದ್ದಿರುವ ಪ್ರಶ್ನೆಗಳಲ್ಲಿ ತುಂಬಾ ಅನುಮಾನಗಳಿದೆ. ಅನುಮಾನಗಳನ್ನು ಸರಕಾರ ಮುಂದೆ ನಿಂತು ಪರಿಹರಿಸಬೇಕಾಗಿದೆ. ಸರಕಾರ ಎಲ್ಲಾ ಪ್ರಜೆಗಳಿಗೂ ಸೇರಿದ್ದಾಗಿದೆ. ಅನುಮಾನಗಳ ಬಗ್ಗೆ ಸರಕಾರವು ಅಧಿಕಾರಿಗಳ ಮೂಲಕ ಪಾರದರ್ಶಕವಾಗಿ ಜನರಿಗೆ ತಿಳಿ ಹೇಳಬೇಕಾಗಿದೆ. ಜನರ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿದೆ. ಇದು ಸರಕಾರದಿಂದ ನಡೆಯುತ್ತಿಲ್ಲ. ಪರಿಣಾಮವಾಗಿ ಪೌರತ್ವ ವಿಚಾರವು ಕಾಂಗ್ರೆಸ್ ಮತ್ತು ಬಿಜೆಪಿ, ಹಿಂದೂ ಮತ್ತು ಮುಸ್ಲಿಮರ ವಿಚಾರವಾಗಿ ಪರಿವರ್ತನೆಯಾಗುತ್ತಿದೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಅಂಶಗಳಿರುವುದರಿಂದ ಇದರ ಬಗ್ಗೆ ಬಹಳ ಚರ್ಚೆಗಳು ನಡೆಯಬೇಕಾಗಿದೆ. ಸಂಶಯಗಳನ್ನು ನಿವಾರಿಸಲು ರಾಜಕೀಯ ವ್ಯಕ್ತಿಗಳ ಬದಲಾಗಿ ಅಧಿಕಾರಿಗಳ ಮೂಲಕ ಸರಕಾರ ಮುಂದಾಗಬೇಕಾಗಿತ್ತು. ಈ ಕಾಯ್ದೆ ಸಂವಿಧಾನ ಬದ್ಧವಾಗಿದ್ದರೆ ಜಾರಿ ಮಾಡುವ ಬಗ್ಗೆಯೂ ಹಾಗೂ ಸಂವಿಧಾನ ವಿರೋಧಿಯಾಗಿದ್ದರೆ ಕಾನೂನು ರೀತಿಯಲ್ಲಿ ಎದುರಿಸುವ ಬಗ್ಗೆಯೂ ಚರ್ಚೆಗಳು ನಡೆಯಬೇಕೆಂದು ಹೇಳಿದರು.

  ಕೊಡಗು ಜಿಲ್ಲೆ ನಾಯಿಬ್ ಖಾಝಿ ಮಹ್ಮೂದ್ ಮುಸ್ಲಿಯಾರ್ ಪ್ರಾರ್ಥಿಸಿದರು. ಈ ಸಂದರ್ಭ ಕುಂಜಿಲ ಮುದರ್ರಿಸ್ ಮುಬಶ್ಶಿರ್ ಅಹ್ಸನಿ, ಕರ್ನಾಟಕ ಮುಸ್ಲಿಮ್ ಜಮಾಅತ್ ಕೊಡಗು ಜಿಲ್ಲೆ ಕಾರ್ಯಾಧ್ಯಕ್ಷ ಪಿ.ಎ ಯೂಸುಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ, ವಕೀಲ ಕುಂಞ ಅಬ್ದುಲ್ಲಾ, ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ.ಯಾಕೂಬ್, ಜಿಪಂ ಸದಸ್ಯ ಅಬ್ದುಲ್ ಲತೀಫ್, ಪ್ರಮುಖರಾದ ಉಸ್ಮಾನ್ ಸುಂಟಿಕೊಪ್ಪ, ಪಿ.ಯು ಹನೀಫ್ ಸಖಾಫಿ, ಸುಲೈಮಾನ್ ಫಾಳಿಲಿ, ಅಬ್ದುಲ್ಲ ಸಖಾಫಿ, ಅಬ್ದುಲ್ ಅಝೀಝ್ ಸಖಾಫಿ, ಬಿ.ಎಂ ಹಮೀದ್, ಕೆ.ಎಂ.ಬಾವ, ಕೊಟ್ಟಮುಡಿ ಹಂಝ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಜಮಾಅತ್ ಸಮಿತಿಯ ಪ್ರಮುಖರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News