​"ಈಶಾನ್ಯಕ್ಕೆ ಮೋದಿ ಭೇಟಿ ನೀಡಿದರೆ ಪ್ರತಿಭಟನೆಯ ಸ್ವಾಗತ"

Update: 2020-01-08 03:56 GMT

ಗುವಾಹತಿ, ಜ.8: ಪೌರತ್ವ ತಿದ್ದುಪಡಿ ಕಾಯ್ದೆಗೆ ತನ್ನ ವಿರೋಧವನ್ನು ಪುನರುಚ್ಚರಿಸಿದ ನಾರ್ತ್ ಈಸ್ಟ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎನ್‌ಇಎಸ್‌ಓ), ಪ್ರಧಾನಿ ನರೇಂದ್ರ ಮೋದಿಯವರು ಈ ಭಾಗಕ್ಕೆ ಭೇಟಿ ನೀಡಿದರೆ ಪ್ರತಿಭಟನೆಯ ಸ್ವಾಗತ ಎದುರಾಗಲಿದೆ ಎಂದು ಹೇಳಿದ್ದಾರೆ.

ನೆಸೊ ಸಂಘಟನೆಯಲ್ಲಿ ಸೇರಿರುವ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ ಆಫ್ ಅಸ್ಸಾಂ (ಆಸು) ಮುಖಂಡ ಸಮುಜ್ಜಲ್ ಭಟ್ಟಾಚಾರ್ಯ ಹೇಳಿಕೆ ನೀಡಿ, "ನಾವು ಜನವರಿ 10ರಿಂದ ಆರಂಭವಾಗುವ ಪರೀಕ್ಷೆಗಳಿಗೆ ಅಥವಾ ಖೇಲೋ ಇಂಡಿಯಾ ಯುವ ಕ್ರೀಡಾಕೂಟಕ್ಕೆ ಅಡ್ಡಿಪಡಿಸುವುದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂಗೆ ಭೇಟಿ ನಿಡಿದರೆ, ನಾವು ಅಹಿಂಸಾತ್ಮಕ ಪ್ರತಿಭಟನೆ ಸಂಘಟಿಸುತ್ತೇವೆ. ಶಾಂತಿಯುತ ಗಾಂಧೀಜಿ ಮಾದರಿಯ ಪ್ರತಿಭಟನೆ ಇರುತ್ತದೆ" ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎನ್‌ಇಎಸ್‌ಓ ಸಂಘಟನೆಯಲ್ಲಿ ಆಸು, ನಾಗಾ ಸ್ಟೂಡೆಂಟ್ಸ್ ಯೂನಿಯನ್, ಅರುಣಾಚಲ ಪ್ರದೇಶ ಸ್ಟೂಡೆಂಟ್ಸ್ ಯೂನಿಯನ್, ಮಿಜೋ ಝಿರಲೈ ಪವಾಲ್, ಖಾಸಿ ಸ್ಟೂಟೆಂಡ್ಸ್ ಯೂನಿಯನ್ ಆಫ್ ಮೇಘಾಲಯ ಹಾಗೂ ತ್ರಿಪುರಾ ಸ್ಟೂಡೆಂಟ್ಸ್ ಫೆಡರೇಷನ್ ಮತ್ತಿತರ ಸಂಘಟನೆಗಳಿವೆ.

"ಸಿಎಎ ಧರ್ಮಾಧರಿತವಾಗಿದ್ದು, ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ಧರ್ಮದ ಆಧಾರದಲ್ಲಿ ತಾರತಮ್ಯವನ್ನು ನಾವು ಸಹಿಸುವುದಿಲ್ಲ" ಎಂದು ನೆಸೊ ಅಧ್ಯಕ್ಷ ಸ್ಯಾಮ್ಯುಯೆಲ್ ಬಿ.ಜೈರ್ವಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News