ಮೈಸೂರು: ಜೆಎನ್‍ಯು ಹಿಂಸಾಚಾರ ಖಂಡಿಸಿ ಪಂಜಿನ ಮೆರವಣಿಗೆ

Update: 2020-01-08 18:40 GMT

ಮೈಸೂರು,ಜ.8: ಜೆಎನ್‍ಯು ನಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ವಿದ್ಯಾರ್ಥಿ ಸಂಘಟನೆಗಳ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.

ನಗರದ ಮಾನಸ ಗಂಗೋತ್ರಿಯ ಕ್ಲಾಕ್ ಟವರ್ ಬಳಿ ಬುಧವಾರ ಜಮಾಯಿಸಿದ ದಲಿತ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ, ವಿವಿ ಸಂಶೋಧಕರ ಸಂಘ, ಎಐಡಿಎಸ್‍ಓ ಮತ್ತು ಎಸ್‍ಎಫ್‍ಐ ಸಂಘಟನೆಗಳ ವತಿಯಿಂದ ಕುವೆಂಪು ಪುತ್ಥಳಿವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು.

ಇದೇ ವೇಳೆ ಎಐಡಿಎಸ್‍ಒ ಕಾರ್ಯದರ್ಶಿ ಚಂದ್ರಕಲಾ ಮಾತನಾಡಿ, ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡಿಸುತ್ತಿದೆ. ಜೆಎನ್‍ಯು ನಲ್ಲಿ ಮುಸುಕುದಾರಿ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಇದಕ್ಕೆ ಪರೋಕ್ಷವಾಗಿ ಕೇಂದ್ರದ ಬೆಂಬಲವಿದೆ ಎಂದು ಆರೋಪಿಸಿದರು.

ಸಿಎಎ, ಎನ್‍ಆರ್‍ಸಿ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ ಆದಿವಾಸಿಗಳು, ಕೂಲಿಕಾರ್ಮಿಕರು, ದಲಿತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ದಾಖಲೆ ತೋರಿಸಿ ಎಂದರೆ ಇವರು ಎಲ್ಲಿಂದ ತೋರಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ವ್ಯಕ್ತಿಗಳನ್ನು ಗುರಿಯಾಗಿಸಿ ಅವರನ್ನು ಸಾಯಿಸಬಹುದು, ಆದರೆ ಅವರ ವಿಚಾರಗಳನ್ನು ಸಾಯಿಸಲು ಸಾಧ್ಯವಿಲ್ಲ. ಇವರು ನಮ್ಮ ವಿರುದ್ಧ ದಾಳಿ ಮಾಡಿದಷ್ಟು ನಾವು ಮತ್ತಷ್ಟು ಸಂಘಟಿತರಾಗುತ್ತೇವೆ ಎಂದು ಹೇಳಿದರು.

ಪಂಜಿನ ಮೆರವಣಿಗೆಯಲ್ಲಿ ಎಸ್‍ಎಫ್‍ಐ ನ ವಸಂತ ಕಲಾಲ್, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ಅಸ್ಗರ್ ಅಲಿ, ಸೋಸಲೆ ಮಹೇಶ್, ಎಐಡಿಎಸ್‍ಒ ಆಸಿಯಾ ಬೇಗಂ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News