ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಬೆಂಬಲಿಸಿ ಸಾಹಿತಿಗಳು, ಚಿಂತಕರು, ಹೋರಾಟಗಾರರಿಂದ ಪತ್ರ

Update: 2020-01-09 07:43 GMT
ಕಲ್ಕುಳಿ ವಿಠಲ್ ಹೆಗ್ಡೆ

ಚಿಕ್ಕಮಗಳೂರು : ಜಿಲ್ಲಾ ಕಸಾಪ ಶೃಂಗೇರಿ ಪಟ್ಟಣದಲ್ಲಿ ಜ.10-11ರಂದು ಕಲ್ಕುಳಿ ವಿಠಲ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ಸಾಹಿತ್ಯ ಸಮ್ಮೇಳನಕ್ಕೆ ಬಿಜೆಪಿ ಮತ್ತು ಸಂಘಪರಿವಾರ ಸಂಘಟನೆಗಳ ಭಾರೀ ವಿರೋಧ ವ್ಯಕ್ತವಾಗಿದೆ.

ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಇಡೀ ಸರಕಾರ ಸಮ್ಮೇಳನಕ್ಕೆ ಅಸಹಕಾರ ತೋರುವ ಮೂಲಕ ಸಮ್ಮೇಳವನ್ನು ತಡೆ ಹಿಡಿಯುವ ಎಲ್ಲ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿದೆ. ಕೇಂದ್ರ ಕಸಾಪ ಅನುದಾನವನ್ನೂ ನೀಡದೇ ಸರಕಾರದ ಕೈಗೊಂಬೆಯಾಗಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.

ಈ ವಿರೋಧಗಳ ನಡುವೆ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಹಾಗೂ ಶೃಂಗೇರಿ ತಾಲೂಕು ಕಸಾಪ ಯಾವ ವಿರೋಧಕ್ಕೂ ಜಗ್ಗದೇ ಸಮ್ಮೇಳನವನ್ನು ಜನರಿಂದ ಹಣ ಸಂಗ್ರಹಿಸಿಯಾದರೂ ಮಾಡುತ್ತೇವೆ ಎಂದು ಹೇಳಿದ್ದು ಸಮ್ಮೇಳನಕ್ಕೆ ಎಲ್ಲ ತಯಾರಿಯನ್ನೂ ಮಾಡಿದೆ. ಸಮ್ಮೇಳನಕ್ಕೆ ಶುಭ ಕೋರಿ ಕಟ್ಟಿದ್ದ ಬ್ಯಾನರ್ ಗಳನ್ನು ಶೃಂಗೇರಿ ಪಪಂ ತೆರವು ಮಾಡಿದೆ. ಸಂಘಪರಿವಾರದ ಸಂಘಟನೆಗಳ ಸದಸ್ಯರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸಮ್ಮೇಳನದಲ್ಲಿ ಭಾಗವಹಿಸದಂತೆ ಕರಪತ್ರ ಹಂಚುತ್ತಿವೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ  ಸಮ್ಮೇಳನ ರಾಜ್ಯದ ಗಮನ ಸೆಳೆದಿದ್ದು, ಸಂಘ ಪರಿವಾರದ ಈ ವಿರೋಧಕ್ಕೆ ಶೆಡ್ಡು ಹೊಡೆದಂತೆ ಪ್ರಗತಿಪರರು ಸಮ್ಮೇಳವನ್ನು ಬೆಂಬಲಿಸುತ್ತಿದ್ದಾರೆ.

ಈ ಮಧ್ಯೆ ನಾಡಿನ ಸುಪ್ರಸಿದ್ಧ ಸಾಹಿತಿಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು, ಲೇಖಕರು ಸಮ್ಮೇಳನ ಬೆಂಬಲಿಸಿ ಕೇಂದ್ರ ಕಸಾಪ ಹಾಗೂ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಬುಧವಾರ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಪತ್ರದ ಸಾರಾಂಶ ಇಂತಿದೆ...

ಇದೇ ಜ.10-11 ರಂದು ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ನವರು ಲೇಖಕ, ಹೋರಾಟಗಾರ, ಚಿಂತಕ, ಸಾಹಿತಿ ಶ್ರೀ ಕಲ್ಕುಳಿ ವಿಠಲ್ ಹಗ್ಡೆ ಅವರನ್ನು ಆಯ್ಕೆ ಮಾಡಿದ್ದು, ಅವರ ಆಯ್ಕೆಯೂ ಸೂಕ್ತ ಮತ್ತು ಸಮಂಜಸವಾಗಿದೆ.

ನಾಡು ನುಡಿಗೆ ಅವರು ನೀಡಿದ ಕೊಡುಗೆಗೆ ಸಾಹಿತ್ಯ ಪರಿಷತ್ತು ಮತ್ತು ಆ ಮೂಲಕ ಸಾಹಿತ್ಯ ಪ್ರೇಮಿಗಳು ಅವರಿಗೆ ತೋರಿಸಿದ ಗೌರವವೂ ಆಗಿದೆ. ಮಲೆನಾಡಿನ ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯ ಭೌತಿಕ ಮತ್ತು ಬೌದ್ಧಿಕ ಪರಿಸರವನ್ನು ಆರೋಗ್ಯಕರವಾಗಿಡುವಲ್ಲಿ ಹಗ್ಡೆ ಅವರು ಶ್ರಮಿಸುತ್ತಾ ಬಂದಿದ್ದಾರೆ. ಕುದುರೆಮುಖ ಅಭಯಾರಣ್ಯ ಇಂದು ಉಳಿದಿದೆ ಎಂದರೆ ಅದಕ್ಕೆ ಕಾರಣ ಕರ್ತರು ವಿಠಲ್ ಹಗ್ಡೆ ಮತ್ತು ಅವರ ಸಂಗಾತಿಗಳೇ ಆಗಿದ್ದಾರೆ. ಜೊತೆಗೆ ಇವರು ಬರೆದ ಮಂಗನಬ್ಯಾಟೆ ಕೃತಿಯು ಇಡೀ ಮಲೆನಾಡಿನ ಚಿತ್ರಣವನ್ನು ಕುವೆಂಪು, ಅನಂತಮೂರ್ತಿ, ಪೂಣಚಂದ್ರ ತೇಜಸ್ವಿ ಅವರಷ್ಟೆ ಸಶಕ್ತವಾಗಿ ಬಿಂಬಿಸುತ್ತಿದ್ದು, ಅದಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಂದಿದೆ.

ಸಾಹಿತ್ಯ ಪರಿಷತ್ ಸ್ವಾಯತ್ತ ಸಂಸ್ಥೆಯಾಗಿದ್ದು, ಜಿಲ್ಲಾ ಮತ್ತು ತಾಲೂಕು ಸಮ್ಮೇಳನಗಳಿಗೆ ಸೂಕ್ತ ಅಧ್ಯಕ್ಷರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಆಯಾ ಸಾಹಿತ್ಯ ಪರಿಷತ್‍ನ ಕಾರ್ಯಕಾರಿ ಸಮಿತಿಗೆ ಇರುತ್ತದೆ. ಹೀಗೆ ಆಯ್ಕೆ ಮಾಡಿದ ಅಧ್ಯಕ್ಷರನ್ನು ರಾಜಕೀಯ ಒತ್ತಡಕ್ಕೆ ಮಣಿದು ಕೈಬಿಡುವುದು, ಬದಲಾಯಿಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರು ಅಶೋಕ್ ಅವರ ನಿಲುವು ಸರಿಯಾಗಿದೆ.

ಕೇಂದ್ರ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಮೇಲೆ ಒತ್ತಡ ತರುತ್ತಿರುವುದು ಹಾಗೂ ಅನುದಾನ ನೀಡದಿರುವ ಧೋರಣೆ ತಪ್ಪು. ಈ ಮೂಲಕ ಕೇಂದ್ರ ಕಸಾಪ ಅಧ್ಯಕ್ಷ ಮನುಬಳಿಗಾರ್ ಅವರು ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಆಯ್ಕೆಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಸ್ವಾಯತ್ತತೆಗೆ ಭಂಗ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಒಂದು ವೇಳೆ ಅನುದಾನ ಬಿಡುಗಡೆ ಮಾಡದಿದ್ದಲ್ಲಿ ಸಮ್ಮೇಳನದಲ್ಲಿ ಜನರೇ ದೇಣಿಗೆ ಸಂಗ್ರಹಿಸಿ, ಜನಸಮ್ಮೇಳವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗುತ್ತೇವೆಂದು ಈ ಮೂಲಕ ಎಚ್ಚರಿಕೆ ನೀಡುತ್ತೇವೆ.

ಸ್ವತಃ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸಿ.ಟಿ.ರವಿ ಅವರು, ವಿಠಲ್ ಹಗ್ಡೆ ಅವರ ಆಯ್ಕೆ ಎಲ್ಲರಿಗೂ ಒಪ್ಪಿತವಾದ ಆಯ್ಕೆ ಅಲ್ಲ, ಆದ್ದರಿಂದ ಅವರನ್ನು ಕೈಬಿಡಿ ಎಂದಿದ್ದಾರೆಂದು ಕೇಂದ್ರ ಕಸಾಪ ಅಧ್ಯಕ್ಷರಾದ ಮನುಬಳಿಗಾರ್ ಹೇಳಿದ್ದಾರೆಂದಿದ್ದಾರೆ. ಆದರೆ ಕನ್ನಡ ಸಾಹಿತ್ಯ ಪರಂಪರೆಯು ಪ್ರಭುತ್ವದ ಕುರುಡುತನ ಮತ್ತು ಅಧಿಕಾರಸ್ಥರ ಜನವಿರೋಧಿ ನಿಲುವುಗಳನ್ನು ಧಿಕ್ಕರಿಸುವ, ಆ ಮೂಲಕ ಪ್ರಭುತ್ವ ಮತ್ತು ಸಮುದಾಯದ ವಿವೇಕವನ್ನು ಎಚ್ಚರಿಸುವ ಮತ್ತು ಕಾಪಾಡುವ ಕಾರ್ಯವನ್ನು ನಿರಂತರವಾಗಿ ಪಾಲಿಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದಿ ಕವಿ ಪಂಪನಿಂದ ಹಿಡಿದು ವಚನಕಾರರು, ದಾಸರು, ಕುಮಾರವ್ಯಾಸ, ಮಂಟೇಸ್ವಾಮಿ, ಆಧುನಿಕ ಕನ್ನಡದ ಕುವೆಂಪು, ಬೇಂದ್ರೆ, ಅಡಿಗರು, ಕಾರಂತರು, ಎಲ್ಲರೂ ಈ ಪರಂಪರೆಗೆ ಸೇರಿದವರಾಗಿದ್ದಾರೆ. ಈ ಹೊತ್ತಿನಲ್ಲಿ ಕನ್ನಡ ಸಾಹಿತ್ಯ ಸಮುದಾಯದ ನಿರ್ಣಾಯಕ ಪ್ರತಿನಿಧಿಯಾದ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅವರ ಆದ್ಯ ಕರ್ತವ್ಯ ಎಂದರೆ ಮಾನ್ಯ ಸಚಿವರಿಗೆ ಕನ್ನಡ ಸಾಹಿತ್ಯ ಪರಂಪರೆಯು ನಡೆದು ಬಂದ ದಾರಿಯನ್ನು ಮನಗಾಣಿಸಿ ಕೊಡಬೇಕಾಗಿರುವುದು ಮತ್ತು ಚಿಕ್ಕಮಗಳೂರು ಜಿಲ್ಲಾ ಕಸಾಪದ ಜನತಾಂತ್ರಿಕ ಆಯ್ಕೆಯ ಪರ ವಹಿಸಬೇಕಾಗಿರುವುದಾಗಿದೆ.

ಆದ್ದರಿಂದ ಕೇಂದ್ರ ಕಸಾಪ ಅಧ್ಯಕ್ಷರು ಪ್ರಭುತ್ವಕ್ಕೆ ಸಲಾಮು ಹೊಡೆಯುವುದನ್ನು ಬಿಟ್ಟು ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡಿ ತಮ್ಮ ನಿಜವಾದ ಕರ್ತವ್ಯ ಪ್ರಜ್ಞೆ ಮೆರೆಯುವ ಮೂಲಕ ಸಾಹಿತ್ಯ ಪರಿಷತ್‍ನ ಗೌರವ ಕಾಪಾಡಬೇಕೆಂದು ಆಗ್ರಹಿಸುತ್ತೇವೆ" ಎಂದು ಮನವಿ ಮಾಡಿದ್ದಾರೆ.

- ಇಂತಿ ವಿಶ್ವಾಸಿಗಳು...

ಕಡಿದಾಳು ಶಾಮಣ್ಣ, ಡಾ.ನಾ.ಡಿಸೋಜಾ, ಪ್ರೊ.ರಾಜೇಂದ್ರ ಚೆನ್ನಿ, ಪ್ರೊ. ಶ್ರೀಕಂಠಕೂಡಿಗೆ, ಡಾ.ಪುರುಷೋತ್ತಮ ಬಿಳಿಮನೆ, ಡಾ.ವಿಜಯ, ಡಾ.ರಾಜೇಂದ್ರ ಪಾಟೀಲ, ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಲ್.ಸಿ.ಸುಮಿತ್ರಾ, ಡಾ.ರಹಮತ್ ತರೀಕೆರೆ, ಕೆಪಿ ಸುರೇಶ್ ಕಂಜರ್ಪಣೆ, ಹರ್ಷ ಕುಮಾರ್ ಕುಗ್ವೆ, ಶಶಿ ಸಂಪಳ್ಳಿ, ಚಾರ್ವಾಕ ರಾಘು, ಬಿ.ಸುರೇಶ್, ಕೆ.ಫಣಿರಾಜ್, ಕೆ.ಎಲ್.ಅಶೋಕ್, ಸಂದ್ಯಾದೇವಿ, ಕೇಶವ ಮಳಗಿ, ಸನತ್‍ ಕುಮಾರ್ ಬೆಳಗಲಿ, ಬಿ.ಟಿ.ಲಲಿತಾನಾಯಕ್, ಕೆ.ಎಸ್.ವಿಮಲಾ, ಡಾ.ಲಕ್ಷ್ಮಣ ಕೊಡಸೆ, ಡಿ.ಉಮಾಪತಿ, ಕೆ.ಎಲ್.ವಾಸು, ಕುಂಟದಿ ನಿತೇಶ್, ಜ್ಯೋತಿ ಅನಂತಸುಬ್ಬರಾವ್, ವಿವೇಕ್ ಶಾನಭಾಗ್, ಭಾಗ್ಯ, ಸಿ.ಎಚ್. ಅಕ್ಷತಾ ಹುಂಜದಕಟ್ಟೆ, ಸೂರ್ಯ ಮುಕುಂದರಾಜ್, ಕೆಪಿ ಶ್ರೀಪಾಲ್, ಪ್ರೊ.ಶಿವರಾಮಯ್ಯ, ವೈ.ವಿ.ಶೃಂಗೇಶ್, ನಾ.ದಿವಾಕರ, ಎಲ್.ಸಿ.ನಾಗರಾಜ್, ಅರುಣ್ ಜೋಳದ ಕುಡ್ಲಿಗಿ, ಸಿರಿಮನೆ ನಾಗರಾಜ್, ಸತ್ಯ ಎಸ್, ಯೋಗೇಶ್ ಮಾಸ್ತರ್, ನೂರ್ ಶ್ರೀಧರ್, ಡಾ.ಪ್ರಭಾಕರ, ಬಸವರಾಜ್ ಸೂಳಿಬಾವಿ, ಜ್ಯೋತಿ ಗುರು ಪ್ರಸಾದ್, ರಾಜೇಂದ್ರ ಪ್ರಸಾದ್, ಭಾನು ಮುಸ್ತಾಕ್, ಬಿ.ಟಿ.ಜಾಹ್ನವಿ, ಡಾ.ಕೆ.ಕೇಶವಶರ್ಮ, ಚಮದ್ರಕಾಂತ ವಡ್ಡು, ರೇಣುಕಾ ನಿಡಗುಂದಿ, ಹಸನ್ ನಾಯಿಮ್ ಸುರಕೊಡ, ಆರ್.ಮಣಿಕಾಂತ್, ಕಿಡದುಂಬೆ ವಿಷ್ಣುಮೂರ್ತಿ, ವಸಂತ ಬಾನ್ನಡಿ, ಪ್ರಭಾಕರ್ ಕೃಷ್ಣನ್, ಟಿ.ಕೆ.ದಯಾನಂದ, ಭಾರತೀ ದೇವಿ.ಪಂಪಾರೆಡ್ಡಿ, ಕೊಟ್ರೇಶ್ ಕೊಟ್ಟುರು, ಗುಲಾಬಿ ಬಿಳಿಮಲೆ, ಪ್ರಗತ್ ಕೆ.ಆರ್, ಜಯರಾಜ್ ನಂಜಪ್ಪ, ಹೇಮಾ ವೆಂಕಟ್, ಉಷಾ ಕಟ್ಟೆಮನೆ, ಜಿ.ರವಿ, ಕವೀಶ್ ಶೃಂಗೇರಿ, ಎಂ.ಎಸ್.ಸರೋಜಾ, ಸುನೀಲ್ ಶಿರ್ನಳ್ಳಿ, ನಝ್ರೀನ್, ರಮೇಶ್ ಹಗ್ಡೆ, ಆದರ್ಶ ಹುಂಚದ ಕಟ್ಟೆ, ಎಂ.ಎಸ್. ಮುರಳೀಕೃಷ್ಣ, ಉದ್ಯಾವರ ನಾಗೇಶ್, ಇಂದಿರಾ ಹೆಗ್ದೆ, ಅಝೀಝ್ ಕರ್ಗುಂದ, ನಾಯಲ್ ತೀರ್ಥಹಳ್ಳಿ, ವಿಕ್ರಮ್ ತೇಜಸ್, ಉಮರ್ ಯು.ಎಚ್, ಶರತ್ ಪುರದಾಳ್, ಕುಮಾರ್ ರೈತ, ಡಾ.ಮಾನಸ, ಬಾಣಸಂದ್ರ ರಮಾ ಕುಮಾರಿ, ನಾದಾ ಮಣಿ ನಾಲ್ಕುರು, ಡಾ.ನವೀನ್ ಮಂಡಗದ್ದೆ, ನಂದಕುಮಾರಿ ಎ.ಎಸ್. ಎಂ.ರಾಘವೇಂದ್ರ, ಅನ್ನಪೂರ್ಣ, ಮಂಜನಾಥ್ ಚಾಂದ್, ಶಿಬಿ, ಶ್ರೀನಿವಾಸ್, ಸುರೇಂದ್ರರಾವ್, ವಿಜಯ್‍ಕಾಂತ್ ಪಾಟೀಲ, ಗಿರಧರ್ ಕಾರ್ಕಳ, ರೇಣುಕಾರಾಧ್ಯ, ಆರ್.ಜಿ.ಹಳ್ಳಿ ನಾಗರಾಜ್, ಅಜ್ಜಂಪುರ ವೆಂಕಟೇಶ್, ಜಾನ್ ಎಸ್.ಡಿಕುನ್ನಾ, ಮಧು ಸ್ಮಿತಾ, ಹೇಮಾವತಿ ಕೆ.ಎಲ್. ನಿಶ್ಚಲ್ ಜಾದೂಗರ್, ಕುಮಾರ್ ಆರ್ಕೆ, ನಾಗರಾಜ್ ಬಿದಗೋಡು, ಎಸ್,ಕುಮಾರ್, ಶೈಲೆಂದ್ರ, ಮುರುಳಿ ಕೃಷ್ಣ ಮಾಲೂರು, ಪ್ರಶಾಂತ್ ಪಂಡಿತ್, ನಝೀರ್ ಅಹ್ಮದ್, ಶಶಿಧರ್, ಚೇತನ್ ಬೇಲೇನಹಳ್ಳಿ, ನಾಗಭೂಷಣ ಸ್ವಾಮಿ, ಕಲ್ಗುಂಡಿ ನವೀನ್, ಸುನೀಲ್ ಶಿರಸಂಗಿ, ಪಾರ್ವತೀಶ್ ಬಿಳಿದಾಳೆ, ಕೃಷ್ಣೇಗೌಡ, ಸಂತೋಷ್ ಛಲವಾದಿ, ಲಿಂಗರಾಜು ಮಳವಳ್ಳಿ ಸುಕನ್ಯಾ ಉರಾಳ, ಬೃಂಧಾ ಹೆಗ್ಗಡೆ, ಮೋಹನ್ ಶೆಟ್ಟಿ, ರಘು ಹಾಲ್ಕೆರೆ, ನಿಖಿಲ್ ಸಖರಾಯಪಟ್ಟಣ, ವಿಜಯ್ ಹನಕೆರೆ, ನಾಗರಾಜ್, ಉಮೇಶ್ ಮೊಗವೀರ, ಸಬಾಸ್ಟಿನ್ ಗೂಮ್ಸ್, ವಿಜಯ್ ವಾಮನ್, ವಿಲಿಯಮ್, ಡಿ.ದಿನೇಶ್, ಶಿವಾನಂದ್ ಕುಗ್ವೆ, ರೂಪಾ ಕೆ, ಪ್ರದೀಲ್ ಮಾಲ್ಗುಡಿ, ಮಲ್ಲಿಕಾರ್ಜುನ, ಪ್ರಸನ್ನ, ವಿಶ್ವೇಶ್ವರ ಮೇಟಿ, ಶಶಿಧರ ಡೋಂಗ್ರೆ, ಅರುಣ್ ಕೊಪ್ಪ, ಮಣಿಶೇಖರ್, ಗೋಪಾಲ್ ರಾವ್ ಗೋರ್ಪಡೆ ಸೇರಿದಂತೆ ಇನ್ನೂ 40ಕ್ಕೂ ಹೆಚ್ಚು ಗಣ್ಯರು ಪತ್ರದಲ್ಲಿ ಸಹಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News