3,000 ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧದ ದೇಶದ್ರೋಹ ಪ್ರಕರಣ ಕೈಬಿಡಲು ನಿರ್ಧರಿಸಿದ ಜಾರ್ಖಂಡ್ ಸರಕಾರ

Update: 2020-01-09 10:50 GMT
ಹೇಮಂತ್ ಸೊರೇನ್

ರಾಂಚಿ: ಜಾರ್ಖಂಡ್‍ನ ವಸ್ಸೇಪುರ್ ಎಂಬಲ್ಲಿ ಜನವರಿ 7ರಂದು ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧದ  ಹೋರಾಟದಲ್ಲಿ ಪಾಲ್ಗೊಂಡಿದ್ದ 3,000 ಜನರ ವಿರುದ್ಧ ದಾಖಲಿಸಲಾಗಿದ್ದು ದೇಶದ್ರೋಹ ಪ್ರಕರಣಗಳನ್ನು ಕೈಬಿಡಲು ರಾಜ್ಯ ಸರಕಾರ ಶಿಫಾರಸು ಮಾಡಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ.

"ಕಾನೂನು ಜನರಲ್ಲಿ ಭಯ ಹುಟ್ಟಿಸಲು ಅಥವಾ ಅವರ ಸದ್ದಡಗಿಸಲು ಇರುವುದಲ್ಲ, ಬದಲಾಗಿ ಜನರಲ್ಲಿ ಕಾನೂನು ಸುರಕ್ಷತೆಯ ಭಾವನೆ ಮೂಡಿಸಬೇಕು, ನಮ್ಮ ಸರಕಾರ ಜನರ ದನಿಯಾಗಿ ಕೆಲಸ ಮಾಡುವುದು, ಪ್ರತಿಭಟನಾಕಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ ಅಧಿಕಾರಿಯ ವಿರುದ್ಧ ಕ್ರಮಕ್ಕೂ ಸರಕಾರ ಆದೇಶಿಸಿದೆ,'' ಎಂದು ಸೊರೇನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

"ಜಾರ್ಖಂಡ್ ನಿಮ್ಮದೇ ರಾಜ್ಯ, ಕಾನೂನು ಪಾಲನೆ ಮಾಡುವುದು ನಿಮ್ಮ ಕರ್ತವ್ಯವಾಗಿದೆ,'' ಎಂದು ಜಾರ್ಖಂಡ್ ಜನರಿಗೆ ಹೇಳಿದ ಸೊರೇನ್ ಜತೆಗೆ  ದೇಶದ್ರೋಹ ಪ್ರಕರಣ ದಾಖಲಿಸಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿ ದೇಶದ್ರೋಹ ಪ್ರಕರಣ ಕೈಬಿಡುವಂತೆ ಸೂಚಿಸಿ ಸರಕಾರದ ಪತ್ರದ ಪ್ರತಿಯೊಂದನ್ನೂ ಅವರು ಪೋಸ್ಟ್ ಮಾಡಿದ್ದಾರೆ.

ಜನವರಿ 7ರ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ರಸ್ತೆಗಳಿಗೆ ತಡೆಯೊಡ್ಡಿ, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವಂತಹ ಘೋಷಣೆಗಳನ್ನು ಕೂಗಿದ್ದಾರೆಂದು ಆರೋಪಿಸಿ ಧನಬಾದ್ ವೃತ್ತ ನಿರೀಕ್ಷಕ ಪ್ರಶಾಂತ್ ಕುಮಾರ್ ಲೈಖ್ ನೀಡಿದ ದೂರಿನ ಆಧಾರದಲ್ಲಿ ಎಫ್‍ಐಆರ್ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News