ವಾರಣಾಸಿ ಸಂಸ್ಕೃತ ವಿವಿ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಸೋತ ಎಬಿವಿಪಿ

Update: 2020-01-09 11:16 GMT
Photo: Twitter(@SaimonFarooqui)

ವಾರಣಾಸಿ: ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್‍ಎಸ್‍ಯುಐ ಅಭ್ಯರ್ಥಿಗಳು  ಎಬಿವಿಪಿ ಅಭ್ಯರ್ಥಿಗಳನ್ನು ಎಲ್ಲಾ ನಾಲ್ಕು ಸ್ಥಾನಗಳಲ್ಲಿ ಸೋಲಿಸಿ ಜಯಭೇರಿ ಬಾರಿಸಿದ್ದಾರೆ.

ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ  ಸ್ಥಾನಕ್ಕೆ ಆಯ್ಕೆಯಾದ ಎನ್‍ಎಸ್‍ಯುನ ಶಿವಂ ಶುಕ್ಲಾ  ಅವರು ಎಬಿವಿಪಿಯ ಹರ್ಷಿತ್ ಪಾಂಡೆಯನ್ನು ಭಾರೀ ಅಂತರದಿಂದ ಪರಾಭವಗೊಳಿಸಿದ್ದಾರೆ. ವಿಜೇತ ಅಭ್ಯರ್ಥಿಗೆ 709 ಮತಗಳು ದೊರಕಿದ್ದರೆ ಎಬಿವಿಪಿ ಅಭ್ಯರ್ಥಿಗೆ ಕೇವಲ 224 ಮತಗಳು ದೊರಕಿವೆ.

ಎನ್‍ಎಸ್‍ಯುಐ ಅಭ್ಯರ್ಥಿಗಳಾದ ಚಂದನ್ ಕುಮಾರ್ ಮಿಶ್ರಾ ಹಾಗೂ ಅವನೀಶ್ ಪಾಂಡೆ ಕ್ರಮವಾಗಿ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ರಜನೀಕಾಂತ್ ದುಬೆ ಗ್ರಂಥಪಾಲಕ ಹುದ್ದೆಗೆ ಚುನಾಯಿತರಾಗಿದ್ದಾರೆ.

ಚುನಾವಣಾಧಿಕಾರಿ ಶೈಲೇಶ್ ಕುಮಾರ್ ಮಿಶ್ರಾ ಅವರು ಫಲಿತಾಂಶ ಘೋಷಿಸಿದ ನಂತರ ಉಪಕುಲಪತಿ ರಾಜಾರಾಂ ಶುಕ್ಲಾ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ವಿಜೇತ ಅಭ್ಯರ್ಥಿಗಳಿಗೆ ಮೆರವಣಿಗೆ ನಡೆಸದಂತೆ ಸೂಚಿಸಲಾಯಿತಲ್ಲದೆ ಅವರನ್ನು ಪೊಲೀಸ್ ರಕ್ಷಣೆಯಲ್ಲಿ ಮನೆಗೆ ಕಳುಹಿಸಲಾಯಿತು.

ಚುನಾವಣೆಯಲ್ಲಿ ಶೇ 50.82ರಷ್ಟು ಮತದಾನವಾಗಿತ್ತು. ಒಟ್ಟು 1,950 ವಿದ್ಯಾರ್ಥಿಗಳ ಪೈಕಿ ಕೇವಲ 991 ವಿದ್ಯಾರ್ಥಿಗಳು ಮತ ಚಲಾಯಿಸಿದ್ದು ಇವರ ಪೈಕಿ 931 ವಿದ್ಯಾರ್ಥಿಗಳಾಗಿದ್ದರೆ 60 ಮಂದಿ ವಿದ್ಯಾರ್ಥಿನಿಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News