'ಅಮಿತ್ ಶಾ ಮಂಗಳೂರು ಕಾರ್ಯಕ್ರಮ'ದ ಬಗ್ಗೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ

Update: 2020-01-09 12:01 GMT

ಬೆಂಗಳೂರು, ಜ. 9: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ವರಿಷ್ಠರೊಂದಿಗೆ ಚರ್ಚಿಸಲು ಜ.11 ಮತ್ತು 12ರಂದು ಹೊಸದಿಲ್ಲಿಗೆ ತೆರಳಲು ನಿರ್ಧರಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ಸಂಪುಟ ವಿಸ್ತರಣೆ ಸೇರಿ ರಾಜ್ಯದ ಇನ್ನಿತರ ವಿಚಾರಗಳ ಚರ್ಚೆಗೆ ಹೊಸದಿಲ್ಲಿಗೆ ತೆರಳುತ್ತಿದ್ದು, ಕೇಂದ್ರ ಸಚಿವರೂ ಇನ್ನೂ ಸಮಯ ನೀಡಬೇಕಿದೆ ಎಂದು ಸ್ಪಷ್ಟಪಡಿಸಿದರು.

ಹೊಸದಿಲ್ಲಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ವರಿಷ್ಠರ ಅನುಮತಿ ಸಿಗುತ್ತಿದ್ದಂತೆ ದಿಲ್ಲಿಗೆ ತೆರಳಿ ಸಂಪುಟ ವಿಸ್ತರಣೆ ಸೇರಿ ಹಲವು ವಿಷಯಗಳ ಕುರಿತು ಮಾತುಕತೆ ನಡೆಸುತ್ತೇವೆ. ಕೇಂದ್ರ ಹಣಕಾಸು ಸಚಿವರನ್ನೂ ಭೇಟಿ ಮಾಡಲಿದ್ದೇವೆ ಎಂದರು.

ವಿದೇಶಕ್ಕೆ ತೆರಳುವ ಮುನ್ನ ಸಂಪುಟ ವಿಸ್ತರಣೆ ಮಾಡಬೇಕೆಂಬುದು ನನ್ನ ಭಾವನೆ. ಈ ಸಂಬಂಧ ವರಿಷ್ಠರೊಂದಿಗೆ ಚರ್ಚಿಸಿದ ಬಳಿಕ ಎಲ್ಲಕ್ಕೂ ಸ್ಪಷ್ಟ ಚಿತ್ರಣ ಸಿಗಲಿದೆ ಎಂದ ಅವರು, ವಿದೇಶಕ್ಕೆ ತೆರಳುವುದು ಇನ್ನೂ ಸಂಶಯವಿದೆ ಎಂದು ಸ್ಪಷ್ಟನೆ ನೀಡಿದರು.

ಮಹಾರಾಷ್ಟ್ರ ಮಾದರಿಯಲ್ಲೆ ವೀರಶೈವ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.

ನಿಗದಿಯಾಗಿರಲಿಲ್ಲ

‘ಪೌರತ್ವ ತಿದ್ದುಪಡಿ ಕಾಯ್ದೆ ಪರ ಕೈಗೊಂಡಿರುವ ಅಭಿಯಾನದ ಅಂಗವಾಗಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಅವರ ಮಂಗಳೂರು ಕಾರ್ಯಕ್ರಮ  ನಿಗದಿಯಾಗಿರಲಿಲ್ಲ. ಅವರ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಿಗದಿಪಡಿಸಲಾಗಿದೆ’

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News