ಫೆ.2ನೇ ವಾರದಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

Update: 2020-01-09 12:57 GMT

ಮಂಡ್ಯ, ಜ.9: ಫೆ.2ನೇ ವಾರದಲ್ಲಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ.ರವಿಕುಮಾರ್ ಚಾಮಲಾಪುರ ತಿಳಿಸಿದ್ದಾರೆ.

ಜಿಲ್ಲಾ ಕಸಾಪ ಭವನದಲ್ಲಿ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅಭಿಪ್ರಾಯ ಪಡೆದ ನಂತರ ಮಾತನಾಡಿದ ಅವರು,  ಮತ್ತೊಮ್ಮೆ ಸಭೆ ಕರೆದು ಸಮ್ಮೇಳನ ನಡೆಸುವ ಸ್ಥಳ, ದಿನಾಂಕ, ಸಮ್ಮೇಳನಾಧ್ಯಕ್ಷರ ಆಯ್ಕೆ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಈ ಸಮ್ಮೇಳನವನ್ನು ನಡೆಸಲು ಆಸಕ್ತಿ ತೋರುವ ಜನಪ್ರತಿನಿಧಿಗಳ, ಜಿಲ್ಲಾಡಳಿತದ ಸಹಕಾರ ಪಡೆಯಲಾಗುವುದು. ಹಲವು ಕನ್ನಡಪರ ಸಂಘಟನೆಗಳ, ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಅಭಿಪ್ರಾಯ ಪಡೆಯಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ ಮಾತನಾಡಿ, ಸಮ್ಮೇಳನದಲ್ಲಿ  ನೆನಪಿನಲ್ಲಿ ಉಳಿಯುವಂತಹ ಗೋಷ್ಠಿಗಳು, ಸ್ಮರಣ ಸಂಚಿಕೆಯನ್ನು ಹೊರತರಬೇಕು. ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಹಿರಿತನಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನಾಧ್ಯಕ್ಷತೆಗೆ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರೊ.ಬಿ.ಜಯಪ್ರಕಾಶಗೌಡ, ಜಯಲಕ್ಷ್ಮಿ ಸೀತಾಪುರ, ವ.ನಂ.ಶಿವರಾಮು, ಡಾ.ಎಚ್.ಎಸ್.ಮುದ್ದೇಗೌಡ, ಮೀರಾಸಿವಲಿಂಗಯ್ಯ,ಶುಭಶ್ರೀಪ್ರಸಾದ್, ಶಿ.ಕುಮಾರಸ್ವಾಮಿ, ಪ್ರೊ.ಜಿ.ಟಿ.ವೀರಪ್ಪ ಅವರ ಹೆಸರುಗಳನ್ನು ಹಲವರು ಸೂಚಿಸಿದರು.

ಸಾಹಿತಿ ಡಾ.ಪ್ರದೀಪ ಕುಮಾರ್ ಹೆಬ್ರಿ, ಜನಪದ ಗಾಯಕ ಗೊರವಾಲೆ ಚಂದ್ರಶೇಖರ್, ಗೀತಾರಾಣಿ, ಅಂಜನಾ ಶ್ರೀಕಾಂತ್, ಚನ್ನಸಂದ್ರ ಮಹದೇವು, ಡಾ.ಎಂ.ವೈ.ಶಿವರಾಮು ಮುಂತಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಸಾಪ ಜಿಲ್ಲಾ, ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News