ಶೃಂಗೇರಿ: ವಿರೋಧದ ನಡುವೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ

Update: 2020-01-10 04:18 GMT

ಚಿಕ್ಕಮಗಳೂರು, ಜ.10: ರಾಜಕೀಯ ಹಸ್ತಕ್ಷೇಪದಿಂದ ಸಾಹಿತ್ಯಾಸಕ್ತರು ಮತ್ತು ಸಂಘ ಪರಿವಾರದ ನಡುವಿನ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಚಿಕ್ಕಮಗಳೂರು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಬೆಳಗ್ಗೆ ಚಾಲನೆ ದೊರೆತಿದೆ.

ಎರಡು ದಿನಗಳ ಸಮ್ಮೇಳನಕ್ಕೆ ರಾಷ್ಟ್ರ ಧ್ವಜಾರೋಹಣದ ಮೂಲಕ ಸಾಹಿತ ಪುಟ್ಟಯ್ಯ ಚಾಲನೆ ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಕಸಾಪ ಧ್ವಜಾರೋಹಣಗೈದರು.

ಸಮ್ಮೇಳನದ ಹಿನ್ನೆಲೆಯಲ್ಲಿ ಕೆಲ ಸಂಘಟನೆಗಳು ಶುಕ್ರವಾರ ಪಟ್ಟಣ ಬಂದ್‌ಗೆ ಕರೆ ನೀಡಿದ್ದವು. ಆದರೆ ಪಟ್ಟಣದಲ್ಲೆಲ್ಲೂ ಬಂದ್ ವಾತಾವರಣ ಕಂಡುಬರುತ್ತಿಲ್ಲ. ಅಂಗಡಿಮುಂಗಟ್ಟುಗಳು ಮುಚ್ಚಿಲ್ಲ. ಆಟೊ, ಬಸ್ ಸೇರಿದಂತೆ ವಾಹನಗಳು ಎಂದಿನಂತೆ ಓಡಾಡುತ್ತಿವೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರ ಅಸಹಕಾರ ಮತ್ತು ಸಂಘಪರಿವಾರ ಸಂಘಟನೆಗಳ ವಿರೋಧದ ನಡುವೆಯೂ ಸಮ್ಮೇಳನ ಆರಂಭಗೊಳ್ಳುತ್ತಿದೆ. ಚಿಂತಕ ಕಲ್ಕುಳಿ ವಿಠಲ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಸಲು ಸುತಾರಾಂ ಒಪ್ಪದ ಕೆಲ ಬಲಪಂಥೀಯ ಸಂಘಟನೆಗಳು ಸಮ್ಮೇಳನ ನಡೆದಲ್ಲಿ ಶೃಂಗೇರಿ ಬಂದ್ ನೀಡುವ, ವೇದಿಕೆಗೆ ನುಗ್ಗುವ ಬೆದರಿಕೆಗಳನ್ನೂ ಹಾಕಿವೆ. ಈ ಬೆದರಿಕೆಗಳ ಕಾರಣಕ್ಕೆ ನಾಡಿನ ಪ್ರಮುಖ ಸಾಹಿತಿಗಳು, ಪ್ರಗತಿಪರರು ಸಮ್ಮೇಳನದಲ್ಲಿ ಬಾಗವಹಿಸಿ ಸಮ್ಮೇಳನದ ಯಶಸ್ವಿಗೆ ಪಣ ತೊಟ್ಟಿದ್ದು, ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ರಾಜ್ಯದ ಗಮನ ಸೆಳೆದಿದೆ.

ಸಮ್ಮೇಳನಕ್ಕೆ ಬಾರೀ ವಿರೋಧವಾಗಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ನಡೆಸಲುದ್ದೇಶಿಸಿದ್ದ ಮೆರವಣಿಗೆಗೆ ಪೊಲೀಸ್ ಇಲಾಖೆ ಬೆಳಗ್ಗೆ ಅವಕಾಶ ನೀಡಿಲ್ಲ. ಈ ನಡುವೆ ಪಟ್ಟಣದಲ್ಲಿ ಎರಡು ದಿನಗಳಿಂದ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News