ನಗರ ಪರಿಸರವಾದಿಗಳಿಂದ ಮಲೆನಾಡಿಗೆ ಸಂಕಷ್ಟ: ಕಲ್ಕುಳಿ ವಿಠಲ ಹೆಗ್ಡೆ ಆಕ್ರೋಶ

Update: 2020-01-10 13:28 GMT

ಜನರನ್ನು ಹೊರಗಿಟ್ಟು ನೋಡುವ ಪರಿಸರವಾದ ಬೇಡ
ಪರಿಸರದ ಹೆಸರಲ್ಲಿ ಗಿರಿಜನರ ಮೇಲಿನ ದೌರ್ಜನ್ಯ ನಿಲ್ಲಿಸಿ

ಶೃಂಗೇರಿ, ಜ.10: ಬ್ರಿಟಿಷರು ಕಾಡನ್ನು ಎಷ್ಟೇ ದೋಚಿದ್ದರೂ ಕಾಡಿನ ಜನರನ್ನು ಮಾತ್ರ ಒಕ್ಕಲೆಬ್ಬಿಸಿರಲಿಲ್ಲ! ಆದರೆ ಈಗ ಪರಿಸರದ ಹೆಸರಿನಲ್ಲಿ ಅರಣ್ಯದೊಂದಿಗೆ ಪರಿಸರ ಸ್ನೇಹಿಯಾಗಿ ಬದುಕುವ ಅರಣ್ಯ ನಿವಾಸಿಗಳನ್ನೇ ಹೊರಹಾಕುವ ಪರಿಸರ ಸಾಮ್ರಾಜ್ಯಶಾಹಿ ದಾಳಿ ನಡೆಯುತ್ತಿದೆ. ಇದರ ವಿರುದ್ಧ ಕಳೆದ ಎರಡು ದಶಕಗಳಿಂದ ಪರಿಸರ ಹೋರಾಟಗಾರನಾಗಿ ದನಿ ಎತ್ತಿದ್ದೇನೆ. ಈ ನಮ್ಮ ಮಲೆನಾಡು, ಇಲ್ಲಿಯ ಪರಿಸರ ನಮ್ಮದು, ಇದನ್ನು ನಮ್ಮದಾಗಿಯೇ ಉಳಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಹೊರಗಿನವರು ಪರಿಸರ ಸಂರಕ್ಷಣೆಯ ಹೆಸರಿನಲ್ಲಿ, ನಮ್ಮ ಕಷ್ಟ-ಸುಖಗಳನ್ನು ಕೇಳದೆ, ವಿಶ್ವಾಸಕ್ಕೆ ತೆಗೆದುಕೊಳ್ಳದೇ ನೀಡಿದ ಕಸ್ತೂರಿ ರಂಗನ್ ವರದಿ, ಗಾಡ್ಗೀಲ್ ವರದಿಯನ್ನು ತಿರಸ್ಕರಿಸಬೇಕು ಎಂದು ಹಿರಿಯ ಹೋರಾಟಗಾರ, ಸಾಹಿತಿ ಕಲ್ಕುಳಿ ವಿಠಲ ಹೆಗ್ಡೆ ಆಗ್ರಹಿಸಿದ್ದಾರೆ.

ಶೃಂಗೇರಿಯ ಪೂರ್ಣಚಂದ್ರ ತೇಜಸ್ವಿ ವೇದಿಕೆಯಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ಚಿಕ್ಕಮಗಳೂರು 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.

ನಾನು ಪರಿಸರವಾದಿಯಲ್ಲ, ನನ್ನದು ಜನಪರ ಪರಿಸರವಾದ ಎಂದು ಈ ಹಿಂದಿನಿಂದಲೂ ಸ್ಪಷ್ಟಪಡಿಸುತ್ತಾ ಬಂದಿದ್ದೇನೆ. ಮೊದಲಿನಿಂದಲೂ ಜನರನ್ನು ಹೊರಗಿಟ್ಟು ನೋಡುವ ಪರಿಸರವಾದಕ್ಕೆ ನನ್ನ ವಿರೋಧವಿದೆ. ಪಾಶ್ಚಿಮಾತ್ಯ ಚಿಂತನೆಯ ಈ ಪರಿಸರವಾದದಲ್ಲಿ ಒಂದಿಷ್ಟು ಕಾಡನ್ನು ಉಳಿಸಿ, ಉಳಿದವರೆಲ್ಲಾ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದಕ್ಕೆ ಮಹತ್ವ ನೀಡಲಾಗುತ್ತಿದೆ. ಈಗ ಈ ರೀತಿಯ ಪರಿಸರವಾದವನ್ನು ಸಮರ್ಥಿಸುವವರು ನಗರಗಳಲ್ಲಿ ಹೆಚ್ಚಾಗಿದ್ದಾರೆ. ಅವರು ಈಗ ನಮ್ಮ ನಡುವೆಯೂ ಸೇರಿಕೊಂಡಿದ್ದಾರೆ. ಇವರಿಗೆ ತಾವು ಕಾಡು ಕಾಪಾಡಲಾಗದ ಮುಂದುವರಿದ ದೇಶಗಳು ದಾರಾಳವಾಗಿ ಹಣಕಾಸಿನ ನೆರವು ನೀಡುತ್ತಿವೆ ಅವರು ಆರೋಪಿಸಿದ್ದಾರೆ.

ಭೂಮಿಯ ಕಾವು ದಿನದಿಂದ ದಿನಕ್ಕೆ ಹೆಚ್ಚಲು ಈ ಪಾಶ್ಚಾತ್ಯ ಕಲ್ಪನೆಯ ಪರಿಸರವಾದವೇ ಕಾರಣ. ಭೂತಾಪಮಾನ ಏರಬಾರದೆಂದರೆ, ಹವಾಮಾನ ವೈಪರೀತ್ಯದ ಪರಿಣಾಮಗಳು ಕಡಿಮೆಯಾಗಬೇಕಾದರೆ, ಈ ಹಿಂದೆ ಭೂಮಿಯ ಮೇಲೆ ಇದ್ದಂತೆ ಎಲ್ಲೆಡೆಯೂ ಹಸಿರು ಹರಡಬೇಕು. ಹಸಿರಿನೊಂದಿಗೆ ಬೆರೆತ ಬದುಕು ಮನುಷ್ಯನದ್ದ್ದಾಗಬೇಕು. ಇದನ್ನು ಅರ್ಥ ಮಾಡಿಕೊಳ್ಳದೇ, ಎಲ್ಲದಕ್ಕೂ ಮಲೆನಾಡಿಗರನ್ನು ದೂರುವವರಿಗೆ ನನ್ನ ಧಿಕ್ಕಾರವಿದೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾವು ಗಿರಿಜನರನ್ನು ಒಕ್ಕಲೆಬ್ಬಿಸುವುದು ಸೇರಿದಂತೆ ಮುಖ್ಯವಾಗಿ ನಾಲ್ಕು ಕಾರಣಗಳನ್ನು ಇಟ್ಟುಕೊಂಡು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಆದರೆ ಕರ್ನಾಟಕದಲ್ಲಿರುವ ಕೇವಲ ಶೇ.36 ಸಿಂಗಳಿಕ ಮಂಗಗಳು ‘ಭಗವತಿ’ ಅರಣ್ಯದಲ್ಲಿ ಮಾತ್ರ ಇವೆ ಎಂದು ಸುಳ್ಳು ವರದಿ ಕೊಟ್ಟು ಈ ಯೋಜನೆ ಜಾರಿಗೆ ತರಲಾಯಿತು. ಇಂದು 10-12 ಸಾವಿರ ಜನರ ಬದುಕನ್ನು ಕಿತ್ತುಕೊಳ್ಳಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಸಿಕ್ಕಿಹಾಕಿಕೊಂಡವರಿಗೆ ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಕಾಡಿನೊಂದಿಗೆ ಬೆರೆತು ಬದುಕುತ್ತಿರುವ ಅವರಿಗೆ ಅಲ್ಲಿಯೇ ಬದುಕಲು ಬಿಡಿ, ಇಲ್ಲವೇ ಆಸುಪಾಸಿನಲ್ಲಿ ಪುನರ್ವಸತಿ ಯೋಜನೆಯಂತೆ ಬದುಕು ರೂಪಿಸಿಕೊಡಿ ಎಂದು ವಿಠಲ ಹೆಗ್ಡೆ ಒತ್ತಾಯಿಸಿದರು.

ವಿದೇಶಿ ಪರಿಸರವಾದಿಗಳ ಉಪಟಳ: ಮಲೆನಾಡಿನಲ್ಲಿ ಕಳೆದ ಒಂದು ಶತಮಾನದಲ್ಲಿ ಎಷ್ಟು ಕಾಡು ನಾಶವಾಗಿದೆ, ಇದು ಮಳೆಯ ಮೇಲೆ ಯಾವೆ ಪರಿಣಾಮ ಬೀರಿದೆ ಎಂಬುದನ್ನು ನಾನು ದಾಖಲೆ ಸಹಿತ ವಿವರಿಸಬಲ್ಲೆ. ಆದರೆ ಎಲ್ಲದಕ್ಕೂ ಸ್ಥಳೀಯರೇ ಕಾರಣ ಎಂಬುದನ್ನು ನಾನು ಒಪ್ಪಲಾರೆ. ಈ ರೀತಿಯ ಆರೋಪ ಮಾಡುತ್ತಾ ಇಲ್ಲಿಯ ನಿವಾಸಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸದೇ ಇರುವುದು ಘೋರ ಅನ್ಯಾಯ. ಈ ವಿದೇಶಿ ಪರಿಸರವಾದಿಗಳ ಉಪಟಳ ಎಷ್ಟಿದೆಯೆಂದರೆ ಸೊಲ್ಲಾಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಅಗತ್ಯ ಇರುವಲ್ಲಿ ಅಗಲ ಮಾಡಲೂ ಬಿಡುತ್ತಿಲ್ಲ. ಈ ಭಾಗದ ಜನತೆ ಆರೋಗ್ಯ, ವ್ಯವಹಾರಗಳಿಗೆ ಮಂಗಳೂರಿಗೆ ಹೋಗಬೇಕಾದರೆ ಇರುವ ಈ ಹೆದ್ದಾರಿಯಲ್ಲಿ ಬರುವ ಕೆರೆಕಟ್ಟೆ ರಸ್ತೆ, ಈ ರಸ್ತೆಯ ಅಕ್ಕಪಕ್ಕ ನಾಲ್ಕು ಅಡಿ ಮಣ್ಣು ಹಾಕಿ ಅಗಲ ಮಾಡಲು ಪರಿಸರ ಕಾಯ್ದೆಯನ್ನು ಬಳಸಿಕೊಂಡು ಅಡ್ಡಿಪಡಿಸುತ್ತಾರೆ ಅಂದರೆ ಮಲೆನಾಡಿಗರ ಪರಿಸ್ಥಿತಿಯ ಬಗ್ಗೆ ಎಲ್ಲರೂ ಯೋಚಿಸಬೇಕು. ವರ್ಷದಲ್ಲಿ ಈ ಹೆದ್ದಾರಿಯ 21 ಕಿ.ಮೀ. ವ್ಯಾಪ್ತಿಯಲ್ಲಿ 10-20 ಅಪಘಾತಗಳಾಗಿ ಅಮಾಯಕರು ಸಾವಿಗೀಡಾಗುತ್ತಿದ್ದಾರೆ. ಈ ಬಗ್ಗೆ ಜನ ಎಷ್ಟೇ ಹೋರಾಟ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ. ಅಗತ್ಯ ರಸ್ತೆ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸುವವರು ಶೃಂಗೇರಿ -ಕೊಪ್ಪ ಜನರಿಗೆ 150 ಕಿ.ಮೀ. ಬಳಸಿ ಚಾರ್ಮುಡಿ ಮೂಲಕ ಮಂಗಳೂರಿಗೆ ತೆರಳಲು ಮಾರ್ಗವಿದೆ ಎಂದು ದಾರಿತಪ್ಪಿಸುತ್ತಿರುವುದು ಅಮಾನವೀಯವಲ್ಲವೇ? ಇದನ್ನು ಯಾರಾದರೂ ಪರಿಸರವಾದವೆಂದರೆ ಈ ವಾದ ನನ್ನದಂತೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News