ಸಿ.ಟಿ.ರವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಕಲ್ಕುಳಿ ವಿಠಲ್ ಹೆಗ್ಡೆ

Update: 2020-01-10 17:26 GMT

ಚಿಕ್ಕಮಗಳೂರು,ಜ.10: ಕನ್ನಡ ರಾಜ್ಯದಲ್ಲಿ ಕನ್ನಡ ಬಾವುಟ ಹಾರಿಸಲು ಬಿಡದ ಕನ್ನಡ ಮತ್ತು ಸಂಸ್ಕೃತಿ ಸಚಿವರದ್ದು ಅದೆಂತಹ ಸಂಸ್ಕೃತಿಯೋ ತಿಳಿದಿಲ್ಲ. ನಾನು ನಕ್ಸಲ್ ಬೆಂಬಲಿಗ ಎಂದು ಆರೋಪ ಮಾಡುತ್ತಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಈ ಸಂಬಂಧ ಓರ್ವರಿಗೆ 7 ತಿಂಗಳು ಶಿಕ್ಷೆಯೂ ಆಗಿದೆ. ಆಧಾರ ಇಲ್ಲದ ಆರೋಪಗಳ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಲ್ಕುಳಿ ವಿಠಲ್ ಹೆಗ್ಡೆ ಹೇಳಿದ್ದಾರೆ.

ಶುಕ್ರವಾರ ಜಿಲ್ಲೆಯ ಶೃಂಗೇರಿ ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ ಅವರು, ನನಗೆ ಹೋರಾಟ ಹೊಸದೇನಲ್ಲ, ಹಾಗೆಯೇ ಹೋರಾಟಗಳಿಗೆ ಬರುವ ವಿರೋಧಗಳೂ ಹೊಸತಲ್ಲ, ವೈಯಕ್ತಿಕ ದ್ವೇಷದಿಂದ ಸಮ್ಮೇಳನಾಧ್ಯರನ್ನಾಗಿ ತನ್ನ ಆಯ್ಕೆಯನ್ನು ವಿರೋಧಿಸುವವರ ಹಿಂದೆ ರಾಜಕೀಯ ಶಕ್ತಿಗಳಿವೆ. ಬಾಬಾ ಬುಡನ್‍ಗಿರಿ ಹೋರಾಟ ಸಂಬಂಧ ಸಿ.ಟಿ.ರವಿಗೆ ನನ್ನ ಮೇಲೆ ದ್ವೇಷವಿದೆ. ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಲು ನಿರ್ದಿಷ್ಟ ಜಾತಿಗೆ ಸೇರಿದವರಾಗಬೇಕಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಲೆನಾಡನ್ನು ಅರಣ್ಯ ಕಾಯ್ದೆಗಳ ಮೂಲಕ ಸರಕಾರ ಜನರಹಿತ ಪ್ರದೇಶವನ್ನಾಗಿಸಲು ಹುನ್ನಾರ ನಡೆಯುತ್ತಿದೆ. ಮಲೆನಾಡಿನ ಸಂಸ್ಕೃತಿ, ಅಡಿಕೆ, ಭತ್ತ ಬೆಳೆಯುವ ಸಂಸ್ಕೃತಿಯ ಮೇಲೆ ದಾಳಿ ಮಾಡಲಾಗುತ್ತಿದೆ. ಸರಕಾರಗಳು ಮಲೆನಾಡಿನ ಅಭಿವೃದ್ಧಿಗೆ ಒತ್ತು ನೀಡುವುದನ್ನು ಬಿಟ್ಟು ಹೊಸ ಹೊಸ ಕಾಯ್ದೆ ಕಾನೂನುಗಳ ಮೂಲಕ ಜನರನ್ನು ಒಕ್ಕಲೆಬ್ಬಿಸಲು ಮುಂದಾಗುತ್ತಿದೆ. ಮಲೆನಾಡಿನ ಅಭಿವೃದ್ಧಿಗೆ ಭೌಗೋಳಿಕ ಪ್ರದೇಶ ವ್ಯಾಪ್ತಿಯ ವಿಸ್ತಾರ ತೊಡಕಾಗಿದ್ದು, ಮಲೆನಾಡಿನ ತಾಲೂಕುಗಳನ್ನು ಸೇರಿಸಿ ಜಿಲ್ಲೆಗಳನ್ನು ಪುನರ್ ವಿಂಗಡಿಸಬೇಕಾಗಿದೆ ಎಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಲ್ಕುಳಿ ವಿಠಲ್ ಹೆಗ್ಡೆ ಅಭಿಪ್ರಾಯಿಸಿದ್ದಾರೆ.

ಮಲೆನಾಡಿನಲ್ಲಿ ಓರ್ವ ಶಾಸಕನ ಕ್ಷೇತ್ರ ನೂರು ಕಿಮೀ ವ್ಯಾಪ್ತಿ ಹೊಂದಿದೆ. ಈ ಕಾರಣಕ್ಕೆ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಆದ್ದರಿಂದ ಮಲೆನಾಡಿನಲ್ಲಿ ಭೌಗೋಳಿಕ ವಿಸ್ತೀರ್ಣದ ಆಧಾರದ ಮೇಲೆ ಕ್ಷೇತ್ರಗಳನ್ನು ಪುನರ್ ವಿಂಗಡಿಸಬೇಕು. ಮಲೆನಾಡಿನ ತಾಲೂಕುಗಳನ್ನು ಮಾತ್ರ ಸೇರಿಸಿ ಹೊಸ ಜಿಲ್ಲೆಗಳನ್ನು ರಚಿಸಬೇಕಾಗಿದೆ. ಈಶಾನ್ಯ ರಾಜ್ಯಗಳಲ್ಲಿರುವಂತೆ ಮಲೆನಾಡನ್ನು ವಿಶೇಷ ಪ್ರದೇಶ ಎಂದು ಘೋಷಿಸಿ, ಮಲೆನಾಡಿನ ಅಭಿವೃದ್ಧಿಗೆ ವಿಶೇಷ ಪ್ರಾಧಿಕಾರವನ್ನು ರಚಿಸಬೇಕು. ಎಲ್ಲೋ ಕುಳಿತು ರೂಪಿಸುವ ಕಾನೂನುಗಳಿಗೆ ತಡೆ ಇರಬೇಕು. ಇಲ್ಲೇ ರೂಪಿತವಾದ ಜನರ ಕಾಯ್ದೆಗಳು ಚಲಾವಣೆಗೆ ಬರಬೇಕು, ಪ್ರಾಧಿಕಾರಕ್ಕೆ ಮಲೆನಾಡಿನ ಸಮಗ್ರ ಅಭಿವೃದ್ಧಿಗೆ ಸರ್ವಾಧಿಕಾರ ನೀಡಬೇಕು ಎಂದು ಕಲ್ಕುಳಿ ವಿಠಲ್ ಹೆಗ್ಡೆ ಆಗ್ರಹಿಸಿದರು.

ಮಲೆನಾಡಿನ ನೆಲ, ಜಲ, ಜನರ ಬದುಕಿಗೆ ಸವಾಲುಗಳು ಎದುರಾದಾಗಲೆಲ್ಲಾ ಧ್ವನಿ ಎತ್ತುವ ಕಾಯಕ ಮಾಡಿದ್ದೇನೆ. ಅಗತ್ಯವಿದ್ದಾಗ ಹೋರಾಟಕ್ಕೂ ಇಳಿದಿದ್ದೇನೆ. ಇದು ನನ್ನ ಕರ್ತವ್ಯವಾಗಿತ್ತು ಎಂದ ಅವರು, ನಾನು ಪರಿಸರ ಮತ್ತು ಸಾಮಾಜಿಕ ಕಾರ್ಯಕರ್ತ. ಸಾಹಿತ್ಯವನ್ನೂ ಶಾಸ್ತ್ರೀಯವಾಗಿ ಕಲಿತು ಬರೆದವನಲ್ಲ. ನನ್ನನ್ನು ಸಾಹಿತಿ ಎನ್ನುವುದಕ್ಕಿಂತ ಹೋರಾಟಗಾರ ಎಂದರೆ ಹೆಚ್ಚು ಸಂತಸವಾಗುತ್ತದೆ. ಹೋರಾಟ ಸಾಹಿತ್ಯದಿಂದ ಹೊರತಲ್ಲ, ಸಾಹಿತ್ಯವೂ ಹೋರಾಟದಿಂದ ಹೊರತಲ್ಲ ಎಂದರು. 

ಪ್ರಸಕ್ತ ಮಲೆನಾಡು ಜ್ವಲಂತ ಸಮಸ್ಯೆಗಳ ಬೀಡಾಗಿದೆ. 15ನೇ ಶತಮಾನದಲ್ಲಿ ದೇಶಕ್ಕೆ ಪಾಶ್ಚಾತ್ಯರು ಬಂದು ನಮ್ಮನ್ನಾಳಿದರು. ಬ್ರಿಟಿಷರ ಕಾಲದಲ್ಲಿ ಇಲ್ಲಿನ ಕಾಡುಗಳನ್ನು ಫಾರೆಸ್ಟ್ ಎಂದು ಕರೆದರು. ಕಷಾಯ ಸಂಸ್ಕೃತಿಯ ಮಲೆನಾಡಿಗೆ ಕಾಫಿ ಸಂಸ್ಕೃತಿ ತಂದರು. ಟೀ ಕಾಫಿಗಾಗಿ ಇಲ್ಲಿನ ಕಾಡುಗಳನ್ನೆಲ್ಲಾ ಬೋಳಿಸಿದರು. ಕ್ರಮೇಣ ಅವರು ಶಿಕಾರಿ ಹುಚ್ಚಿಗೆ ಕಾಡುಗಳನ್ನು ಮೀಸಲು ಅರಣ್ಯ ಎಂದು ಘೋಷಿಸಿ ಅದನ್ನೇ ಕಾನೂನು ಮಾಡಿದರು. ಈ ವೇಳೆ ಇಲ್ಲಿ ಕಾಡನ್ನೇ ದೇವರು ಮಾಡಿಕೊಂಡು ಪೂಜಿಸುತ್ತಿದ್ದವರ ನಂಬಿಕೆಗಳನ್ನು ಬುಡಮೇಲು ಮಾಡಿದರು. ಬ್ರಿಟಿಷರು ಇಲ್ಲಿನ ಕಾಡನ್ನು ಅರಣ್ಯಗಳನ್ನಾಗಿ ಮಾಡಿದರೇ ಹೊರತು ಅರಣ್ಯದಿಂದ ಜನರನ್ನು ಹೊರಹಾಕಲಿಲ್ಲ. ಆದರೆ ಇಂದಿನ ಸರಕಾರಗಳು ವಿದೇಶಿ ಕಂಪೆನಿಗಳಿಗಾಗಿ ನೂರಾರು ಅರಣ್ಯ ಕಾನೂನುಗಳ ಮೂಲಕ ಜನರನ್ನು ಹೊರ ಹಾಕುತ್ತಿವೆ. ಅರಣ್ಯ ಇಲಾಖೆ ಹುಟ್ಟಿಕೊಂಡಿದ್ದ ಅರಣ್ಯ ಕಾಪಾಡಲು ಅಲ್ಲ, ಅರಣ್ಯ ನಾಶ ಮಾಡಲು ಹುಟ್ಟಿಕೊಂಡಿದೆ. ಮಲೆನಾಡಿನಲ್ಲಿ ಕಾಡು ಹಾಗೂ ಜನರ ಬದುಕಿಗೆ ಅರಣ್ಯ ಇಲಾಖೆಯೇ ಕೊಡಲಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿ, ಮಲೆನಾಡಿನ ರೈತರೇ ಇಲ್ಲಿನ ಕಾಡಿನ ನಿಜವಾದ ವಾರಸುದಾರರು ಎಂದರು.

ಪರಿಸರ ಸಾಮ್ರಾಜ್ಯ ಶಾಹಿಗಳು ಮಲೆನಾಡಿನಲ್ಲಿ ಆದಿವಾಸಿಗಳೂ ಸೇರಿದಂತೆ ಜನರ ಬದುಕು, ಇಲ್ಲಿನ ಸಾಂಪ್ರದಾಯಿಕ ಅಡಿಕೆ, ಭತ್ತದ ಕೃಷಿ ಸಂಸ್ಕೃತಿಯನ್ನು ನಾಶ ಮಾಡಿದ್ದಾರೆ. ಈ ಶಕ್ತಿಗಳ ವಿರುದ್ಧ ನನ್ನದು 40 ವರ್ಷಗಳ ಹೋರಾಟ, ಮಲೆನಾಡು ನಮ್ಮದು, ಮಲೆನಾಡನ್ನು ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದ್ದು, ಹೊರಗಿನವ ಅಪ್ಪಣೆ ಮೇರೆಗೆ ಸರಕಾರ ಹಾಗೂ ನ್ಯಾಯಾಲಯಗಳು ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕಸ್ತೂರಿ ರಂಗನ್ ವರದಿ, ಗಾಡ್ಗಿಳ್ ವರದಿ, ಹುಲಿ ಯೋಜನೆ ಮತ್ತಿತರ ಯೋಜನೆಗಳ ಹೆಸರಿನಲ್ಲಿ ಮಲೆನಾಡು ಮತ್ತು ಇಲ್ಲಿನ ವಿಶಿಷ್ಟ ಸಂಸ್ಕೃತಿಯ ನಾಶಕ್ಕೆ ಮುಂದಾಗಿದ್ದಾರೆ. ಇದನ್ನು ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ. ತಪ್ಪಿದಲ್ಲಿ ಭವಿಷ್ಯದಲ್ಲಿ ಮಲೆನಾಡಿನಲ್ಲಿ ಕಾಡೂ ಇರಲ್ಲ, ಜನರೂ ಇರಲ್ಲ ಎಂದು ಅವರು ಎಚ್ಚರಿಸಿದರು.

ನಾನು ಪರಿಸರವಾದಿಯಲ್ಲ, ಪರಿಸರ ಕಾರ್ಯಕರ್ತ ಎಂದು ಸ್ಪಷ್ಟಪಡಿಸಿದ ಕಲ್ಕುಳಿ ವಿಠಲ್ ಹೆಗ್ಡೆ, ಜನರನ್ನು ಹೊರಗಿಟ್ಟು ನೋಡುವ ಪರಿಸರವಾದಕ್ಕೆ ನನ್ನ ವಿರೋಧವಿದೆ. ಇಂತಹ ಪರಿಸರವಾದ ಸಾಮ್ರಾಜ್ಯಶಾಹಿಗಳ ವಾದವಾಗಿದೆ. ಇಲ್ಲಿನ ಪರಿಸರ ವಾದಿಗಳಿಗೆ ಪರಿಸರ ಸಾಮ್ರಾಜ್ಯಶಾಹಿಗಳಿಂದ ಹಣಕಾಸಿನ ನೆರವು ಬರುತ್ತದೆ. ಇದಕ್ಕಾಗಿಯೇ ಇಂತಹ ಪರಿಸರ ವಾದಿಗಳು ಹುಟ್ಟಿಕೊಂಡಿದ್ದಾರೆ. ಭೂಮಿ ತಾಪ ಹೆಚ್ಚಾಗಲು ಇಂತಹ ಪರಿಸರವಾದವೇ ಕಾರಣವಾಗಿದ್ದು, ಇದನ್ನು ತಪ್ಪಿಸಲು ಭೂಮಿ ಹಸಿರಾಗಬೇಕು ಮತ್ತು ಆ ಹಸಿರು ಜನರ ಬದುಕಿಗೆ ಆಸರೆಯಾಗಬೇಕೆಂದು ನುಡಿದರು.

2019ರ ನ.16ರಂದು ಚಿಕ್ಕಮಗಳೂರು ಜಿಲ್ಲೆಯ ವಿದೇಶಿ ಪರಿಸರವಾದಿಗಳ ಸಂಘಟನೆಯೊಂದು 14 ರಾಜ್ಯಗಳ 21 ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕಾಡಿನಿಂದ ಜನರನ್ನು ಹೇಗೆ ಹೊರಗೆ ಹಾಕಬೇಕೆಂದು ತರಬೇತಿ ನೀಡಿದೆ. ಈ ಸಂದರ್ಭ ಜನರ ಬಳಕೆಯಲ್ಲಿದ್ದ 1ಲಕ್ಷ 38 ಸಾವಿರ ಎಕರೆ ಕಂದಾಯ ಭೂಮಿಯನ್ನು ಅಂದಿನ ಜಿಲ್ಲಾಧಿಕಾರಿಯೊಬ್ಬರು ರಾತ್ರೋ ರಾತ್ರಿ ಅರಣ್ಯ ಇಲಾಖೆ ವಶಕ್ಕೆ ನೀಡಿದರು. ಆ ಜಾಗದಲ್ಲಿ ಬದುಕು ಕಟ್ಟಿಕೊಂಡಿದ್ದ ಮಲೆನಾಡಿನ ಜನರ ಬದುಕು ಈಗ ಅತಂತ್ರವಾಗಿದ್ದು, ಅಂದಿನ ಜಿಲ್ಲಾಧಿಕಾರಿ ಕೆಲಸಕ್ಕೆ ನಂತರ ಇದೇ ಪರಿಸರವಾದಿಗಳು ಸನ್ಮಾನವನ್ನೂ ಮಾಡಿದ್ದಾರೆ. ಅರಣ್ಯ ಉಳಿಸುವ ನೆಪದಲ್ಲಿ ಜನರನ್ನು ಕಾಡಿನಿಂದ ಮಲೆನಾಡಿನಿಂದ ಹೊರ ಹಾಕುವ ಹುನ್ನಾರ, ಒಕ್ಕಲೆಬ್ಬಿಸುವ ಅರಣ್ಯ ಕಾಯ್ದೆಗಳು ನಮಗೆ ಬೇಕಾ? ಎಂದು ಪ್ರಶ್ನಿಸಿದ ವಿಠಲ್‍ ಹೆಗ್ಡೆ, ಮಲೆನಾಡಿನ ಭಗವತಿ ಕಾಡಿನಲ್ಲಿ ಶೇ.34 ಮಾತ್ರ ಸಿಂಗಳಿಕಗಳಿವೆ ಎಂದು ನ್ಯಾಯಾಲಯಕ್ಕೆ ಸುಳ್ಳು ವರದಿ ನೀಡಿದ ಅರಣ್ಯ ಇಲಾಖೆ ಇವುಗಳಿಗಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ ಜಾರಿ ಮಾಡಿ 10ರಿಂದ 12 ಸಾವಿರ ಆದಿವಾಸಿಗಳ ಬದುಕು ಕಿತ್ತುಕೊಂಡಿದೆ. ಉಳಿದವರಿಗೆ ಬದುಕಲೂ ಬಿಡುತ್ತಿಲ್ಲ. ಕಾಡಿನವರಿಗೆ ನೆಮ್ಮದಿ ಬದುಕಿಗೆ ಸರಕಾರ ಆಸರೆಯಾಗಬೇಕು. ಅವರನ್ನು ಅಲ್ಲೇ ವಾಸಿಸಲು ಬಿಡಬೇಕು. ಇಲ್ಲವೇ ಸೂಕ್ತ ಪುನರ್ವಸತಿಯನ್ನಾದರೂ ಕಲ್ಪಿಸಿಕೊಡಿ ಎಂದು ಅವರು ಮನವಿ ಮಾಡಿದರು.

ಸಮ್ಮೇಳದಲ್ಲಿ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ, ರಂಗಕರ್ಮಿ ಪ್ರಸನ್ನ, ಹೋರಾಟಗಾರ ಕಡಿದಾಳ್ ಶಾಮಣ್ಣ, ಶಾಸಕರಾದ ರಾಜೇಗೌಡ, ಭೋಜೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಚಿಂತಕ ರಾಜೇಂದ್ರ ಚೆನ್ನಿ ಮತ್ತಿತರರು ಮಾತನಾಡಿದರು.

ವಿಠಲ್ ಹಗ್ಡೆ ಪತ್ನಿ ಎಸ್ತಲಿನ್, ನಿಕಟಪೂರ್ವ ಸಾಹಿತ್ಯ ಸಮ್ಮೇಳನಾದ್ಯಕ್ಷ ಜಯಪ್ಪಗೌಡ, ಶೃಂಗೇರಿ ಕಸಾಪ ಅಧ್ಯಕ್ಷ ಮಂದಾರ ಸೇರಿದಂತೆ ಎಲ್ಲ ತಾಲೂಕುಗಳ ಕಸಾಪ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಅನುಮತಿ ಇಲ್ಲದ ಕಾರಣಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಕೊನೆ ಕ್ಷಣದಲ್ಲಿ ಕಸಾಪ ಮುಖಂಡರು ಕೈಬಿಟ್ಟಿದ್ದರು.

ಮಲೆನಾಡಿನಲ್ಲಿ ಅಡಿಕೆ, ಭತ್ತ ಬೆಳೆಯುವ ಸಂಸ್ಕೃತಿ ಅನಾದಿಕಾಲದ್ದು. ಈ ಸಂಸ್ಕೃತಿಗೆ ಈಗ ಅತಿವೃಷ್ಟಿ, ರೋಗಗಳೊಂದಿಗೆ ಅರಣ್ಯ ಯೋಜನೆಗಳು ಕೊಡಲಿ ಪೆಟ್ಟು ನೀಡಿವೆ. ಅಡಿಕೆಯನ್ನು ಆರೋಗ್ಯಕ್ಕೆ ಹಾನಿಕಾರಕ ಎಂದು ಘೋಷಿಸಿ ನಿಷೇಧಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿದ್ಧತೆ ನಡೆದಿದೆ. ಸರಕಾರಗಳು ಇದನ್ನು ವಿರೋಧಿಸಲು ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ಅಡಿಕೆ ಇಲ್ಲಿನ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದು, ಈ ಹುನ್ನಾರದ ವಿರುದ್ಧ ಜನ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ಭತ್ತ ಬೆಳೆಯುವ ಸಂಸ್ಕೃತಿ ನಿಧಾನವಾಗಿ ಮಾಯವಾಗುತ್ತಿದ್ದು, ಶೇ.80ರಷ್ಟು ಭತ್ತದ ಕೃಷಿಕರು ಭತ್ತ ಬೆಳೆಯುವವುದನ್ನು ನಿಲ್ಲಿಸಿದ್ದಾರೆ. ಸಮ್ಮೇಳನದ ಮೂಲಕ ಅಡಿಕೆ, ಭತ್ತದ ಕೃಷಿಕರ ಪರವಾಗಿ ಸರಕಾರ ನಿಲ್ಲಬೇಕೆಂದು ಆಗ್ರಹಿಸುತ್ತೇನೆ.
- ಕಲ್ಕುಳಿ ವಿಠಲ್ ಹೆಗ್ಡೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News