ಮನು ಬಳಿಗಾರ್ ಗೆ ನಾಡೋಜ ಪ್ರಶಸ್ತಿ ನೀಡಿ ಪ್ರಶಸ್ತಿಯ ಗೌರವ ಕಳೆದಂತಾಗಿದೆ: ಕುಂ.ವೀರಭದ್ರಪ್ಪ

Update: 2020-01-10 16:27 GMT

ಚಿಕ್ಕಮಗಳೂರು, ಜ.10: ನಮ್ಮಂತಹ ಸಾಹಿತಿಗಳ ಒಟ್ಟು ಸಾಹಿತ್ಯ ವಿಠಲ್ ಹೆಗ್ಡೆ ಅವರ ಮಂಗನ ಬ್ಯಾಟೆಯಂತಹ ಒಂದು ಪುಸ್ತಕಕ್ಕೆ ಸಮ. ಅರಸೊತ್ತಿಗೆ ವಿರುದ್ಧ ಬೀದಿಯಲ್ಲಿದ್ದುಕೊಂಡು ಬರೆಯುವವನು, ಧ್ವನಿ ಎತ್ತುವವನೇ ನಿಜವಾದ ಸಾಹಿತಿ ಎಂದು ಹೆಸರಾಂತ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಿಸಿದ್ದಾರೆ.

ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಶುಕ್ರವಾರ ನಡೆದ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಲ್ಲಿ ಮಾತನಾಡಿದ ಅವರು, ತುಳಿತಕ್ಕೊಳಗಾದವರ, ಶೋಷಿತರ, ದಮನಿತರ ಪರ ನಡೆಯುವ ಎಲ್ಲ ರೀತಿಯ ಹೋರಾಟವೂ ಸಾಹಿತ್ಯವೇ ಆಗಿದೆ. ಹೋರಾಟ ಇಲ್ಲದೇ ಸಾಹಿತ್ಯವೂ ಇಲ್ಲ. ವಿಠಲ್ ಹೆಗ್ಡೆ ಅಂತಹ ದಿಟ್ಟ ಹೋರಾಟಗಾರ. ಅಂತವರಿಗೆ ನಕ್ಸಲೀಯ ಎಂದು ಹಣೆಪಟ್ಟಿ ಕಟ್ಟಿ ಬಾಯಿ ಮುಚ್ಚಿಸಲಾಗುತ್ತಿದೆ. ಅನ್ಯಾಯ, ಅಕ್ರಮಗಳ ವಿರುದ್ಧ ಧ್ವನಿ ಎತ್ತುವವರ ವಿರುದ್ಧವೂ ಪ್ರಭುತ್ವ ಇದೇ ತಂತ್ರವನ್ನೂ ಮಾಡುತ್ತಾ ಬಂದಿದೆ ಎಂದ ಅವರು, ಕನ್ನಡ ಭಾಷೆ, ಸಾಹಿತ್ಯ ಪ್ರತಿರೋಧಗಳಿಂದಾಗಿಯೇ ಬೆಳೆದಿದೆ. ಪ್ರತಿರೋಧ, ಒತ್ತಡ ಇದ್ದಾಗಲೇ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಲಿವೆ ಎಂಬುದಕ್ಕೆ ಶೃಂಗೇರಿಯ ಸಮ್ಮೇಳನದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿರುವ ಜನರೇ ಸಾಕ್ಷಿ ಎಂದರು.

ಸಚಿವ ಸಿಟಿ ರವಿ ಅಪ್ಪಣೆ ಮೇರೆಗೆ ಅನುದಾನ ತಡೆ ಹಿಡಿದಿರುವ ಕೇಂದ್ರ ಕಸಾಪ ಅಧ್ಯಕ್ಷ ಮನು ಬಳಿಗಾರ್ ನಾಡೋಜ ಪ್ರಶಸ್ತಿ ಪುರಸ್ಕೃತರು, ಯಾವ ಸಾಧನೆಗಾಗಿ ನಾಡೋಜ ಪ್ರಶಸ್ತಿ ನೀಡಿದರೋ ಗೊತ್ತಿಲ್ಲ. ಕನ್ನಡದ ಗೌರವ ಹಾಳು ಮಾಡುವ ಇಂತವರಿಗೆ ನಾಡೋಜಾ ಪ್ರಶಸ್ತಿ ನೀಡಿ ಪ್ರಶಸ್ತಿಯ ಗೌರವ ಕಳೆದಂತಾಗಿದೆ. ಮನು ಬಳಿಗಾರ್ ಅವರಿಗೆ ಎಮ್ಮೆಲ್ಸಿಯಂತಹ ಸ್ಥಾನಕ್ಕೆ ಹೋಗುವ ಆಸೆ ಇರಬಹುದು ಎಂದು ವಾಗ್ದಾಳಿ ನಡೆಸಿದರು.

ಕನ್ನಡದ ಹಬ್ಬಗಳು ನಡೆದಾಗ ಎಲ್ಲರೂ ಸಹಕಾರ ನೀಡಲು ಮುಂದಾಗುತ್ತಾರೆ. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಬೇಕು. ಆದರೆ ಕೆಲ ಪ್ರೇತಾತ್ಮಗಳು ಆತ್ಮತೃಪ್ತಿ ಆಗದಿದ್ದಲ್ಲಿ ಅಂತರ್ ಪಿಶಾಚಿಗಳಾಗಿ ತಿರುಗುತ್ತಿರುತ್ತವೆ. ಅಂತಹ ಪ್ರೇತಾತ್ಮಗಳು ಸಮಾಜದಲ್ಲಿ ಭಾರೀ ಸಂಖ್ಯೆಯಲ್ಲಿದ್ದು, ಸಾವರ್ಕರ್, ಗೋಳ್ವಾಲ್ಕರ್ ಅವರ ಪ್ರೇತಾತ್ಮಗಳು ಈಗ ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ವೇಳೆ ಕೆಲವರ ಮೇಲೆ ಬಂದಿವೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿರೋಧ, ಅಡ್ಡಿ ಮಾಡುತ್ತಿವೆ. ಅಂತಹ ಪ್ರೇತಾತ್ಮಗಳ ಬಗ್ಗೆ ತಲೆ ಕಡೆಸಿಕೊಳ್ಳುವ ಅಗತ್ಯವಿಲ್ಲ ಎಂದು ಕುಂ.ವೀರಭದ್ರಪ್ಪ ಸಮ್ಮೇಳನ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದವರ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಚಿಕ್ಕಮಗಳೂರಿನ ಅಳಿಯ, ಸಿ.ಟಿ.ರವಿ ನನಗೆ ಪರಿಚಯಸ್ಥ, ಚಿಕ್ಕಮಗಳೂರಿನಲ್ಲಿ ಆತನ ಮನೆ ಚಿಕಾಗೋದಿಂದ ಕ್ಯಾಲಿಪೋರ್ನಿಯಾದವರೆಗಿನ ಉದ್ದದಷ್ಟು ಉದ್ದವಿದೆ. ಅಧಿಕಾರ ಇಲ್ಲದಿದ್ದಾಗ ಆತ ನನ್ನೊಂದಿಗೆ ವಾಕ್‍ಗೆ ಬರುತ್ತಿದ್ದ, ಕಲ್ಕುಳಿ ವಿಠಲ್ ಹೆಗ್ಡೆ ಸಮ್ಮೇಳನದ ಅಧ್ಯಕ್ಷರಾಗಿರುವ ವೇಳೆ ಸಿ.ಟಿ.ರವಿಗೆ ಅಧಿಕಾರ ಸಿಕ್ಕಿದೆ. ಹಾಗಾಗಿ ಆತನ ಮೇಲೂ ಸಾವರ್ಕರ್ ನಂತವರ ಪ್ರೇತಾತ್ಮ ಸೇರಿಕೊಂಡಿದೆ. ಈ ಕಾರಣಕ್ಕೆ ಸಮ್ಮೇಳನಕ್ಕೆ ರವಿ ಅನುದಾನ ತಡೆ ಹಿಡಿದರಿಬಹುದೆಂದು ಅವರು ಸಚಿವ ರವಿ ವಿರುದ್ಧವೂ ಚಾಟಿ ಬೀಸಿದರು.

ಭಾರತ ದೇಶ ಸರ್ವ ಜನಾಂಗದವರ ಶಾಂತಿಯ ತೋಟ. ಇಲ್ಲಿಗೆ ಯೂರೋಪ್, ಪಾರ್ಸಿ, ಮುಸ್ಲಿಮರು, ಪಾಶ್ಚಾತ್ಯರು ಬಂದಿದ್ದಾರೆ, ಬರುತ್ತಿದ್ದಾರೆ. ಈ ದೇಶ ಇವರೆಲ್ಲರಿರುವ ಶೇ.98ರಷ್ಟು ಜನರ ದೇಶವಾಗಿದೆ, ಆದರೆ ಕೇವಲ ಶೇ.2ರಷ್ಟಿರುವವ ಸಾವರ್ಕರ್ ಸಂತತಿಯವರು ಕೂಗಾಡಿದರೆ ದೇಶ ಒಡೆಯಲ್ಲ. ಕನ್ನಡ ಭಾಷೆಯ ಸಮ್ಮೇಳನಗಳೂ ನಿಲ್ಲಲ್ಲ ಎಂದ ಅವರು, ಸಾಹಿತಿಯಾದವರು ಬೀದಿಯಲ್ಲಿದ್ದು, ಬೀದಿಯಲ್ಲಿರುವವರ ಪರವಾಗಿ ಬರೆಯಬೇಕು. ಆತ ಮಾತ್ರ ಒಳ್ಳೆಯ ಸಾಹಿತಿ, ಲೇಖಕನಾಗಲು ಸಾಧ್ಯ ಎಂದರು.

ಹಿಂದೆ ಬುದ್ಧ, ಏಸು, ಪೈಗಂಬರ್, ಬಸವಣ್ಣ, ಆದಿಕವಿ ಪಂಪ, ಕುಮಾರವ್ಯಾಸ ಸೇರಿದಂತೆ ವಚನಕಾರರೂ ಹಾಗೂ ಕುವೆಂಪು, ಲಂಕೇಶ್ ಅವರಂತಹ ಸಾವಿರಾರು ಸಾಹಿತಿಗಳು ಅರಸೊತ್ತಿಗೆ ವಿರುದ್ಧ ಧ್ವನಿ ಎತ್ತಿ ಬೀದಿಯಲ್ಲಿ ಜನರ ಮಧ್ಯೆ, ಜನರ ಪರವಾಗಿ ಬರೆದರು, ಮಾತನಾಡಿದರು. ಅವರನ್ನು ಯಾರಾದರೂ, ಯಾವ ಸರಕಾರದವಾದರೂ ನಕ್ಸಲೇಟ್ ಎಂದು ಕರೆದಿದೆಯೇ ಎಂದು ಪ್ರಶ್ನಿಸಿದ ಅವರು, ವಿಠಲ್ ಹೆಗ್ಡೆ ಆದಿವಾಸಿಗಳು, ಬಡಜನರು, ಕಾರ್ಮಿಕರು, ಅರಣ್ಯದಿಂದ ಹೊರ ದಬ್ಬಿಸಿಕೊಳ್ಳುವವರ ಪರ ಮಾತನಾಡಿದ್ದಾರೆ, ಬರೆದಿದ್ದಾರೆ. ವಿಠಲ್ ಹಗ್ಡೆ ಮಾತ್ರ ಸರಕಾರಗಳಿಗೆ, ರಾಜಕಾರಣಿಗಳಿಗೆ, ಪೊಲೀಸರಿಗೆ ನಕ್ಸಲೇಟ್ ಆಗಿ ಕಾಣುತ್ತಿದ್ದಾರೆ ಎಂದರು.

ಎಡಪಂಥೀಯರನ್ನು ದೇಶದ್ರೋಹಿಗಳಂತೆ ಕಾಣುವುದನ್ನು ನಿಲ್ಲಿಸಬೇಕು. ವಿಶ್ವದಲ್ಲಿ ಅತೀ ಹೆಚ್ಚು ನೊಬೆಲ್ ಪ್ರಶಸ್ತಿ ಪಡೆದವರ ಪೈಕಿ ಶೇ.70 ರಷ್ಟು ಮಂದಿ ಎಡಪಂಥೀಯರಿದ್ದಾರೆ. ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಸಾಹಿತ್ಯದ ಮೂಲಕ, ಹೋರಾಟಗಳ ಮೂಲಕ ಶ್ರೀಮಂತಗೊಳಿಸುತ್ತಿರುವುದೂ ಎಡಪಂಥೀಯರು, ಗ್ರಾಮೀಣ ಲೇಖಕರು. ಕನ್ನಡ ಸಾಹಿತ್ಯ ದೊಡ್ಡಮಟ್ಟದಲ್ಲಿ ಬೆಳೆದಿರುವುದಕ್ಕೆ ಬೀದಿ ಬದಿಯ, ಗ್ರಾಮೀಣ, ಎಡಪಂಥದ ಸಾಹಿತಿಗಳ, ಲೇಖಕರ, ಹೋರಾಟಗಾರರೇ ಕಾರಣ ಎಂದು ಅವರು ಹೇಳಿದರು.

ಚಿಂತಕ ರಾಜೇಂದ್ರ ಚೆನ್ನಿ ಮಾತನಾಡಿ, ಭಾರೀ ವಿರೋಧದ ನಡುವೆ ಶೃಂಗೇರಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ಐತಿಹಾಸಿಕ ಸಮ್ಮೇಳನವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಗಳ ಹರಣವಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಿನ್ನತೆಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಅವಕಾಶ ಸಿಗುತ್ತದೆ. ಸಾಹಿತ್ಯ ಸಮ್ಮೇಳನಗಳ ಮುಖ್ಯ ಉದ್ದೇಶ ಸಾಮಾಜಿಕ ನ್ಯಾಯಕ್ಕಾಗಿ ಧ್ವನಿಯಾಗುವುದಾಗಿದೆ. ಹೀಗಾದಾಗ ಮಾತ್ರ ಭಾಷೆ ಬದುಕುತ್ತದೆ ಎಂದ ಅವರು ಕಲ್ಕುಳಿ ವಿಠಲ್ ಹೆಗ್ಡೆ ಅವರು ತನಗೆ ಸಮಾಜದೊಂದಿಗೆ ಮಾತನಾಡುವುದನ್ನು ಕಲಿಸಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, ಕಸಾಪ ಸ್ವಾಯತ್ತ ಸಂಸ್ಥೆಯಾಗಿದೆ. ಅದರಲ್ಲಿ ಸರಕಾರವಾಗಲೀ, ರಾಜಕಾರಣವಾಗಲೀ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಕನ್ನಡದ ಏಳಿಗೆಗೆ ಅದು ಮಾರಕವಾಗಲಿದೆ. ಕಸಾಪ ಕಾರ್ಯಕಾರಿ ಮಂಡಳಿ ತಳೆದ ನಿಲುವು ಅಂತಿಮ. ಅದರ ಜಾರಿಗೆ ರಾಜಕಾರಣಿಗಳು, ಸರಕಾರ ಸಹಕಾರ ನೀಡಬೇಕು. ಕೇವಲ ಸೈದ್ಧಾಂತಿಕ ಭಿನ್ನತೆಯಿಂದಾಗಿ ಇಡೀ ಸಮ್ಮೇಳನವನ್ನು ವಿರೋಧ ಮಾಡುವುದು ಸಂಸ್ಕೃತಿಯಲ್ಲ, ರಾಜಕಾರಣವೂ ಅಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಪೊಲೀಸ್ ಇಲಾಖೆ, ಜಿಲ್ಲಾಡಳಿತಕ್ಕೆ ನಿಯಮಾವಳಿಗಳ ಅರಿವಿರಬೇಕು, ಸಾಹಿತ್ಯ ಸಮ್ಮೇಳನ ನಡೆಯುವಾಗ, ಹೆಮ್ಮೆಯ ಸಾಹಿತಿಗಳು ಮಾತನಾಡುವಾಗ ಗೊಂದಲ, ಧಿಕ್ಕಾರ ಕೂಗಲು ಅವಕಾಶ ನೀಡಬಾರದೆಂಬ ಅರಿವಿರಬೇಕು. ಧಿಕ್ಕಾರ ಕೂಗುವವರನ್ನು ಬಸ್‍ಗಳಿಗೆ ತುಂಬಿ ಜೈಲಿಗಟ್ಟಿ, ನಮಗೆ ಅವರ ಕರ್ಕಶ ಧ್ವನಿಗಳು ಕೇಳಬಾರದು. ಧಿಕ್ಕಾರ ಕೂಗಲೇ ಬೇಕಿದ್ದರೆ ದೂರದೆಲ್ಲಾದರೂ ಟೆಂಟ್ ಹಾಕಿ ಕೊಡಿ. ನಾವಿಲ್ಲಿಗೆ ಕಾಟಾಚಾರಕ್ಕೆ ಬಂದಿಲ್ಲ, ಸಾಹಿತ್ಯ, ಕನ್ನಡಕ್ಕಾಗಿ ಬಂದಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನಾಧ್ಯಕ್ಷ ವಿಠಲ್ ಹಗ್ಡೆ ಅಧ್ಯಕ್ಷೀಯ ಭಾಷಣ ಮಾಡಿದರು. ಇದೇ ವೇಳೆ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ವಿಪ ಸದಸ್ಯ ಭೋಜೇಗೌಡ ಬಿಡುಗಡೆ ಮಾಡಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾತ್ರಿ ಮೂರು ಮತ್ತುಗಳು ಎಂಬ ಹಾಸ್ಯ ನಾಟಕಗಳನ್ನು ಪ್ರದರ್ಶಿಸಲಾಯಿತು. 

ಭಾವುಕರಾದ ಕುಂದೂರು ಅಶೋಕ್ 
"ಸಮ್ಮೇಳನಕ್ಕೆ ವಿರೋಧ ವ್ಯಕ್ತಪಡಿಸಿದ ಜಾತಿವಾದಿಗಳು ಗೆದ್ದಿಲ್ಲ, ಕೋಮುವಾದಿಗಳೂ ಗೆದ್ದಿಲ್ಲ, ಕನ್ನಡ ಗೆದ್ದಿದೆ. ಆಹ್ವಾನಿಸಿದ ಜನರು ಬಂದಿಲ್ಲ, ನೈಜ ಕನ್ನಡಾಭಿಮಾನಿಗಳು ಆಹ್ವಾನಿಸದಿದ್ದರೂ ಬಂದಿದ್ದಾರೆ. ಸವಾಲಾಗಿದ್ದ ಸಮ್ಮೇಳ ಭಾರೀ ಯಶಕಂಡಿದೆ, ಇದು ನಮ್ಮ ಶಕ್ತಿಯಲ್ಲ, ಕನ್ನಡದ ಶಕ್ತಿಯಾಗಿದೆ. ಕನ್ನಡಿಗರಾಗಿ ಕೆಲವರು ಪ್ರತಿಭಟಿಸಿದ್ದು, ಅಪರಾಧವಾಗಿದೆ. ಇದು ವ್ಯಕ್ತಿಯ ಹಬ್ಬವಲ್ಲ, ಕನ್ನಡದ ಹಬ್ಬ, ಪ್ರತಿಭಟಿಸಿದವರಿಗೆ ಅದೇ ತಿರುಗು ಬಾಣವಾಗಲಿದೆ, ಶಿಕ್ಷೆಯೂ ಆಗುತ್ತದೆ. ಹೋರಾಟಗಾರರ ಮೇಲೆ ವಿನಾಕಾರಣ ಅಪಪ್ರಚಾರ ಮಾಡಬೇಡಿ, ನಿರಾಧಾರ ಆರೋಪ ಮಾಡಬೇಡಿ ಎಂದು ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಭಾವುಕರಾದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News