ಆಕ್ಲೆಂಡ್ ಓಪನ್ ಟೆನಿಸ್ ಟೂರ್ನಿ: ಸೆರೆನಾ, ವೋಝ್ನಿಯಾಕಿ ಸೆಮಿ ಫೈನಲ್‌ಗೆ

Update: 2020-01-10 18:50 GMT

ಆಕ್ಲೆಂಡ್, ಜ.10: ಕಿರಿಯ ವಯಸ್ಸಿನ ಆಟಗಾರ್ತಿ ಲೌರಾ ಸಿಗ್ಮಂಡ್‌ರನ್ನು ಮಣಿಸಿದ ಸೆರೆನಾ ವಿಲಿಯಮ್ಸ್ ಆಕ್ಲೆಂಡ್ ಕ್ಲಾಸಿಕ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದರು. 23 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಆಗಿರುವ ಸೆರೆನಾ ಮೂರು ವರ್ಷಗಳ ಬಳಿಕ ಮೊದಲ ಬಾರಿ ಪ್ರಶಸ್ತಿ ಜಯಿಸುವತ್ತ ಚಿತ್ತವಿರಿಸಿದೆ.

ಅಮೆರಿಕದ ಯುವ ಆಟಗಾರ್ತಿ ಕೊಕೊ ಗೌಫ್‌ರನ್ನು ಮಣಿಸಿದ ಸೀಗ್ಮೆಂಡ್ ಅಂತಿಮ-8ರ ಘಟ್ಟ ತಲುಪಿದರು. ಶುಕ್ರವಾರ 90 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸೆರೆನಾ ಅವರು ಸಿಗ್ಮೆಂಡ್‌ರನ್ನು 6-4, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.

ಸೆರೆನಾ 2017ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದ್ದರು. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಯುಎಸ್ ಓಪನ್‌ನ ಫೈನಲ್‌ನಲ್ಲಿ ಸೋತ ಬಳಿಕ ಸೆರೆನಾ ಹೆಚ್ಚು ಪಂದ್ಯಗಳಲ್ಲಿ ಆಡಲಿಲ್ಲ.

ಸೆರನಾ ಇದೀಗ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ತಲುಪಿದ್ದಾರೆ. ಈ ಎರಡು ವಿಭಾಗದಲ್ಲಿ ಜಯ ಸಾಧಿಸಿ ಈ ತಿಂಗಳು ಆರಂಭವಾಗಲಿರುವ ವರ್ಷದ ಮೊದಲ ಗ್ರಾನ್‌ಸ್ಲಾಮ್ ಆಸ್ಟ್ರೇಲಿಯನ್ ಓಪನ್‌ನಲ್ಲಿ 24ನೇ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ಮಾಜಿ ನಂ.1 ಆಟಗಾರ್ತಿ ವೋಝ್ನಿಯಾಕಿ ಹಾಲಿ ಚಾಂಪಿಯನ್ ಹಾಗೂ ಟೂರ್ನಿಯ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಜುಲಿಯಾ ಜಾರ್ಜಸ್‌ರನ್ನು 6-1, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News