ಶೇ.50ರಷ್ಟು ಬಿಜೆಪಿ, ಆರೆಸ್ಸೆಸ್ ಬೆಂಬಲಿಗರೇ ಮುಂದೆ ಕೇಂದ್ರದ ವಿರುದ್ಧ ಹೋರಾಡಲಿದ್ದಾರೆ: ಮಹೇಂದ್ರ ಕುಮಾರ್

Update: 2020-01-11 14:04 GMT

ಮಡಿಕೇರಿ, ಜ.11: ಎನ್‍ಆರ್‍ಸಿ ಕಾಯ್ದೆಯ ಬಗ್ಗೆ ಕೇಂದ್ರ ಸರ್ಕಾರ ಜನ ಯಾವ ದಾಖಲೆಗಳನ್ನು ನೀಡಬೇಕೆಂದು ಎಲ್ಲೂ ತಿಳಿಸಿಲ್ಲ, ಯಾವ ಸ್ಪಷ್ಟತೆಯನ್ನೂ ಬಹಿರಂಗ ಪಡಿಸಿಲ್ಲ. ಇದನ್ನು ಜನರ ಮುಂದಿಟ್ಟ ದಿನವೇ ಬಿಜೆಪಿ ಮತ್ತು ಆರೆಸ್ಸೆಸ್ ನ್ನು ಬೆಂಬಲಿಸುವ ಶೇ.50 ರಷ್ಟು ಮಂದಿ ಕೇಂದ್ರದ ವಿರುದ್ಧ ಹೋರಾಟಕ್ಕೆ ಇಳಿಯಲಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಗತಿಪರರ ಜನಾಂದೋಲನ ವೇದಿಕೆ ವತಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ‘ಪೌರತ್ವ ಕಾಯ್ದೆ ವಿರುದ್ಧದ ಜನಾಂದೋಲನ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಗಳಿಂದ ಲಕ್ಷಾಂತರ ಹಿಂದೂಗಳಿಗೆ ತೊಂದರೆಯಾಗಲಿದೆ. ದೇಶದಲ್ಲಿರುವ ದಲಿತ ಸಮೂಹದ ಶೇ.90 ರಷ್ಟು ಮಂದಿಗೆ ದಾಖಲೆಗಳೇ ಇಲ್ಲ. ಅನಾಥರು, ವೇಶ್ಯೆಯರು, ಕಾಡಿನಲ್ಲಿ ವಾಸಿಸುವ ಗಿರಿಜನರು, ಬಡವರ್ಗದ ಬ್ರಾಹ್ಮಣರು, ಒಕ್ಕಲಿಗರು, ಬಂಟರು, ಬಿಲ್ಲವರು ಸೇರಿದಂತೆ ಎಲ್ಲಾ ವರ್ಗದಲ್ಲಿ ದಾಖಲೆಗಳಿಲ್ಲದ ಅನೇಕರಿದ್ದಾರೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಯಾವ ದಾಖಲೆಗಳನ್ನು ನೀಡಬೇಕೆನ್ನುವ ಮಾಹಿತಿಯನ್ನು ಬಹಿರಂಗಪಡಿಸುವ ಧೈರ್ಯ ಮಾಡಿಲ್ಲವೆಂದು ಮಹೇಂದ್ರ ಕುಮಾರ್ ಟೀಕಿಸಿದರು.

ಭಾರತ ದೇಶದ ಒಳಗೇ ತುಳಿತಕ್ಕೆ ಒಳಗಾದವರಿಗೆ ವಾಸಿಸಲು ಜಾಗ ನೀಡದ ಪರಿಸ್ಥಿತಿ ಇದೆ. ಇನ್ನು ಹೊರ ದೇಶದಿಂದ ಬರುವ ನೊಂದ ಜೀವಗಳಿಗೆ ಇಲ್ಲಿನವರು ಜಾಗ ನಿಡುತ್ತಾರೆಯೇ ಎಂದು ಅವರು ಪ್ರಶ್ನಿಸಿದರು. 

ಆರೆಸ್ಸೆಸ್ ಮತ್ತು ಬಿಜೆಪಿಯ ರಾಷ್ಟ್ರೀಯತೆ ಹಿಂದೂ ಮತ್ತು ಮುಸ್ಲಿಮರ ನಡುವೆ ಅಡ್ಡಗೋಡೆ ನಿರ್ಮಿಸುವುದೇ ಆಗಿದೆ ಎಂದು ಆರೋಪಿಸಿದ ಮಹೇಂದ್ರ ಕುಮಾರ್, ಇದನ್ನು ಒಡೆದು ಹಾಕಲು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದರು. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು ಕೇವಲ ಮುಸ್ಲಿಮರ ಸಮಸ್ಯೆಯಲ್ಲ, ಇದು ಈ ನೆಲದ ಸಮಸ್ಯೆಯಾಗಿರುವುದರಿಂದ ಎಲ್ಲರೂ ಸೇರಿ ಹೋರಾಟ ನಡೆಸಬೇಕಾಗಿದೆ. ಬ್ರಾಹ್ಮಣ್ಯದ ಕಪಿಮುಷ್ಠಿಯಲ್ಲಿ ಸಿಲುಕಿ ಕಷ್ಟ ಅನುಭವಿಸುತ್ತಿರುವ ಹಿಂದೂ ಸಮಾಜ, ಆರೆಸ್ಸೆಸ್ ಮತ್ತು ಬಿಜೆಪಿಯ ಮತ್ತೊಂದು ಮುಖವನ್ನು ಅರಿತುಕೊಳ್ಳಬೇಕಾಗಿದೆ. ಹಿಂದೂ ಸಮಾಜೋತ್ಸವಗಳಲ್ಲಿ ಹಿಂದೂಗಳ ಅಭ್ಯುದಯದ ವಿಚಾರಗಳನ್ನು ಪ್ರಸ್ತಾಪಿಸದೆ ಯಾವುದೋ ಒಂದು ಭಾಗದಲ್ಲಿ ಸಂಭವಿಸಿದ ಘಟನೆಗಳನ್ನು ಪ್ರಸ್ತುತ ಪಡಿಸಿ ಮುಸ್ಲಿಂ ವಿರೋಧಿ ವಾತಾವರಣ ಸೃಷ್ಟಿಸಲಾಗುತ್ತಿದೆಯೆಂದು ಮಹೇಂದ್ರ ಕುಮಾರ್ ಆರೋಪಿಸಿದರು.

ಸಿಂಧಗಿಯಲ್ಲಿ ಆರೆಸ್ಸೆಸ್ ಯುವಕರೇ ಪಾಕ್ ಧ್ವಜ ಹಾರಿಸಿದವರೆಂಬ ಆರೋಪ ಸಾಬೀತಾದಾಗ, ದಾರಿ ತಪ್ಪಿದ ಹುಡುಗರು ಎಂದು ಆರೆಸ್ಸೆಸ್ ಸುಮ್ಮನಾಯಿತು. ಆದರೆ, ಇದಕ್ಕೂ ಮೊದಲು ಪಾಕ್ ಧ್ವಜವನ್ನು ಮುಸ್ಲಿಮರೇ ಹಾರಿಸಿದ್ದಾರೆಂದು ಇಡೀ ಮುಸ್ಲಿಂ ಸಮುದಾಯವನ್ನು ದ್ವೇಷಿಸುವ ಪ್ರತಿಭಟನೆಗಳು ನಡೆದವು. ಈ ರೀತಿಯ ದ್ವಂದ್ವ ನಿಲುವುಗಳ ಮೂಲಕ ಆರೆಸ್ಸೆಸ್ ಮತ್ತು ಬಿಜೆಪಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಭಾರತವನ್ನು ಭಾರತವನ್ನಾಗಿ ಕಟ್ಟದೆ ಇರುವುದೇ ಇವರ ದೇಶ ಭಕ್ತಿಯಾಗಿದ್ದು, ಇಂದು ದೇಶವನ್ನು ಭಯಾನಕ ವ್ಯವಸ್ಥೆಗೆ ತಳ್ಳಿದ್ದಾರೆ ಎಂದು ಆರೋಪಿಸಿದರು.

ಸ್ವಾತಂತ್ರ್ಯ ಪೂರ್ವ ಭಾರತವನ್ನು ರಚನೆ ಮಾಡಲು ಹೊರಟಿರುವ ಕೇಂದ್ರ ಸರ್ಕಾರ, ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್ ಶಾ ಅವರ ಗುಂಗಿನಲ್ಲಿರುವವರು ದೇಶದಲ್ಲಿ ನಡೆಯುತ್ತಿರುವ ಕಟು ಸತ್ಯವನ್ನು ಮೊದಲು ಅರಿತುಕೊಳ್ಳಬೇಕೆಂದರು. 

ಜೈಕಾರಕ್ಕೆ ಹಿಂಜರಿಕೆ ಬೇಡ
ಧರ್ಮಕ್ಕಿಂತ ದೇಶ ಮೊದಲು ಎಂದು ಕುರ್ಆನ್ ಹೇಳುತ್ತದೆ, ಕುರ್ಆನ್ ತಾಯಿ ಸ್ವರೂಪವನ್ನು ತಳ್ಳಿ ಹಾಕಿಲ್ಲ. ಆದ್ದರಿಂದ ಭಾರತ್ ಮಾತಾಕೀ ಜೈ ಎನ್ನುವುದಕ್ಕೆ ಮುಸ್ಲಿಮರು ಹಿಂದೇಟು ಹಾಕಬಾರದು. ಈ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೊಡೆದೋಡಿಸುವ ಕೆಲಸವಾಗಬೇಕು. ಪ್ರತಿಯೊಬ್ಬ ದೇಶಭಕ್ತರು ಜನರ ಬಳಿ ತೆರಳಿ ಸಮಸ್ಯೆಗಳ ಧ್ವನಿಯಾಗಬೇಕು. ಪಾಕಿಸ್ತಾನದಂತಹ ಸ್ಥಿತಿ ಭಾರತಕ್ಕೆ ಬರಬಾರದು ಎನ್ನುವುದೇ ನಮ್ಮ ಹೋರಾಟದ ಗುರಿಯೆಂದು ಮಹೇಂದ್ರ ಕುಮಾರ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News