ಟ್ವೆಂಟಿ-20: ಅಶ್ವಿನ್, ಚಹಾಲ್ ದಾಖಲೆ ಮುರಿದ ಜಸ್‌ಪ್ರೀತ್ ಬುಮ್ರಾ

Update: 2020-01-11 18:41 GMT

ಪುಣೆ, ಜ.11: ಸುಮಾರು ನಾಲ್ಕು ತಿಂಗಳ ಅಂತರದ ಬಳಿಕ ಮೊದಲ ಬಾರಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಿದ ಜಸ್‌ಪ್ರೀತ್ ಬುಮ್ರಾ ಅವರು ರವಿಚಂದ್ರನ್ ಅಶ್ವಿನ್ ಹಾಗೂ ಯಜುವೇಂದ್ರ ಚಹಾಲ್ ದಾಖಲೆಯನ್ನು ಹಿಂದಿಕ್ಕಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಶುಕ್ರವಾರ 202 ರನ್ ಚೇಸಿಂಗ್‌ಗೆ ತೊಡಗಿದ್ದ ಶ್ರೀಲಂಕಾ ತಂಡದ ಧನುಷ್ಕಾ ಗುಣತಿಲಕ ವಿಕೆಟನ್ನು ಮೊದಲ ಓವರ್‌ನಲ್ಲಿ ಉರುಳಿಸಿದ ಬುಮ್ರಾ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 53 ವಿಕೆಟ್‌ಗಳನ್ನು ಪಡೆದಿದ್ದಾರೆ. ಮೂರನೇ ಟ್ವೆಂಟಿ-20 ಆರಂಭಕ್ಕೆ ಮೊದಲು ಬುಮ್ರಾ, ಅಶ್ವಿನ್ ಹಾಗೂ ಚಹಾಲ್ ತಲಾ 52 ವಿಕೆಟ್‌ಗಳನ್ನು ಪಡೆದು ಸಮಬಲ ಸಾಧಿಸಿದ್ದರು. ಅಶ್ವಿನ್ 2017ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕೊನೆಯ ಬಾರಿ ಟ್ವೆಂಟಿ-20 ಪಂದ್ಯ ಆಡಿದ್ದರು. ಪುಣೆಯ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿದ್ದ ಚಹಾಲ್ ಒಂದೂ ವಿಕೆಟ್ ಪಡೆದಿರಲಿಲ್ಲ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಟ್ವಿಟರ್‌ನ ಮೂಲಕ ವೇಗದ ಬೌಲರ್ ಬುಮ್ರಾಗೆ ಅಭಿನಂದನೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News