ವೀರಾಜಪೇಟೆ: ಆದಿವಾಸಿಗಳು ಆಶ್ರಯ ಪಡೆದಿದ್ದ ಗುಡಿಸಲುಗಳ ತೆರವು; ಅತಂತ್ರ ಸ್ಥಿತಿಯಲ್ಲಿ ಕುಟುಂಬಗಳು

Update: 2020-01-12 13:00 GMT

ಮಡಿಕೇರಿ, ಜ.11: ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಬಾಳುಗೋಡು ಪರಂಬು ಪೈಸಾರಿಯಲ್ಲಿ ನಿರ್ಮಿಸಲಾಗಿದ್ದ ಗುಡಿಸಲುಗಳನ್ನು ಕಂದಾಯ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿದ್ದಾರೆ. ಈ ಅನಿರೀಕ್ಷಿತ ಕ್ರಮದಿಂದ ಇಲ್ಲಿ ಆಶ್ರಯ ಪಡೆದಿದ್ದ ಬಡ ಆದಿವಾಸಿ ಕುಟುಂಬಗಳು ಅತಂತ್ರ ಪರಿಸ್ಥಿತಿ ಎದುರಿಸುತ್ತಿವೆ ಎಂದು ಗಿರಿಜನ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬಾಳುಗೋಡು ಪರಂಬು ಪೈಸಾರಿಯ ಅಂದಾಜು 37.58 ಎಕ್ರೆ ಸರ್ಕಾರಿ ಭೂ ಪ್ರದೇಶದಲ್ಲಿ ವಿರಾಜಪೇಟೆ ನಗರವು ಸೇರಿದಂತೆ ಬಿಟ್ಟಂಗಾಲ, ಪೆರುಂಬಾಡಿ, ಹೆಗ್ಗಳ, ತೋರ ಗ್ರಾಮಗಳ ತೋಟದ ಲೈನ್ ಮನೆಯಲ್ಲಿ ವಾಸವಿರುವ ಆದಿವಾಸಿಗಳು, ಶೋಷಿತ ಜನಾಂಗದವರು, ಇತರ ಬಡ ವರ್ಗಕ್ಕೆ ಸೇರಿದ 40 ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಜೀವನ ಮಾಡುತ್ತಿದ್ದಾರೆ.

ವಿಷಯ ಅರಿತ ವೀರಾಜಪೇಟೆ ತಾಲೂಕು ಕಂದಾಯಾಧಿಕಾರಿಗಳು ಮತ್ತು ಸಿಬ್ಬಂದಿಗಳು. ಸರ್ಕಾರಿ ಭೂ ಪ್ರದೇಶದಲ್ಲಿ ಅಕ್ರಮ ಪ್ರವೇಶ ಎಂದು ಏಕಾಎಕಿ ದಾಳಿ ನಡೆಸಿ ಗುಡಿಸಲುಗಳನ್ನು ಕಿತ್ತೂಗೆದಿದ್ದು, ಈ ಘಟನೆಯಿಂದ ಕುಪಿತಗೊಂಡ ಬಡ ಕುಟುಂಬಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ಗುಡಿಸಲು ನಿರ್ಮಿಸಿಕೊಂಡಿದ್ದ ಅಶ್ವಿನಿ ಎಂಬವರು ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ನಾವುಗಳು ನಿವೇಶನ ಒದಗಿಸಿಕೊಡುವಂತೆ ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಸ್ಥಳಗಳು ಲಭ್ಯವಿಲ್ಲ ಎಂದು ಉತ್ತರ ನೀಡುತ್ತಾರೆ. ಪ್ರಭಾವಿಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ಜಾಗ ಮಂಜೂರು ಆಗುತ್ತದೆ. ಆದರೆ, ಕೂಲಿ ಕೆಲಸ ನಿರ್ವಹಿಸಿಕೊಂಡು ಸಾಗುವ ನಮ್ಮ ಮಾತಿಗೆ ಬೆಲೆ ಇಲ್ಲದಂತಾಗಿದೆ. ಪ್ರಸ್ತುತ ಸ್ಥಳದಲ್ಲಿ ನಮಗೆ ಮೂರು ಸೆಂಟ್ಸ್ ಜಾಗ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಸ್ಥಳ ನೀಡುವವರೆಗೆ ಧರಣಿ ನಡೆಸುವುದಾಗಿ ಸ್ಪಷ್ಟಪಡಿಸಿದರು.

ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶೋಭ ಮಾತನಾಡಿ, ನಾನು ಸ್ಥಳೀಯಳಾಗಿದ್ದು, ಹಲವು ಬಾರಿ ನನಗೆ ಸೂರು ಒದಗಿಸಿಕೊಡುವಂತೆ ಮನವಿ ಮತ್ತು ಅರ್ಜಿ ಸಲ್ಲಿಸಿದ್ದೆ. ಆದರೆ, ಯಾವುದೇ ಪ್ರತಿಕ್ರಿಯೆ ದೊರಕಿಲ್ಲವೆಂದರು.

ಕರ್ನಾಟಕ ರಾಜ್ಯ ಆದಿವಾಸಿಗಳ ಸಮನ್ವಯ ಸಮಿತಿಯ ಅಧ್ಯಕ್ಷ ವೈ.ಕೆ.ಗಣೇಶ್ ಮಾತನಾಡಿ, ಸರ್ಕಾರಿ ಭೂಮಿಯನ್ನು ತಲಾ ಮೂರು ಸೆಂಟ್ಸ್ ಗಳಂತೆ ನಿರ್ಗತಿಕ ಬಡ ಕುಟುಂಬಗಳಿಗೆ ನೀಡಬೇಕು ಹಾಗು ಕೃಷಿ ಮಾಡಲು ಭೂಮಿ ಒದಗಿಸಬೇಕು.ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ಕಾನೂನು ಬಾಹಿರ ಒತ್ತುವರಿ
ವೀರಾಜಪೇಟೆ ಕಂದಾಯ ಅಧಿಕಾರಿ ಪಳಂಗಪ್ಪ ಮಾತನಾಡಿ, ಸರ್ಕಾರಿ ಭೂಮಿ ಒತ್ತುವರಿ ಮತ್ತು ಅಕ್ರಮವಾಗಿ ಪ್ರವೇಶ ಮಾಡುವುದು ಕಾನೂನು ಬಾಹಿರ. ನಿವೇಶನ ಕೋರಿ ಅರ್ಜಿಯನ್ನು ಸ್ಥಳೀಯ ಗ್ರಾಮ ಪಂಚಾಯತ್ಗೆ ಸಲ್ಲಿಸಿದಲ್ಲಿ ಆದ್ಯತೆ ಮೇರೆ ಅರ್ಜಿಯನ್ನು ವಿಲೇವಾರಿ ಮಾಡಿ ನಿವೇಶನ ಕಲ್ಪಿಸಿಕೊಡಲಾಗುತ್ತದೆ. ಕಾನೂನು ಉಲ್ಲಂಘನೆ ಮಾಡಿ ಅಕ್ರಮ ಪ್ರವೇಶದಿಂದ ಗುಡಿಸಲು ನಿರ್ಮಾಣ ಮಾಡಿದ್ದನ್ನು ಇಲಾಖೆಯು ತಡೆದಿದ್ದು, ಸ್ಥಳದಿಂದ ಇತರೆಡೆಗೆ ತೆರಳುವಂತೆ ಅದೇಶ ನೀಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News