ಕೇಂದ್ರಕ್ಕೆ ಮಾರ್ಚ್‌ ತಿಂಗಳ ಗಡುವು: ಬಾಕಿ ಪಾವತಿಸದಿದ್ದರೆ ವಿಮಾ ಸೌಲಭ್ಯ ಕೈ ಬಿಡಲು ಖಾಸಗಿ ಆಸ್ಪತ್ರೆಗಳ ನಿರ್ಧಾರ !

Update: 2020-01-13 18:47 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.13: ಕೇಂದ್ರ ಸರಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್) ಮಾಜಿ ಸೈನಿಕರ ನೆರವಿನ ಆರೋಗ್ಯ ಯೋಜನೆ (ಇಸಿಎಚ್‌ಎಸ್) ಅಡಿ ಬಾಕಿ ಉಳಿಸಿಕೊಂಡಿರುವ ಹಣವನ್ನು ಮಾರ್ಚ್‌ನೊಳಗೆ ಪಾವತಿ ಮಾಡುವಂತೆ ಖಾಸಗಿ ಆಸ್ಪತ್ರೆಗಳು ಕೇಂದ್ರ ಸರಕಾರಕ್ಕೆ ಆಗ್ರಹಿಸಿವೆ.

ಸೋಮವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಾನಾ(ಪಿಎಚ್‌ಎಎನ್) ಅಧ್ಯಕ್ಷ ಡಾ.ಆರ್.ರವೀಂದ್ರ, ಕೇಂದ್ರ ಸರಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್), ಮಾಜಿ ಸೈನಿಕರ ನೆರವಿನ ಆರೋಗ್ಯ ಯೋಜನೆಯಡಿ (ಇಸಿಎಚ್‌ಎಸ್) ಕೇಂದ್ರ ಸರಕಾರವು ರಾಜ್ಯದ ಆಸ್ಪತ್ರೆಗಳಿಗೆ ಸುಮಾರು 200 ಕೋಟಿ ರೂ. ಪಾವತಿಸಬೇಕಿದೆ. ಈ ಯೋಜನೆಗಳಡಿ ಚಿಕಿತ್ಸಾ ವೆಚ್ಚವನ್ನೂ ಪರಿಷ್ಕರಿಸುವಂತೆ ಖಾಸಗಿ ಆಸ್ಪತ್ರೆಗಳು ಬೇಡಿಕೆ ಇಟ್ಟಿದ್ದವು. ಆದರೆ, ಕೇಂದ್ರ ಸರಕಾರ ಈ ಬೇಡಿಕೆಯನ್ನು ತಿರಸ್ಕರಿಸಿದೆ ಮತ್ತು ಜನರಲ್ ಇನ್ಶುರೆನ್ಸ್ ಪಬ್ಲಿಕ್ ಸೆಕ್ಟರ್ ಅಸೋಸಿಯೇಷನ್ (ಜಿಪ್ಸಾ) ಅಡಿ ಕಾರ್ಯ ನಿರ್ವಹಿಸುತ್ತಿರುವ ವಿಮಾ ಕಂಪನಿಗಳೂ ಚಿಕಿತ್ಸೆಗಳಿಗೆ ಪರಿಷ್ಕೃತ ಪ್ಯಾಕೇಜ್ ದರವನ್ನು ಪಾವತಿಸಿಲ್ಲ ಎಂದು ಆರೋಪಿಸಿ, ನಗದು ರಹಿತ ವಿಮಾ ಸೌಲಭ್ಯ ಕೈಬಿಡಲು ಆಸ್ಪತ್ರೆಗಳು ನಿರ್ಧರಿಸಿವೆ ಎಂದು ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘ (ಐಎಂಎ), ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಅಸೋಸಿಯೇಷನ್ (ಫಾನಾ), ಆರೋಗ್ಯ ಪೂರೈಕೆದಾರರ ಸಂಘ (ಎಎಚ್‌ಪಿಐ) ಸೇರಿದಂತೆ ವಿವಿಧ ಸಂಘಟನೆಗಳು ನಗದು ರಹಿತ ಸೇವೆ ಸ್ಥಗಿತ ಮಾಡುವ ನಿರ್ಧಾರಕ್ಕೆ ಬೆಂಬಲ ಸೂಚಿಸಿವೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಸೇವೆ ಒದಗಿಸುವ ವಿಚಾರವಾಗಿ ಫಾನಾ ಮತ್ತು ಜಿಪ್ಸಾ ಜತೆಗೆ 2014ರಲ್ಲಿ ಒಪ್ಪಂದವಾಗಿತ್ತು. ಜಿಪ್ಸಾದಡಿ ನ್ಯಾಷನಲ್ ಇನ್ಶುರೆನ್ಸ್, ನ್ಯೂ ಇಂಡಿಯಾ ಅಶ್ಯುರೆನ್ಸ್, ಓರಿಯೆಂಟಲ್ ಇನ್ಶುರೆನ್ಸ್, ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ವಿಮಾ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಚಿಕಿತ್ಸಾ ವೆಚ್ಚದಲ್ಲಿ ಶೇ.40ರಷ್ಟು ವ್ಯತ್ಯಯವಾಗುತ್ತಿದೆ ಎಂಬ ಕಾರಣ ನೀಡಿ, ನಗದು ರಹಿತ ಸೇವೆಯನ್ನು ನಿಲ್ಲಿಸುವುದಾಗಿ ಕಳೆದ ವರ್ಷ ಖಾಸಗಿ ಆಸ್ಪತ್ರೆಗಳು ಘೋಷಿಸಿದ್ದವು. ಬಳಿಕ ಚಿಕಿತ್ಸಾ ವೆಚ್ಚ ಪರಿಷ್ಕರಣೆಗೆ ಜಿಪ್ಸಾ ಒಪ್ಪಿದ ಹಿನ್ನೆಲೆಯಲ್ಲಿ ನಗದು ರಹಿತ ಸೇವೆ ಮುಂದುವರಿದಿತ್ತು. ಈಗ ನಿಗದಿತ ಮೊತ್ತವನ್ನು ಪಾವತಿಸದ ಕಾರಣ ಒಪ್ಪಂದ ಕಡಿದುಕೊಳ್ಳಲು ಮುಂದಾಗಿದೆ. ರೋಗಿಗಳಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರಕಾರಕ್ಕೆ ಮಾರ್ಚ್‌ವರೆಗೆ ಗಡುವು ನೀಡಿದ್ದೇವೆ ಎಂದು ತಿಳಿಸಿದರು.

ಮಾರ್ಚ್‌ರೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ನಗದು ರಹಿತ ಸೇವೆಯನ್ನು ಸ್ಥಗಿತಗೊಳಿಸುವುದು ಅನಿವಾರ್ಯ. ಜಿಪ್ಸಾ ಕೂಡ ಒಪ್ಪಂದದ ಅನುಸಾರ ಹಣ ಪಾವತಿಸಿಲ್ಲ. ಇದರಿಂದ ಆಸ್ಪತ್ರೆಗಳಿಗೆ ಆರ್ಥಿಕ ಹೊರೆ ಹೆಚ್ಚುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News