ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಬಿಚ್ಚಿಟ್ಟ ಸತ್ಯಗಳು!

Update: 2020-01-13 18:33 GMT

ಕನ್ನಡ ಸಾಹಿತ್ಯ ಸಮ್ಮೇಳನವನ್ನು ತನ್ನ ಮೂಗಿನ ನೇರಕ್ಕೇ ನಡೆಯಬೇಕು ಇಲ್ಲದಿದ್ದರೆ ಅದನ್ನು ನಡೆಸಲು ಬಿಡುವುದಿಲ್ಲ ಎಂದು ನಿರಂಕುಶ ರೀತಿಯಲ್ಲಿ ಬಹಿರಂಗವಾಗಿಯೇ ಹೇಳುವ ಸ್ಥಿತಿ ಬಂದಿದೆ. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಒಳಾಂಗಣದಲ್ಲಿ ನಡೆಸಲೂ ಕೂಡ ಅನುಮತಿಯಿಲ್ಲದೆ ಸಾಧ್ಯವಿಲ್ಲ ಎಂಬ ಪ್ರಜಾತಂತ್ರಕ್ಕೆ ವಿರುದ್ಧವಾಗಿರುವ ಅಧಿಕಾರಶಾಹಿ ನಡೆ ಮೇಲುಗೈ ಸಾಧಿಸಲಾರಂಭಿಸಿವೆ. ಇದು ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಮಾತ್ರವಲ್ಲದೆ ಕನ್ನಡ ಜನರ ಆಶೋತ್ತರಗಳ ಅಳಿವು ಉಳಿವಿನ ಬಗ್ಗೆ ಇರುವ ನೇರವಾದ ಸವಾಲಿನ ವಿಚಾರವಾಗಿದೆ.

ಪ್ರಕೃತಿಯ ಹಚ್ಚ ಹಸುರಿನ, ಬೆಟ್ಟ ಗುಡ್ಡಗಳ, ಝರಿ ತೊರೆ ಜಲಪಾತ, ನದಿಗಳ ರಮ್ಯ ತಾಣವಾದ ಮಲೆನಾಡಿನ ಒಂದು ಮುಖ್ಯ ಜಿಲ್ಲೆ ಚಿಕ್ಕಮಗಳೂರು ಈಗ ರಾಜ್ಯ ಮಟ್ಟದ ಸುದ್ದಿಗೆ ಗ್ರಾಸವಾಗಿದೆ. ಇದೇ ಜನವರಿ 10 ಹಾಗೂ 11 ರಂದು ಶೃಂಗೇರಿಯಲ್ಲಿ ಆಯೋಜಿಸಲಾಗಿದ್ದ 16ನೇ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನವೇ ಈ ಸುದ್ದಿಯ ಮೂಲ. ಎರಡು ದಿನಗಳಿಗೆ ನಿಗದಿಯಾಗಿದ್ದ ಸಮ್ಮೇಳನ ಒಂದು ದಿನದ ಕಾರ್ಯಕ್ರಮದ ಅಂತ್ಯದೊಂದಿಗೆ ಮುಂದೂಡುವಂತೆ ಮಾಡಿ ಅದು ಪೂರ್ಣಗೊಳ್ಳದಂತೆ ಮಾಡಲಾಗಿದೆ.

ಕಲ್ಕುಳಿ ವಿಠಲ ಹೆಗ್ಗಡೆಯವರ ಅಧ್ಯಕ್ಷತೆಯ ವಿಚಾರ ಮುಂದಿಟ್ಟುಕೊಂಡು ಸಂಘ ಪರಿವಾರ ಈ ಸಮ್ಮೇಳನ ನಡೆಯದಿರುವಂತೆ ಮೊದಲಿನಿಂದಲೂ ಶ್ರಮಿಸುತ್ತಾ ಬಂದಿತ್ತು. ‘ಸಾಹಿತ್ಯ ಪರಿಷತ್ ಉಳಿಸಿ’, ‘ನಕ್ಸಲ್ ವಿರೋಧಿ ವೇದಿಕೆ’ ಎಂದೆಲ್ಲಾ ಹೆಸರಿನಲ್ಲಿ ಸಮ್ಮೇಳನದ ವಿರುದ್ಧ ಕರಪತ್ರಗಳನ್ನು ಹಂಚಿತು. ಅಪಪ್ರಚಾರ ನಡೆಸಿತು. ಸಮ್ಮೇಳನಕ್ಕೆ ಜನರು ಸೇರದಂತಿರಲು ಎಲ್ಲಾ ಪ್ರಯತ್ನ ಹಾಕಿತು. ಅದೇ ದಿನ ಬಂದ್ ಕರೆ ನೀಡಿತು. ಆದರೆ ಸಂಘಪರಿವಾರದ ಎಲ್ಲಾ ಪ್ರಯತ್ನಗಳನ್ನೂ ಮೀರಿ ಜನರು ಸಾವಿರದ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಪಾಲ್ಗೊಂಡರು. ಅದುವರೆಗೂ ಇಲ್ಲದ ಆ ಸಂಘಟನೆಗಳ ಅಸ್ತಿತ್ವಗಳೇ ಪ್ರಶ್ನಾರ್ಹವಾಗಿವೆ.

 ಮೊದಲನೇ ದಿನವೇ ಕೆಲವು ಯುವಕರ ತಲೆಕೆಡಿಸಿ ಸಮ್ಮೇಳನ ನಡೆಯುವಲ್ಲಿ ಬಂದು ಗಲಾಟೆ ಮಾಡಿಸುವ ಕೆಲಸ ನಡೆಯಿತು. ಪೊಲೀಸರು ಅವರನ್ನು ವಶಕ್ಕೆ ಪಡೆಯುವ ಕಾರ್ಯಕ್ರಮವೂ ನಡೆಯಿತು. ಪೊಲೀಸರ ಮೂಲಕ ಸಮ್ಮೇಳನದ ಮೊದಲ ದಿನದ ಸಭಾಂಗಣದೊಳಗಿನ ಕಾರ್ಯಕ್ರಮಗಳನ್ನು ನಿಲ್ಲಿಸುವ ಹಲವು ಪ್ರಯತ್ನ ನಡೆದವು. ಪೆಟ್ರೋಲ್ ಬಾಂಬ್ ದಾಳಿಯ ಬೆದರಿಕೆ ಒಡ್ಡಲಾಯಿತು, ಗಲಾಟೆಯಾದರೆ ಸಂಘಟಕರ ಮೇಲೆಯೇ ಜವಾಬ್ದಾರಿ ಹೊರಿಸಿ ಪ್ರಕರಣ ದಾಖಲಿಸುವ ಬೆದರಿಕೆ ಹಾಕಲಾಯಿತು. ಕೊನೆಗೆ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮಗಳನ್ನು ಪೆಟ್ರೋಲ್ ಬಾಂಬ್ ಬೆದರಿಕೆಯ ವಿಚಾರವನ್ನು ಕೂಡ ಒಳಗೊಂಡಿರುವ ಪೊಲೀಸ್ ಸುತ್ತೋಲೆಯ ಮೇರೆಗೆ ರದ್ದುಪಡಿಸುವಂತಹ ಸ್ಥಿತಿಯನ್ನು ಸೃಷ್ಟಿ ಮಾಡಲಾಯಿತು. ಹತ್ತು ಹಲವು ಷಡ್ಯಂತ್ರಗಳನ್ನು ಬಿಜೆಪಿ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಮಂತ್ರಿ ಅಧಿಕಾರಿಗಳ ಮೂಲಕ ಮಾಡಿಸಿದರು. ಕನ್ನಡ ಸಾಹಿತ್ಯ ಸಮ್ಮೇಳನ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುವ ಅಕ್ರಮ ಕಾರ್ಯಕ್ರಮ ಎಂದೆಲ್ಲಾ ಬಿಂಬಿಸಲಾಯಿತು. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ನಿಗದಿತ ಹಣವನ್ನು ಸರಕಾರ ಕೊಡಲಿಲ್ಲ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ, ಸ್ವಾಯತ್ತ ಸಂಸ್ಥೆ ಎಂದೆಲ್ಲಾ ಬಿಂಬಿಸಿಕೊಳ್ಳುವ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಸಹಕಾರ ಹಾಗೂ ನಿಗದಿತ ತನ್ನ ಪಾಲಿನ ಹಣವನ್ನು ನೀಡಲಿಲ್ಲ. ಅದರ ಅಧ್ಯಕ್ಷರಾದ ಮನು ಬಳಿಗಾರ್ ಪೂರ್ಣವಾಗಿ ಸಂಘಪರಿವಾರ ಹಾಗೂ ಮಂತ್ರಿಯ ಜೊತೆಗೂಡಿ ನಿಂತುಬಿಟ್ಟರು. ಕೊನೆಗೆ ಸಂಘಟಕರು ಜನಸಾಮಾನ್ಯರ ಬೆಂಬಲದಿಂದ ಸಮ್ಮೇಳನವನ್ನು ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ನಿರ್ಮಿಸಲಾಯಿತು. ಸರಕಾರ ಹಾಗೂ ಸ್ವತಹ ಸಾಹಿತ್ಯ ಪರಿಷತ್ತಿನ ಕೇಂದ್ರ ಘಟಕ ಕೂಡ ಸಮ್ಮೇಳನ ನಡೆಯದಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಹಾಕತೊಡಗಿದಾಗ ಜಿಲ್ಲೆಯ ಹಾಗೂ ರಾಜ್ಯದ ಕನ್ನಡಪರ ಮನಸ್ಸುಗಳು ಒಗ್ಗೂಡಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ತಮ್ಮ ಸ್ವಾಭಿಮಾನ ಹಾಗೂ ಕರ್ತವ್ಯದ ಭಾಗವೆಂದು ಭಾವಿಸಿದರು. ತಮ್ಮದೇ ನೇತೃತ್ವದಲ್ಲಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ತೀರ್ಮಾನಕ್ಕೆ ಬಂದರು. ಅದಕ್ಕಾಗಿನ ಎಲ್ಲಾ ತಯಾರಿಗಳನ್ನು ಮಾಡಿಕೊಂಡರು. ಜಿಲ್ಲೆಯ ಸಾಹಿತ್ಯ ಪರಿಷತ್ತು ತನ್ನ ನಿರ್ಣಯದ ಮೇಲೆಯೇ ದೃಢವಾಗಿ ನಿಂತಿತ್ತು.

ಆಗಲೂ ಬಿಡದೆ ದ್ವನಿ ವರ್ಧಕ ಅನುಮತಿ, ಮೆರವಣಿಗೆ ಅನುಮತಿಯನ್ನು ನಿರಾಕರಿಸಲಾಯಿತು. ರಕ್ಷಣೆ ನೀಡಲು ಸಾಧ್ಯವಿಲ್ಲ ಎನ್ನಲಾಯಿತು. ತೋರಣ, ಫಲಕಗಳನ್ನು ತೆರವುಗೊಳಿಸಲಾಯಿತು. ಪ್ರಚಾರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದರು. ಕೊನೆಗೆ ಒಳಾಂಗಣದಲ್ಲಿ ಸಮ್ಮೇಳನ ನಡೆಸಲು ಕೂಡ ಪೊಲೀಸ್ ಅನುಮತಿ ಬೇಕೆನ್ನುವಂತೆ ಮಾಡಿ ನಿರಾಕರಣೆಯನ್ನೂ ಮಾಡಲಾಯಿತು. ಸಂಬಂಧಿತ ಮಂತ್ರಿ ಈ ಸಮ್ಮೇಳನ ನಡೆಯದಂತೆ ಮಾಡಲು ಈ ಎಲ್ಲಾ ರೀತಿಗಳಲ್ಲೂ ಪ್ರಯತ್ನಿಸಿ ತನ್ನ ಅಧಿಕಾರದ ದುರ್ಬಳಕೆಯನ್ನು ಈ ಮಟ್ಟದಲ್ಲಿ ಮಾಡಿದರು. ಇದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಮೊತ್ತಮೊದಲು ಆಂತರಿಕ ವ್ಯವಹಾರದಲ್ಲಿ ಮಂತ್ರಿಯೊಬ್ಬರು ಈ ಮಟ್ಟದಲ್ಲಿ ಮೂಗು ತೂರಿಸಿ ಕನ್ನಡ ನುಡಿಜಾತ್ರೆಯ ಸಂಭ್ರಮವನ್ನೇ ತಡೆಯಲು ಪ್ರಯತ್ನಿಸಿದ್ದು ಎನ್ನಬಹುದೇನೋ. ಇದಕ್ಕೂ ಮೊದಲು ಶಿವಮೊಗ್ಗದಲ್ಲಿ ನಡೆದ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲೂ ಸಂಘ ಪರಿವಾರ ಹಾಗೂ ಸರಕಾರ ಮೂಗು ತೂರಿಸಿ ತನ್ನ ಮೂಗಿನ ನೇರಕ್ಕೆ ಸಮ್ಮೇಳನ ನಡೆಯುವಂತೆ ಮಾಡಲು ಪ್ರಯತ್ನಿಸಿತ್ತು. ಆದರೆ ಆಗ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಚಂದ್ರಶೇಖರ ಪಾಟೀಲರು ದೃಢವಾಗಿ ನಿಂತು ಅದಕ್ಕೆ ಆಸ್ಪದ ನೀಡಿರಲಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾ ಘಟಕ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯ ಒಂದು ತಾಲೂಕು ಕೇಂದ್ರವಾದ ಶೃಂಗೇರಿಯಲ್ಲಿ ನಡೆಸಲು ತೀರ್ಮಾನಿಸಿ ಶೃಂಗೇರಿಯವರೇ ಆದ ಪತ್ರಕರ್ತ, ಹೋರಾಟಗಾರ, ಬರಹಗಾರ, ಸಾಮಾಜಿಕ ಬದ್ಧತೆಯ ಕಲ್ಕುಳಿ ವಿಠಲ ಹೆಗ್ಗಡೆಯವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು.

 ಕಲ್ಕುಳಿ ವಿಠಲ ಹೆಗ್ಗಡೆಯವರ ‘ಮಂಗನ ಬ್ಯಾಟೆ’ ಕೃತಿಗೆ ಜನಾದರಣೆಯೊಂದಿಗೆ ಅಕಾಡಮಿ ಪ್ರಶಸ್ತಿ ಲಭಿಸಿದ್ದು ಅದಕ್ಕೆ ಒಂದು ಕಾರಣ. ಮಲೆನಾಡಿನ ಪರಿಸರದೊಂದಿಗೆ ಸಾಮಾನ್ಯ ಜನರ ಬದುಕಿನ ಚಿತ್ರಣಗಳನ್ನು ತಮ್ಮದೇ ಶೈಲಿಯಲ್ಲಿ ಕಟ್ಟಿಕೊಡುವಂತಹ ಕೃತಿ ಮಂಗನ ಬ್ಯಾಟೆ. ಈ ಕೃತಿ ಈಗಾಗಲೇ ಹಲವು ಮುದ್ರಣಗಳನ್ನು ಕಂಡಿದೆ. ಯು. ಆರ್. ಅನಂತಮೂರ್ತಿಯವರ ಮುನ್ನುಡಿಯನ್ನು ಈ ಕೃತಿ ಹೊಂದಿದೆ.

ವಿಠಲ ಹೆಗ್ಗಡೆಯವರು ದಲಿತ ದಮನಿತ ಹಾಗೂ ಇನ್ನಿತರ ಬಡ ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಾ ಬಂದವರು. ಜಾತೀಯತೆಯನ್ನು ಹೋಗಲಾಡಿಸುವ, ಜಾತೀಯ ದಮನಗಳನ್ನು ವಿರೋಧಿಸುವ ಹೋರಾಟಗಳಲ್ಲಿ ತಮ್ಮನ್ನು ಮೊದಲಿನಿಂದಲೂ ತೊಡಗಿಸುತ್ತಾ ಬಂದವರು. ದಲಿತ ಸಂಘರ್ಷ ಸಮಿತಿ, ರೈತ ಸಂಘ, ಆಟೊ ಚಾಲಕರ ಸಂಘಗಳನ್ನು ಹುಟ್ಟುಹಾಕುವಲ್ಲಿ ಶ್ರಮ ಹಾಕಿ ಅವುಗಳೊಂದಿಗೆ ನಿಂತವರು. ಶೃಂಗೇರಿಯಂತಹ ಬಹಳ ಹಿಂದುಳಿದ ತಾಲೂಕು ಕೇಂದ್ರದಲ್ಲಿ 1982ರ ಕಾಲದಲ್ಲೇ ಅಂತರ್ಜಾತಿ ವಿವಾಹಿತರ ಸಮಾವೇಶವೊಂದನ್ನು ಸಂಘಟಿಸಿದ್ದರು. ಆದಿವಾಸಿಗಳ ಬದುಕುವ ಮೂಲಭೂತ ಹಕ್ಕುಗಳ ಪರವಾಗಿ, ರಾಷ್ಟ್ರೀಯ ಉದ್ಯಾನವನ, ಮೀಸಲು ಅರಣ್ಯ, ಗಣಿಗಾರಿಕೆ, ಅಭಯಾರಣ್ಯ, ರಕ್ಷಿತಾರಣ್ಯ, ಹುಲಿಯೋಜನೆ, ಚೆಕ್ ಡ್ಯಾಂ ಇತ್ಯಾದಿ ಯೋಜನೆಗಳ ಹೆಸರಿನಲ್ಲಿ ಮಲೆನಾಡಿನ ಜನಸಾಮಾನ್ಯರ ಬದುಕುಗಳನ್ನು ಕಿತ್ತುಕೊಳ್ಳುತ್ತಾ ಪರಿಸರ ನಾಶ ಮಾಡುವ ಆಳುವವರ ಹುನ್ನಾರಗಳನ್ನು ಬಯಲುಗೊಳಿಸಿ ಎದುರಿಸಿ ಹೋರಾಟಗಳಲ್ಲಿ ಜನರೊಂದಿಗೆ ತೊಡಗಿಸಿಕೊಂಡವರು. ಸಹಜವಾಗಿ ವಿಠಲರ ವಿಚಾರಗಳು ಹಾಗೂ ಕೆಲಸಕಾರ್ಯಗಳು ವೈದಿಕಶಾಹಿ ಸಂಘ ಪರಿವಾರಕ್ಕೆ ಮೊದಲಿನಿಂದಲೂ ವಿರುದ್ಧವಾಗಿದ್ದವು. ಅವರ ಮೇಲೆ ಹತ್ತು ಹಲವು ಆರೋಪಗಳನ್ನು ಹೊರಿಸುವ, ದೂರುಗಳು ದಾಖಲಾಗುವಂತೆ ಮಾಡುವ ಕಾರ್ಯಗಳನ್ನು ಸಂಘಪರಿವಾರ ನಡೆಸುತ್ತಲೇ ಬಂದಿತ್ತು.

ಯಾವಾಗ ವಿಠಲ ಹೆಗ್ಗಡೆಯವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತೋ ಸಂಘ ಪರಿವಾರ ವಿವಾದಗಳನ್ನು ಹುಟ್ಟುಹಾಕತೊಡಗಿತ್ತು. ಸಂಘ ಪರಿವಾರ ಹಾಗೂ ಸರಕಾರ, ಅದರಲ್ಲೂ ಮುಖ್ಯವಾಗಿ ಕನ್ನಡ ಮತ್ತು ಸಂಸ್ಕೃತಿ ಮಂತ್ರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ಬಗೆಗಿನ ವಿರೋಧದಿಂದಾಗಿಯೇ ಸಮ್ಮೇಳನ ನಡೆಯದಂತೆ ತಡೆಯಲು ಪ್ರಯತ್ನಿಸುತ್ತಾ ಬಂದಿದ್ದರು ಎಂದು ಬಿಂಬಿತವಾಗಿದೆ. ಆದರೆ ಅದು ಪೂರ್ಣ ಸತ್ಯವಲ್ಲ. ಅವರ ವಿರೋಧ ಕೇವಲ ವಿಠಲ ಹೆಗ್ಗಡೆಯವರ ಬಗ್ಗೆಯಲ್ಲ. ಸಂಘಪರಿವಾರದ ವೈದಿಕಶಾಹಿ ಚಿಂತನೆಗಳನ್ನು ವಿರೋಧಿಸುವ, ಉದಾರವಾದಿ ಹಾಗೂ ಪ್ರಜಾತಾಂತ್ರಿಕ, ಪ್ರಗತಿಪರ ವಿಚಾರಗಳನ್ನು ಪ್ರತಿನಿಧಿಸುವ, ಸಮ್ಮೇಳನ, ಸಭೆ, ಸಮಾವೇಶಗಳು, ಹೋರಾಟಗಳು ಯಾವುವೂ ಎಲ್ಲೂ ನಡೆಯದಂತೆ ನೋಡಿಕೊಳ್ಳಬೇಕೆನ್ನುವ ತಮ್ಮ ಕಾರ್ಯ ಸೂಚಿಯ ಭಾಗವಾಗಿಯೇ ಇಂತಹ ಈ ಎಲ್ಲಾ ಷಡ್ಯಂತ್ರಗಳನ್ನು ಹೆಣೆಯಲಾಗಿತ್ತು. ಅದು ಜೆಎನ್‌ಯು, ಜಾಮಿಯಾ ಮಿಲ್ಲಿಯಾ, ದಿಲ್ಲಿ ವಿವಿಗಳಿಂದ ಹಿಡಿದು ಎಲ್ಲೆಡೆಯೂ ಸಾಗಿರುವ ಅವರ ಕಾರ್ಯಸೂಚಿಯ ಭಾಗವಾಗಿದೆ. ಅವರ ವಿಚಾರ ಧಾರೆಗಳನ್ನು ಒಪ್ಪದವರನ್ನು ನಗರ ನಕ್ಸಲರೆಂದೋ, ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿದವರೆಂದೋ ಅಥವಾ ದೇಶದ್ರೋಹಿಯೆಂದೋ ಹೀಗೆ ಯಾವುದಾದರೂ ಹೆಸರಿನಡಿ ಜನರಿಂದ ದೂರಮಾಡುವ ಕುತಂತ್ರಗಳ ಭಾಗವಾಗಿದೆ. ಮಲೆನಾಡಿನಲ್ಲಿ ಪ್ರಮುಖ ಸಮುದಾಯವಾದ ಒಕ್ಕಲಿಗ ಸಮುದಾಯವನ್ನು ಸಂಘ ಪರಿವಾರ ಪ್ರಧಾನವಾಗಿ ಕೇಂದ್ರೀಕರಿಸಿದೆ. ವಿಠಲ ಹೆಗ್ಗಡೆಯವರ ಹುಟ್ಟಿನ ಮೂಲ ಒಕ್ಕಲಿಗ ಸಮುದಾಯವಾಗಿದೆ. ವಿಠಲ ಹೆಗ್ಗಡೆಯವರು ಪ್ರತಿನಿಧಿಸುವ ವಿಚಾರಗಳು ಹಾಗೂ ಹೋರಾಟಗಳ ಪ್ರಭಾವ ಸಂಘಪರಿವಾರದ ಚಟುವಟಿಕೆಗಳಿಗೆ ಅಡ್ಡಿಯನ್ನುಂಟು ಮಾಡುತ್ತಿವೆ. ಸಂಘ ಪರಿವಾರಕ್ಕೆ ಮಲೆನಾಡಿನಲ್ಲಿ ಸಾಪೇಕ್ಷವಾಗಿ ಮೊದಲಿದ್ದಷ್ಟು ಸಂಘಟನಾ ಬಲವೂ ಈಗ ಇಲ್ಲವಾಗಿದೆ. ಬಜರಂಗದಳದಂತಹ ಅದರ ಅಂಗಗಳು ಈಗ ಹೆಚ್ಚು ಕಮ್ಮಿ ನಿಷ್ಕ್ರಿಯಗೊಂಡಿವೆ.. ಅದರ ಮಾಜಿ ನಾಯಕರಾಗಿದ್ದ ಹಲವರು ಈಗ ತಮ್ಮ ವೈದಿಕಪರ ನಿಷ್ಠೆಯನ್ನು ಬದಲಿಸಿಕೊಂಡು ಸಂಘ ಪರಿವಾರವನ್ನು ಬಯಲುಗೊಳಿಸುತ್ತಾ ಜನಸಾಮಾನ್ಯರ ಪರವಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲಿನಂತೆ ಅದರಲ್ಲಿ ಮಲೆನಾಡಿನ ದಲಿತ ದಮನಿತ, ಆದಿವಾಸಿ ಇನ್ನಿತರ ಜನರು, ಕೂಲಿ ಕಾರ್ಮಿಕರು ಸಕ್ರಿಯರಾಗುತ್ತಿಲ್ಲ. ಬಾಬಾಬುಡಾನ್ ಗಿರಿ ವಿಚಾರವೂ ಈಗ ಅವರ ವಿಸ್ತರಣೆಗೆ ಸಹಾಯವಾಗಿ ಬರುತ್ತಿಲ್ಲ. ಗೋ ರಕ್ಷಣೆ ವಿಚಾರವೂ ಹಳಸಲಾಗಿದೆ. ಅಧಿಕಾರ ರಾಜಕಾರಣದಲ್ಲೂ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅವರ ಪ್ರಭಾವ ಕಡಿಮೆಯಾಗಿ ಕೈ ತಪ್ಪಿಹೋಗಿದೆ. ಕೇವಲ ಮೋದಿ ಭಜನೆ ಸದ್ಯಕ್ಕೆ ಅವರ ಬಂಡವಾಳವಾಗಿದೆ. ಅದೂ ಕೂಡ ಇನ್ನು ಮುಂದೆ ಕೆಲಸಕ್ಕೆ ಬರುತ್ತದೆಂಬ ಖಾತರಿ ಅವರಿಗೂ ಇಲ್ಲ. ಹಾಗಾಗಿ ತನ್ನ ವಿಸ್ತರಣೆಗೆ ಅನುಕೂಲ ಮಾಡಿಕೊಳ್ಳಲು ಸಂಘ ಪರಿವಾರ ನಿರಂತರ ಪ್ರಯತ್ನಿಸುತ್ತಿದೆ. ಆ ಪ್ರಯತ್ನಗಳ ಒಂದು ಭಾಗವೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತನ್ನ ಹತೋಟಿಗೆ ತೆಗೆದುಕೊಂಡು ತಮಗೆ ಬೇಕಾದಂತೆ ನಡೆಸುವ ಪ್ರಯತ್ನವಾಗಿದೆ.

 ಶೃಂಗೇರಿ ಸಾಹಿತ್ಯ ಸಮ್ಮೇಳನ ಹಲವಾರು ಸವಾಲುಗಳನ್ನು ಮುನ್ನೆಲೆಗೆ ತಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿಲ್ಲ ಬದಲಿಗೆ ಕೋಮುವಾದಿ, ಜಾತೀವಾದಿ, ಅಧಿಕಾರಶಾಹಿಗಳ ಹಿಡಿತದಲ್ಲಿರುವ ಸಂಸ್ಥೆ ಎನ್ನುವುದು ನಿಚ್ಚಳವಾಗಿದೆ. ಇನ್ನು ಸ್ವಾಯತ್ತ ಸಂಸ್ಥೆ ಎನ್ನುವುದಕ್ಕೂ ಯಾವುದೇ ಆಧಾರಗಳನ್ನು ಈಗ ಅದು ಉಳಿಸಿಕೊಂಡಿಲ್ಲ. ವೈದಿಕಶಾಹಿಯ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಹಿಡಿತಗಳಡಿ ಅದರ ಕೇಂದ್ರ ಘಟಕ ಮತ್ತು ಹಲವಾರು ಜಿಲ್ಲಾ ಹಾಗೂ ತಾಲೂಕು ಘಟಕಗಳಿವೆ ಎನ್ನುವುದು ಸ್ಪಷ್ಟವಾಗಿ ಬಯಲಾಗಿದೆ. ಹಾಗಾಗಿ ಒಂದೆರಡು ಘಟಕಗಳನ್ನು ಹೊರತುಪಡಿಸಿ ಇತರ ಯಾವುದೇ ಘಟಕಗಳು ಶೃಂಗೇರಿಯಲ್ಲಿ ಸಂಘ ಪರಿವಾರ ಹಾಗೂ ಸರಕಾರದ ಗಂಭೀರವಾದ ತಪ್ಪು ನಡೆಗಳನ್ನು ಪ್ರಶ್ನಿಸಲಾರದಂತಾಗಿವೆ ಎನ್ನಬಹುದು. ಜೊತೆಗೆ ಕನ್ನಡದ ಪ್ರಮುಖ ಸಾಹಿತಿಗಳು ಹಾಗೂ ಬರಹಗಾರರ ಪಟ್ಟಿಯಲ್ಲಿರುವವರಲ್ಲಿ ಬೆರಳೆಣಿಕೆಯವರು ಬಿಟ್ಟರೆ ಉಳಿದವರು ಶೃಂಗೇರಿಯಲ್ಲಿ ನಡೆದ ಈ ಎಲ್ಲಾ ಅಕ್ರಮಗಳ ಬಗ್ಗೆ ತಮ್ಮ ತುಟಿ ಬಿಚ್ಚುತ್ತಿಲ್ಲ. ತಮ್ಮದೇ ಕ್ಷೇತ್ರದ ಬಗ್ಗೆ ಕೂಡ ಈ ಮಟ್ಟದ ನಿಷ್ಕ್ರಿಯತೆ ಹಾಗೂ ಅಪ್ರಜಾತಾಂತ್ರಿಕತೆ ಇವರಲ್ಲೆಲ್ಲಾ ಬೇರೂರಿವೆ ಎನ್ನುವುದು ಬಯಲಾಗಿ ನಿಂತಿದೆ. ಇನ್ನು ಕನ್ನಡಪರ ಸಂಘಟನೆಗಳ ಗಮನ ಇಂತಹ ಕನ್ನಡದ ನೈಜ ಸಮಸ್ಯೆಗಳ ಬಗ್ಗೆ ಹರಿಯುವುದು ಬಹಳ ಕಡಿಮೆಯೇ. ಬಹುತೇಕವಾಗಿ ಅವುಗಳದೇನಿದ್ದರೂ ನವೆಂಬರ್ ಕಾರ್ಯಕ್ರಮಗಳಿಗೆ ಸೀಮಿತ.

ಇಂದು ಕನ್ನಡ ಜನರ ಆಶೋತ್ತರಗಳಿಗೆ ವಿರುದ್ಧವಾದ ನಿಲುವುಗಳಿರುವ ಹಾಗೂ ಹಿಂದಿ ಹೇರಿಕೆಯನ್ನು ಸಮರ್ಥಿಸುವ ವ್ಯಕ್ತಿ ಕನ್ನಡ ಮತ್ತು ಸಂಸ್ಕೃತಿ ಮಂತ್ರಿಯಾಗಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನವನ್ನು ತನ್ನ ಮೂಗಿನ ನೇರಕ್ಕೇ ನಡೆಯಬೇಕು ಇಲ್ಲದಿದ್ದರೆ ಅದನ್ನು ನಡೆಸಲು ಬಿಡುವುದಿಲ್ಲ ಎಂದು ನಿರಂಕುಶ ರೀತಿಯಲ್ಲಿ ಬಹಿರಂಗವಾಗಿಯೇ ಹೇಳುವ ಸ್ಥಿತಿ ಬಂದಿದೆ. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಒಳಾಂಗಣದಲ್ಲಿ ನಡೆಸಲೂ ಕೂಡ ಅನುಮತಿಯಿಲ್ಲದೆ ಸಾಧ್ಯವಿಲ್ಲ ಎಂಬ ಪ್ರಜಾತಂತ್ರಕ್ಕೆ ವಿರುದ್ಧವಾಗಿರುವ ಅಧಿಕಾರಶಾಹಿ ನಡೆ ಮೇಲುಗೈ ಸಾಧಿಸಲಾರಂಭಿಸಿವೆ. ಇದು ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಮಾತ್ರವಲ್ಲದೆ ಕನ್ನಡ ಜನರ ಆಶೋತ್ತರಗಳ ಅಳಿವು ಉಳಿವಿನ ಬಗ್ಗೆ ಇರು ನೇರವಾದ ಸವಾಲಿನ ವಿಚಾರವಾಗಿದೆ.

ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News