ಖಾಕಿ ವೇಷದಲ್ಲಿ ಉಗ್ರ!?

Update: 2020-01-14 06:23 GMT

ದೇಶ ಎಂತಹ ಅರಾಜಕ ಸ್ಥಿತಿಗೆ ಸಾಗುತ್ತಿದೆಯೆಂದರೆ, ಜನ ಸಾಮಾನ್ಯರು ‘ತನ್ನ ಶತ್ರು ಯಾರು ಮಿತ್ರ ಯಾರು?’ ಎನ್ನುವುದರ ಕುರಿತಂತೆಯೇ ಗೊಂದಲಗೊಂಡಿದ್ದಾರೆ. ದೇಶವನ್ನು ಒಗ್ಗೂಡಿಸಿ ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದ ಜನನಾಯಕರು ಈ ದೇಶವನ್ನು ಧರ್ಮದ ಆಧಾರದಲ್ಲಿ ಒಡೆದು ಛಿದ್ರಗೊಳಿಸಿ ಇನ್ನೊಂದು ಪಾಕಿಸ್ತಾನವಾಗಿಸುವ ಆತುರದಲ್ಲಿದ್ದಾರೆ. ಪಾಕಿಸ್ತಾನದ ಸಂಚುಗಳನ್ನೆಲ್ಲ ಈ ದೇಶದಲ್ಲಿ ಅನುಷ್ಠಾನಕ್ಕೆ ತರುವ ಹೊಣೆ ಹೊತ್ತವರಂತೆ ಇವರು ವರ್ತಿಸುತ್ತಿದ್ದಾರೆ. ನ್ಯಾಯಕ್ಕಾಗಿ ಪ್ರತಿಭಟನೆಗೆ ಇಳಿದವರನ್ನು ‘ನಾಯಿಗಳನ್ನು ಕೊಂದ ಹಾಗೆ ಕೊಂದು ಹಾಕಿ’ ಎಂದು ಒಬ್ಬ ನಾಯಕ ಹೇಳುತ್ತಾನೆ. ಅಂಬೇಡ್ಕರ್, ಕುವೆಂಪುರಂತಹ ಮಹಾನ್ ಚೇತನಗಳನ್ನು ಬಹಿರಂಗವಾಗಿಯೇ ನಿಂದಿಸುವ, ಗೋಡ್ಸೆಯಂತಹ ಕ್ರಿಮಿಗಳಿಗೆ ಸಾರ್ವಜನಿಕವಾಗಿ ಜೈಕಾರ ಹಾಕುವ ಜನರು ಮುನ್ನೆಲೆಗೆ ಬರುತ್ತಿದ್ದಾರೆ. ಸಾಹಿತ್ಯ ಸಮ್ಮೇಳನವನ್ನು ಪೆಟ್ರೋಲ್ ಬಾಂಬ್ ಹಾಕಿ ತಡೆಯುವ ಬೆದರಿಕೆ ರಾಜಕೀಯ ನಾಯಕರಿಂದಲೇ ಬರುತ್ತದೆ. ಸ್ನೇಹ, ಸೌಹಾರ್ದ ಮೊದಲಾದ ಪದಗಳು ಸಮಾಜವನ್ನು ಒಡೆಯುತ್ತವೆ ಎಂದು ಪತ್ರಿಕಾಗೋಷ್ಠಿಯನ್ನು ನಡೆಸಲಾಗುತ್ತದೆ. ಪೊಲೀಸರ ನೇತೃತ್ವದಲ್ಲೇ ಅಮಾಯಕರ ಮೇಲೆ ಗೋಲಿಬಾರ್‌ಗಳು ನಡೆಯುತ್ತವೆ. ಕಾನೂನು ಸುವ್ಯವಸ್ಥೆಯನ್ನು ಸ್ವಯಂ ಕೆಡಿಸಿ, ಸಾವಿರ ಸುಳ್ಳುಗಳ ಮೂಲಕ ಸಂತ್ರಸ್ತರ ತಲೆಯ ಮೇಲೆ ಅದನ್ನು ಕಟ್ಟಲು ಪೊಲೀಸ್ ಇಲಾಖೆ ಮುಖ್ಯಸ್ಥರೇ ನೇತೃತ್ವವನ್ನು ವಹಿಸುತ್ತಾರೆ. ಇಂತಹ ಸಂದರ್ಭದಲ್ಲೇ ಜಮ್ಮು ಕಾಶ್ಮೀರದಲ್ಲಿ ಒಬ್ಬ ಪ್ರಮುಖ ಉಗ್ರನನ್ನು ಬಂಧಿಸಲಾಗಿದೆ. ಆತ ಪಾಕಿಸ್ತಾನ, ಅಫ್ಘಾನಿಸ್ತಾನದಿಂದ ಬಂದವನಲ್ಲ. ಆತ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯೊಂದನ್ನು ನಿರ್ವಹಿಸುತ್ತಿದ್ದ. ಆತನ ಹೆಸರು ದವೀಂದರ್ ಸಿಂಗ್. ಕಾರೊಂದರಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್‌ಗಳ ಜೊತೆಗಿದ್ದ ಸಂದರ್ಭದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಕಾಶ್ಮೀರದ ಡಿಐಜಿ ಅತುಲ್ ಗೋಯಲ್ ಬಂಧಿಸಿದ್ದಾರೆ ಎನ್ನಲಾಗಿದೆ. ಅತ್ಯಂತ ದುರಂತದ ಸಂಗತಿಯೆಂದರೆ, ಈತ ರಾಷ್ಟ್ರಪತಿ ಪದಕವನ್ನು ತನ್ನದಾಗಿಸಿಕೊಂಡಿರುವ ಅಧಿಕಾರಿಯಾಗಿದ್ದಾನೆ. ಹಾಗೆಂದು ಉಗ್ರರೊಂದಿಗೆ ಈತನಿಗಿರುವ ನಂಟಿನ ಕುರಿತಂತೆ ಸರಕಾರಕ್ಕೆ ಮಾಹಿತಿಯಿಲ್ಲವೆಂದಲ್ಲ. ಈ ದೇಶದ ಸಂವಿಧಾನ ಅನುಷ್ಠಾನಗೊಳ್ಳುವ ಸಂಸತ್‌ನ ಮೇಲೆ ನಡೆದ ದಾಳಿಯಲ್ಲಿ ಈತ ಶಾಮಿಲಾಗಿರುವ ಕುರಿತಂತೆ, ಅಫ್ಝಲ್ ಗುರು ಅದಾಗಲೇ ನ್ಯಾಯಾಲಯಕ್ಕೂ, ಮಾಧ್ಯಮಗಳಿಗೂ ಸ್ಪಷ್ಟ ಪಡಿಸಿದ್ದ. ಸಂಸತ್ ದಾಳಿ ಭಾರತ ಪಾಲಿನ ಅತಿ ದೊಡ್ಡ ದುರಂತ. ಇದು ನಮ್ಮ ಸಂವಿಧಾನದ ಅಸ್ಮಿತೆಯ ಮೇಲೆ ನಡೆದ ದಾಳಿ. ಇಂತಹ ದಾಳಿಯ ಹಿಂದೆ ಪೊಲೀಸ್ ಅಧಿಕಾರಿಯೊಬ್ಬ ಇದ್ದಾನೆ ಎನ್ನುವ ಆರೋಪ ಕೇಳಿ ಬಂದಾಗ ಈತನನ್ನು ಬಂಧಿಸಿ ಈತನ ಮೂಲಕ ಸಂಸತ್ ದಾಳಿಯ ನಿಜ ಸೂತ್ರಧಾರನನ್ನು ಬಂಧಿಸುವ ಅವಕಾಶ ಸರಕಾರಕ್ಕಿತ್ತು. ದೇಶದ ಭದ್ರತೆಯ ದೃಷ್ಟಿಯಿಂದ ಆತನನ್ನು ಕರ್ತವ್ಯದಿಂದ ವಜಾಗೊಳಿಸಬಹುದಿತ್ತು. ಆದರೆ ಪೊಲೀಸ್ ಇಲಾಖೆಯಲ್ಲೇ ಆತನನ್ನು ಮುಂದುವರಿಸಲಾಯಿತು. ಅಫ್ಝಲ್‌ಗುರುವಿನ ಹೇಳಿಕೆಯ ಬೆನ್ನು ಹತ್ತಿ ತನಿಖೆ ನಡೆಯಲೇ ಇಲ್ಲ. ಯಾಕೆಂದರೆ ಸರಕಾರದ ಆಯಕಟ್ಟಿನ ಜಾಗದಲ್ಲಿದ್ದ ಯಾರಿಗೋ ‘ಸಂಸತ್ ದಾಳಿ’ಯ ನಿಜವಾದ ರೂವಾರಿ ಬಹಿರಂಗವಾಗುವುದು ಬೇಕಾಗಿರಲಿಲ್ಲ. ಸಂಸತ್ ದಾಳಿ ನಡೆಸುವುದಕ್ಕೆ ಬೇಕಾಗಿರುವ ಯುವಕರನ್ನು ಒದಗಿಸುವಂತೆ ಕೇಳಿಕೊಂಡಿರುವುದೇ ಈ ದವೀಂದರ್ ಸಿಂಗ್. ಜೊತೆಗೆ ಈತ ಅಫ್ಝಲ್ ಗುರುವಿಗೆ ದೈಹಿಕ ಹಿಂಸೆ ನೀಡಿದ್ದ ಮಾತ್ರವಲ್ಲ, ಆತನಿಂದ ಹಣವನ್ನೂ ದೋಚಿದ್ದ. ಈ ಬಗ್ಗೆ ಅಫ್ಝಲ್ ಗುರು ವಿನೋದ್ ಜೋಸ್ ಅವರೊಂದಿಗೆ ಸಂದರ್ಶನದಲ್ಲಿ ಹಂಚಿಕೊಂಡಿದ್ದ. ವಿಚಾರಣೆಯ ಸಂದರ್ಭದಲ್ಲಿ ಎದುರಾಳಿ ವಕೀಲರ ಮುಂದೆಯೂ ಇದನ್ನು ಹೇಳಿದ್ದ. ಆದರೆ ಸರಕಾರಕ್ಕೆ ಮಾತ್ರ ಆತನ ಆರೋಪಗಳ ಸತ್ಯಾಸತ್ಯತೆ ಬೇಕಾಗಿರಲಿಲ್ಲ. ಸಂಸತ್ ದಾಳಿಯ ಕುರಿತಂತೆ ಹತ್ತು ಹಲವು ಅನುಮಾನಗಳು ಇನ್ನೂ ಉಳಿದುಕೊಂಡಿವೆ. ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿ ದೇಶದ ಜನರ ಗಮನ ಬೇರೆಡೆಗೆ ಹರಿಸುವುದಕ್ಕಾಗಿ ಸರಕಾರಿ ಪ್ರಾಯೋಜಿತ ದಾಳಿ ಇದಾಗಿತ್ತು ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಸಂಸತ್ ದಾಳಿಯ ಹಿಂದೆ ಕೆಲವು ರಾಜಕೀಯ ಪ್ರಭಾವಿ ಶಕ್ತಿಗಳ ಭಾಗೀದಾರಿಕೆಯಿದೆ ಎನ್ನುವ ಶಂಕೆಗಳನ್ನು ಮಾಧ್ಯಮಗಳು ವ್ಯಕ್ತಪಡಿಸುತ್ತಾ ಬಂದಿವೆ. ಅರುಂಧತಿ ರಾಯ್‌ರಂತಹ ಚಿಂತಕಿಯರು ಈ ಕುರಿತಂತೆ ಲೇಖನಗಳನ್ನೂ ಬರೆದಿದ್ದಾರೆ. ಒಂದು ವೇಳೆ ದವೀಂದರ್ ಸಿಂಗ್‌ನನ್ನು ಅಂದೇ ವಿಚಾರಣೆ ನಡೆಸಿದ್ದಿದ್ದರೆ, ಈ ದಾಳಿಯನ್ನು ಪ್ರಾಯೋಜಿಸಲು ಆತನಿಗೆ ನಿರ್ದೇಶನ ನೀಡಿದ ಜಾಲವನ್ನು ಸುಲಭದಲ್ಲಿ ಪತ್ತೆ ಹಚ್ಚಬಹುದಾಗಿತ್ತು. ಸರಕಾರಕ್ಕೆ ಅದು ಬೇಕಾಗಿರಲಿಲ್ಲ. ಅಫ್ಝಲ್ ಗುರುವಿನ ಜೊತೆಗೇ ದಾಳಿ ಪ್ರಕರಣ ಮುಗಿದು ಹೋಗುವುದು ಅಗತ್ಯವಾಗಿತ್ತು. ಅಂದಿನಿಂದ ಇಂದಿನವರೆಗೂ ದವೀಂದರ್ ಸಿಂಗ್ ಗುಪ್ತಚರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಈ ಅವಧಿಯಲ್ಲಿ ಈತನ ಮೂಲಕ ಜಮ್ಮು ಕಾಶ್ಮೀರದಲ್ಲಿ ಆಗಿರುವ ಅನಾಹುತಗಳು ಅದೆಷ್ಟಿರಬಹುದು? ದೇಶದಲ್ಲಿ ಉಗ್ರಗಾಮಿ ಚಟುವಟಿಕೆಗಳು ಜೀವಂತವಾಗಿರುವುದು ದೇಶದೊಳಗಿರುವ ಕೆಲವು ಪ್ರಭಾವೀ ರಾಜಕೀಯ ಶಕ್ತಿಗಳಿಗೆ ಅಗತ್ಯವಿತ್ತೇ? ಈ ಪ್ರಶ್ನೆಗಳು ಇಂದು ದೇಶದ ಜನರನ್ನು ನಿಜಕ್ಕೂ ಆತಂಕಕ್ಕೆ ತಳ್ಳಿವೆೆ.

ಕಳೆದ ಚುನಾವಣೆಯ ಹೊತ್ತಿನಲ್ಲೇ ಪುಲ್ವಾಮ ದುರಂತ ಸಂಭವಿಸಿತು. ಈ ದುರಂತದಲ್ಲಿ ಗುಪ್ತಚರ ಇಲಾಖೆಯ ವೈಫಲ್ಯವನ್ನು ಸರಕಾರವೇ ಒಪ್ಪಿಕೊಂಡಿತ್ತು. ಅಷ್ಟೊಂದು ಸ್ಫೋಟಕಗಳ ಸಹಿತ ಏಕೈಕ ಉಗ್ರ, ಸೇನಾ ಪಡೆಗಳ ಮೇಲೆ ದಾಳಿ ನಡೆಸುವುದು ಸರ್ವ ರೀತಿಯಲ್ಲೂ ಅಸಂಭವವಾಗಿತ್ತು. ಭದ್ರತಾ ಅಧಿಕಾರಿಗಳ ಕೈವಾಡಗಳಿಲ್ಲದೇ ಆ ದುರಂತ ಸಂಭವಿಸುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಇದೀಗ ಸಂಸತ್ ದಾಳಿಯ ಆರೋಪ ಹೊತ್ತ ಪೊಲೀಸ್ ಅಧಿಕಾರಿ ಉಗ್ರರೊಂದಿಗೆ ಬಂಧಿಸಲ್ಪಟ್ಟಿರುವುದು ಪುಲ್ವಾಮ ಘಟನೆಯ ಕುರಿತಂತೆಯೂ ಪ್ರಶ್ನೆಗಳನ್ನು ಎತ್ತಿದೆ. ‘ಪುಲ್ವಾಮ ದಾಳಿ’ಯನ್ನು ಚುನಾವಣೆಯಲ್ಲಿ ಯಾರು ಬಳಸಿಕೊಂಡರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗಿದ್ದರೆ ಪುಲ್ವಾಮ ದಾಳಿ ರಾಜಕೀಯ ಶಕ್ತಿಗಳಿಂದ ಪ್ರಾಯೋಜಿಸಲ್ಪಟ್ಟಿತೇ ಎನ್ನುವ ಪ್ರಶ್ನೆ ಏಳುತ್ತದೆ. ವಿವಿಧ ಭದ್ರತಾ ಇಲಾಖೆಗಳನ್ನು ಕೆಲವು ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆೆಯೇ? ಈ ಹಿಂದೆ ಐಎಸ್‌ಐ ಪರವಾಗಿ ಭಾರತದ ವಿರುದ್ಧ ಕೆಲಸ ಮಾಡಿದ ಕೆಲವರನ್ನು ಬಂಧಿಸಲಾಗಿತ್ತು. ಅವರಲ್ಲಿ ಬಿಜೆಪಿ ಕಾರ್ಪೊರೇಟರ್ ಒಬ್ಬರ ಸಂಬಂಧಿ, ಬಿಜೆಪಿ ಐಟಿ ಸೆಲ್‌ನ ಸಂಯೋಜಕರೂ ಇದ್ದರು. ಗಡಿಭಾಗದಲ್ಲಿ ಸೈನಿಕರ ಸಹಕಾರದಿಂದಲೇ ನುಸುಳುಕೋರರು ಆಗಮಿಸುತ್ತಾರೆ ಎಂಬ ಆರೋಪಗಳು ಪದೇ ಪದೇ ಕೇಳಿ ಬರುತ್ತಿವೆ. ಇವೆಲ್ಲವೂ ಏನನ್ನು ಹೇಳುತ್ತಿವೆ? ಇಂದು ದೇಶದಲ್ಲಿ ಉಗ್ರಚಟುವಟಿಕೆಗಳು ನಡೆಯುವುದು ಕೇವಲ ಪಾಕಿಸ್ತಾನಕ್ಕೆ ಮಾತ್ರ ಬೇಕಾಗಿರುವುದಲ್ಲ. ಈ ದೇಶದೊಳಗಿರುವ ಕೆಲವು ಪ್ರಭಾವಿ ಶಕ್ತಿಗಳಿಗೂ ಅವುಗಳ ಅಗತ್ಯ ಇದೆ. ಉಗ್ರರು ಗಡ್ಡ-ಟೋಪಿ ವೇಷದಲ್ಲಷ್ಟೇ ಇಲ್ಲ, ಅವರು ಖಾಕಿ, ಕಾವಿಗಳ ವೇಷದಲ್ಲೂ ಇದ್ದಾರೆ ಎನುವುದನ್ನು ಹೇಳುತ್ತಿವೆ. ಈವರೆಗೆ ಸ್ವತಂತ್ರವಾಗಿರಲು ಬಿಟ್ಟು ಇದೀಗ ದವೀಂದರ್ ಸಿಂಗ್‌ನನ್ನು ಯಾಕೆ ಬಂಧಿಸಲಾಯಿತು? ಇದರ ಹಿಂದೆಯೂ ಬೇರೆ ರಾಜಕೀಯ ಕಾರಣಗಳಿರಬಹುದೇ? ಇವೆಲ್ಲವನ್ನು ತನಿಖೆ ನಡೆಸುವ ಸಂಸ್ಥೆಗಳೇ ರಾಜಕೀಯ ಹಸ್ತಕ್ಷೇಪದಿಂದ ಹೊರತಿಲ್ಲ ಎನ್ನುವಾಗ, ದೇಶದ ಜನರು ಯಾರನ್ನು ನಂಬಬೇಕು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News