ಬಿಎಸ್‌ವೈ ರಾಜಾಹುಲಿಯಲ್ಲ, ರಾಜಾ ಇಲಿ: ವಿ.ಎಸ್.ಉಗ್ರಪ್ಪ ಲೇವಡಿ

Update: 2020-01-14 12:09 GMT

ಬೆಂಗಳೂರು, ಜ. 14: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜಾಹುಲಿ ಅಲ್ಲ, ಬದಲಿಗೆ ಅವರು ರಾಜ ಇಲಿ’ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಾ ಹುಲಿ ಭೇಟಿಗೆ ಬಿಜೆಪಿ ವರಿಷ್ಠರು ಅವಕಾಶ ನೀಡುತ್ತಿಲ್ಲ. ಇದನ್ನು ನೋಡಿದರೆ ಬಿಎಸ್‌ವೈ ಅವರಿಗೆ ರಾಜಾ ಹುಲಿ ಎಂಬ ಹೆಸರು ಎಷ್ಟು ಸೂಕ್ತ ಎಂದು ಖಾರವಾಗಿ ಪ್ರಶ್ನಿಸಿದರು.

ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಯಡಿಯೂರಪ್ಪ ರಾಜೀನಾಮೆ ನೀಡಲಿ ಎಂದು ಅವರ ಪಕ್ಷದ ಒಂದು ಬಣ ಒತ್ತಾಯಿಸುತ್ತಿದೆ. ಬೆಕ್ಕು ಬಂದರೆ ಇಲಿ ಬಿಲ ಹುಡುಕುವ ಸ್ಥಿತಿ ಮುಖ್ಯಮಂತ್ರಿ ಯಡಿಯೂರಪ್ಪರ ಸ್ಥಿತಿ ಎಂದು ಉಗ್ರಪ್ಪ ವ್ಯಂಗ್ಯವಾಡಿದರು.

ಶ್ವೇತಪತ್ರ ಹೊರಡಿಸಿ: ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಕೂಡಲೇ ಶ್ವೇತಪತ್ರ ಹೊರಡಿಸಬೇಕು. ನಿಮಗೆ ತಾಕತ್ತಿದ್ದರೆ ಅನ್ನಭಾಗ್ಯ ಯೋಜನೆಯಡಿ 2ಕೆಜಿ ಅಕ್ಕಿ ಕಡಿಮೆ ಮಾಡಲಿ ಎಂದ ಅವರು, ಹೊರರಾಜ್ಯಗಳಿಗೆ ಅಕ್ಕಿ ರವಾನೆ ನಿಯಂತ್ರಿಸದ ಸರಕಾರ ಬಡವರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ದೂರಿದರು.

ಉಪಚುನಾವಣೆ ಫಲಿತಾಂಶ ಬಂದ 24 ಗಂಟೆಗಳಲ್ಲಿ ಮಂತ್ರಿ ಮಾಡುತ್ತೇವೆಂದು ವಾಗ್ದಾನ ನೀಡಿದ್ದ ಬಿಜೆಪಿಯವರು 24 ಗಂಟೆಯಲ್ಲ, ಇಪ್ಪತ್ತೈದು ದಿನಗಳ ಕಳೆದರೂ ಇನ್ನೂ ಮಂತ್ರಿ ಮಾಡಲು ಆಗಲಿಲ್ಲ. ಸೂಟು-ಬೂಟು ಹಾಕಿಕೊಂಡು ಶಾಸಕರು ಕಾಯುತ್ತಲೇ ಇದ್ದಾರೆಂದು ವಾಗ್ದಾಳಿ ನಡೆಸಿದರು.

ಹಣದುಬ್ಬರ: ‘ಅಚ್ಚೇದಿನ್’ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ 5 ವರ್ಷಗಳ ತನ್ನ ಆಡಳಿತದಲ್ಲಿ ಶೇ.2ರಿಂದ 4ರಷ್ಟಿದ್ದ ಹಣದುಬ್ಬರ ಶೇ.7ಕ್ಕೆ ಜಿಗಿದಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಿಜೆಪಿಯ ಅಚ್ಚೇದಿನ್ ಅಂದರೆ ಇದೇನಾ ಎಂದು ಉಗ್ರಪ್ಪ ಟೀಕಿಸಿದರು.

ಸಮಸ್ಯೆಗಳ ಬಗ್ಗೆ ಆಲೋಚಿಸಲಿ: ಕನಕಪುರ ಹಾರೋಬೆಲೆ ಏಸು ಪುತ್ಥಳಿ ವಿಚಾರವನ್ನು ಬಿಟ್ಟು ಬಿಜೆಪಿ-ಆರೆಸೆಸ್ಸ್‌ನವರಿಗೆ ರಾಜ್ಯದ ಬೇರೆ ಸಮಸ್ಯೆಗಳೇನು ಗೊತ್ತಾಗುವುದಿಲ್ಲವೇ ಎಂದು ಪ್ರಶ್ನಿಸಿದ ಉಗ್ರಪ್ಪ, ಕೋಮುದ್ವೇಷ ಸೃಷ್ಟಿಸುವುದನ್ನು ಬಿಟ್ಟು ಸಮಸ್ಯೆಗಳ ಬಗ್ಗೆ ಆಲೋಚಿಸಲಿ ಎಂದು ಸಲಹೆ ಮಾಡಿದರು.

‘ಕೇಂದ್ರ ಸರಕಾರದ ಜನವಿರೋಧಿಸಿ ಸಿಎಎ, ಎನ್‌ಆರ್‌ಸಿ ವಿರುದ್ಧ ಜ.16ಕ್ಕೆ ಕಾಂಗ್ರೆಸ್ ಪಕ್ಷದಿಂದ ಕಾರ್ಯಾಗಾರ ಏರ್ಪಡಿಸಲಾಗಿದೆ. ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕರು, ಪಕ್ಷದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ’

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News