ಸ್ವಾಮೀಜಿ ಮಾತಿನಿಂದ ಕೋಪಗೊಂಡು ರಾಜೀನಾಮೆ ನೀಡುತ್ತೇನೆ ಎಂದ ಸಿಎಂ ಯಡಿಯೂರಪ್ಪ !

Update: 2020-01-14 14:21 GMT

ದಾವಣಗೆರೆ, ಜ.14: 17 ಶಾಸಕರ ವನವಾಸ ಮತ್ತು ತ್ಯಾಗದಿಂದಾಗಿ ನಾನು ಸಿಎಂ ಸ್ಥಾನದಲ್ಲಿ ಕುಳಿತಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. 

ಹರಿಹರದ ಪಂಚಮಸಾಲಿ ಪೀಠದಲ್ಲಿ ಹರಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, 17 ಜನ ಶಾಸಕರು ಹಾಗೂ ನಿಮ್ಮೆಲ್ಲರ ಆರ್ಶೀವಾದದಿಂದ ಈ ಸ್ಥಾನದಲ್ಲಿದ್ದೇನೆ. 3 ವರ್ಷ ಉತ್ತಮ ಆಡಳಿತ ನಡೆಸಲು ನಿಮ್ಮ ಸಹಕಾರ, ಸಲಹೆ ಅಗತ್ಯವಾಗಿದೆ. ಈ ಸ್ಥಾನದಲ್ಲಿ ನಾನು ಇರುವುದು ಬೇಡವೆಂದರೆ ನಾಳೆಯೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ ಎಂದು ತಿಳಿಸಿದರು. 

ಆರ್ಥಿಕ ಪರಿಸ್ಥಿತಿ ಸರಿಯಿಲ್ಲ: ನಾಡಿನ ಅನ್ನದಾತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವ ಭರವಸೆ ನೀಡಿದ್ದೇನೆ. 120 ವರ್ಷದಲ್ಲಿ ಕಾಣದಂತಹ ಪ್ರವಾಹ  ಬಂದಿದೆ. ಅಲ್ಲಿನ ಜನರಿಗೆ ನೆಮ್ಮದಿ ಬದುಕು ಕಟ್ಟಿಕೊಡುವ ಸಂಕಲ್ಪ ಮಾಡಿದ್ದೇನೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಾದರೆ ಮಾರ್ಚ್ ತಿಂಗಳವರೆಗೂ ಕಾಯಬೇಕಿದೆ. ಆದ್ದರಿಂದ ಸ್ವಾಮೀಗಳು ನಮ್ಮ ಪರಿಸ್ಥಿತಿ ಆರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. 

ನನ್ನ ಪರಿಸ್ಥಿತಿ ಸರಿಯಿಲ್ಲ: ಪ್ರಸ್ತುತ ನಮ್ಮ ಪರಿಸ್ಥಿತಿ ಸರಿಯಿಲ್ಲ. ಬೇಕಾದರೆ ಎಲ್ಲ ಸ್ವಾಮಿಗಳನ್ನು ಒಟ್ಟಿಗೆ ಸೇರಿಸಿ ನನ್ನ ಪರಿಸ್ಥಿತಿ ಹೇಳುವೆ ಆಗ ನೀವು ಸಲಹೆ ಕೊಡಿ. ಪಂಚಮಸಾಲಿ ಸಮಾಜದ ಶಕ್ತಿಯಿಲ್ಲದೆ ನಾನು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎನ್ನುವ ಅರಿವು ಇದೆ. ಅದರೆ ಬಹಿರಂಗವಾಗಿ ಸಚಿವ ಸ್ಥಾನ ನೀಡಿ ಅನ್ನುವುದು ಸರಿಯಲ್ಲ ಎಂದರು. 

ರಾಜ್ಯ- ದೇಶಕ್ಕೆ ಪಂಚಮಸಾಲಿ ಸಮಾಜದ ಕೊಡುಗೆ ಅಪಾರವಾಗಿದೆ. ಶರಣೆ ಅಕ್ಕಮಹಾದೇವಿ, ಬೆಳವಾಡಿ ಮಲ್ಲಮ್ಮ, ಕಿತ್ತೂರು ರಾಣಿ ಚನ್ನಮ್ಮ ಅಖಂಡ ಭಾರತ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಪಂಚಮಸಾಲಿ ಸಮಾಜದ ಸ್ವಾಮಿಗಳು ಸಹ ಸಮುದಾಯವನ್ನು ಆರ್ಥಿಕ, ಶೈಕ್ಷಣಿಕ ಎತ್ತಲು ಶ್ರಮವಹಿಸುತ್ತಿದ್ದಾರೆ. ಸಮಾಜ ಅಭಿವೃದ್ದಿ ಹೊಂದಬೇಕು. ಬಜೆಟ್ ನಲ್ಲಿ ಸಮುದಾಯವನ್ನು ಗಮನದಲ್ಲಿರಿಸಿಕೊಳ್ಳುತ್ತೇನೆ. ದಯವಿಟ್ಟು ಸಹಕಾರ ನೀಡುವಂತೆ ಕೋರಿಕೊಂಡರು.   

ವೇದಿಕೆಯಿಂದ ನಿರ್ಗಮಿಸಲು ಮುಂದಾದ ಸಿಎಂ   
ಹರಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಗುರುಪೀಠ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜಕ್ಕೆ ಮೂರು ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು. ಇಲ್ಲದಿದ್ದರೆ ನಿಮ್ಮನ್ನು ನಾವು ಕೈ ಬಿಡುತ್ತೇವೆ ಎಂದು ಸಿಎಂ ಪಕ್ಕವೇ ಕುಳಿತು ಎಚ್ಚರಿಸಿದರು. ಈ ವೇಳೆ ಸಿಎಂ ಯಡಿಯೂರಪ್ಪ ವೇದಿಕೆಯಿಂದ ನಿರ್ಗಮಿಸಲು ಮುಂದಾದರು. ನೀವು ನಮ್ಮನ್ನು ಹೆದರಿಸಬೇಡಿ ಎಂದು ಸ್ವಾಮೀಜಿಗೆ ತಿಳಿಸಿದರು ಎನ್ನಲಾಗಿದೆ.

ಅಲ್ಲದೇ, 13 ಜನ ಶಾಸಕರು ಪಂಚಮಸಾಲಿ ಸಮಾಜದವರು. ಮುರಗೇಶ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಲೇ ಬೇಕು ಎಂದು ನನ್ನ ಕಿವಿಯಲ್ಲಿ ಹೇಳಬಹುದಿತ್ತು. ಆದರೆ ವೇದಿಕೆ ಮೇಲೆ ಬಹಿರಂಗವಾಗಿ ಹೇಳಿಕೆ ನೀಡಿದ್ದು ನನಗೆ ಬೇಸರವಾಗಿದೆ ಎಂದು ತಮ್ಮ ಭಾಷಣದಲ್ಲಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News