ಜೆಎನ್‌ಯು ಹಿಂಸಾಚಾರ: 2 ವಾಟ್ಸ್ಆ್ಯಪ್ ಗುಂಪಿನ ಸದಸ್ಯರಿಗೆ ಸಮನ್ಸ್ ಜಾರಿ

Update: 2020-01-14 14:39 GMT

ಹೊಸದಿಲ್ಲಿ, ಜ. 13: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್ ‌ನಲ್ಲಿ ಸಂಭವಿಸಿದ ಹಿಂಸಾಚಾರದೊಂದಿಗೆ ನಂಟು ಹೊಂದಿದ ಎರಡು ವಾಟ್ಸ್ ಆ್ಯಪ್ ಗುಂಪಿನ ಎಲ್ಲ ಸದಸ್ಯರಿಗೆ ಸಮನ್ಸ್ ಜಾರಿ ಮಾಡುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ಪೊಲೀಸರಿಗೆ ನಿರ್ದೇಶಿಸಿದೆ.

 ಜೆಎನ್‌ಯು ಕ್ಯಾಂಪಸ್ ‌ನಲ್ಲಿ ಜನವರಿ 5ರಂದು ನಡೆದ ಹಿಂಸಾಚಾರದಲ್ಲಿ ಗಾಯಗೊಂಡ ಪ್ರಾಧ್ಯಾಪಕರು ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಆದೇಶ ನೀಡಿದೆ. ವಿವಿಧ ವಾಟ್ಸ್ ಆ್ಯಪ್ ಗುಂಪು ನಡೆಸಿದ ಉದ್ದೇಶಪೂರ್ವಕ, ಸಂಯೋಜನೆಯ, ಯೋಜಿತ ದಾಳಿ ಇದಾಗಿದೆ ಎಂದು ಸ್ಕೂಲ್ ಆಫ್ ಆರ್ಟ್ಸ್ ಆ್ಯಂಡ್ ಈಸ್ತೆಟಿಕ್‌ನ ಅಧ್ಯಾಪಕ ಅಮಿತ್ ಪರಮೇಶ್ವರನ್, ಸೆಂಟರ್ ಫಾರ್ ಸ್ಟಡೀ ಆಫ್ ರೀಜನಲ್ ಡೆವೆಲಪ್‌ಮೆಂಟ್, ಸ್ಕೂಲ್ ಆಫ್ ಸಯನ್ಸ್‌ನ ಪ್ರಾಧ್ಯಾಪಕ ಅತುಲ್ ಸೂದ್, ಸ್ಕೂಲ್ ಆಫ್ ಆರ್ಟ್ಸ್ ಆ್ಯಂಡ್ ಈಸ್ತೆಟಿಕ್ಸ್‌ನ ಪ್ರಾಧ್ಯಾಪಕ ಶುಕ್ಲಾ ವಿನಾಯಕ ಸಾವಂತ್ ಹೇಳಿದ್ದಾರೆ. ಎರಡು ವಾಟ್ಸ್ ಆ್ಯಪ್ ಗುಂಪುಗಳಾದ ‘ಫ್ರೆಂಡ್ಸ್ ಆಫ್ ಆರೆಸ್ಸೆಸ್’ ಹಾಗೂ ‘ಯುನಿಟಿ ಆಫ್ ಲೆಫ್ಟ್’ ವಿದ್ಯಾರ್ಥಿಗಳು ಹಿಂಸಾಚಾರದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿತು ಎಂದು ಪ್ರಾಧ್ಯಾಪಕರು ಹೇಳಿದ್ದಾರೆ.

ಹಿಂಸಾಚಾರದ ಬಳಿಕ ವೀಡಿಯೊ ಹಾಗೂ ಸ್ಕ್ರೀನ್ ಶಾಟ್‌ಗಳು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾಯಿತು. ಮುಖ್ಯವಾಗಿ ವಾಟ್ಸ್ ಆ್ಯಪ್‌ನಲ್ಲಿ. ಇದು ಈ ದಾಳಿ ಪೂರ್ವ ನಿಯೋಜಿತ ಹಾಗೂ ಪಿತೂರಿಯ ಲಕ್ಷಣವನ್ನು ಹೊಂದಿರುವುದನ್ನು ಗುರುತಿಸಿತ್ತು ಎಂದು ಅರ್ಜಿ ಹೇಳಿದೆ. ಈ ದತ್ತಾಂಶವನ್ನು ಸಂರಕ್ಷಿಸಿ ಇರಿಸುವಂತೆ ವಾಟ್ಸ್ ಆ್ಯಪ್ ಹಾಗೂ ಗೂಗಲ್ ದಿಲ್ಲಿ ಉಚ್ಚ ನ್ಯಾಯಾಲಯ ನಿರ್ದೇಶಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವಾಟ್ಸ್ ಆ್ಯಪ್ ಪರ ವಕೀಲ, ಕಂಪೆನಿ ಸಂದೇಶಗಳನ್ನು ಸಂರಕ್ಷಿಸಿ ಇರಿಸುವುದಿಲ್ಲ.

ಈ ಸಂದೇಶಗಳನ್ನು ಸದಸ್ಯರ ಮೂಲಕ ಮಾತ್ರ ಪಡೆಯಬಹುದು ಎಂದು ತಿಳಿಸಿದರು. ವಾದದ ಬಳಿಕ ನ್ಯಾಯಾಲಯ ಎರಡು ವಾಟ್ಸ್ ಆ್ಯಪ್ ಗುಂಪಿನ ಎಲ್ಲ ಸದಸ್ಯರಿಗೆ ಸಮನ್ಸ್ ಜಾರಿ ಮಾಡುವಂತೆ ಹಾಗೂ ಅವರ ಫೋನ್‌ಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News