ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಅಪಸ್ವರ

Update: 2020-01-14 16:47 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.14: ಶೃಂಗೇರಿಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿವಾದ ಬಳಿಕ ಇದೀಗ ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹಿಂದೂ ಜಾಗರಣ ವೇದಿಕೆ ಅಪಸ್ವರ ತೆಗೆದಿವೆ.

ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆಯನ್ನು ಆಯ್ಕೆ ಮಾಡಿದ್ದರ ಹಿನ್ನೆಲೆಯಲ್ಲಿ ಸಾಕಷ್ಟು ಗದ್ದಲ, ಗಲಾಟೆ ನಡೆದಿತ್ತು. ಅಲ್ಲದೆ, ಸಮ್ಮೇಳನವನ್ನು ಒಂದು ದಿನಕ್ಕೆ ಮೊಟಕುಗೊಳಿಸಿದ್ದರು.

ಇದೀಗ ಜ.23 ಮತ್ತು 24 ರಂದು ನಡೆಯಲಿರುವ 6 ನೇ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ, ಪ್ರಗತಿಪರ ವಿಚಾರವಾದಿ ಪ್ರೊ.ಶಿವನಂಜಯ್ಯರನ್ನು ಆಯ್ಕೆ ಮಾಡಲಾಗಿದೆ. ಅದಕ್ಕೆ ಹಿಂದೂ ಜಾಗರಣ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬೇರೆಯವರನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದೆ.

ಪ್ರೊ.ಶಿವಲಿಂಗಯ್ಯ ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮ, ದೇವರನ್ನು ತುಚ್ಛವಾಗಿ ಕಾಣುತ್ತಾ ಟೀಕೆ-ಟಿಪ್ಪಣಿ ಮಾಡಿದ್ದಾರೆ. ಬಹು ಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದು ಕೊಂಡಿದ್ದಾರೆ. ಅಲ್ಲದೆ, ಇವರು ಕೆಂಗಲ್ ಹನುಮಂತಯ್ಯ ಪುತ್ಥಳಿ ನಿರ್ಮಾಣಕ್ಕೆ ಸಂಗ್ರಹಿಸಿದ್ದ ಹಣವನ್ನೂ ವ್ಯರ್ಥ ಮಾಡಿದ್ದಾರೆ ಎಂದು ಅವರು ಆಕ್ಷೇಪಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಹಿಂದೂ ಜಾಗರಣಾ ವೇದಿಕೆಯು, ಸ್ಥಳೀಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದೆ.

ನುಡಿ ಜಾತ್ರೆಗೆ ಅಡ್ಡಿಪಡಿಸದಂತೆ ಮನವಿ: ಕುವೆಂಪು ವಿಚಾರಗಳಲ್ಲಿ ನಂಬಿಕೆಯುಳ್ಳ ಪ್ರೊ.ಶಿವನಂಜಯ್ಯ ಬಗ್ಗೆ ಕೆಲವು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಹಿಂದೂಧರ್ಮಕ್ಕೆ ಧಕ್ಕೆ ತರುವಂತೆ ಎಲ್ಲಿಯೂ ನಡೆದುಕೊಂಡಿಲ್ಲ. ಅವರು 30 ಕ್ಕೂ ಅಧಿಕ ಕೃತಿಗಳು ರಚಿಸಿದ್ದು, ಸಾಹಿತ್ಯ ಲೋಕದ ದಿಗ್ಗಜರು ಆಗಿದ್ದಾರೆ. ಹೀಗಾಗಿ, ಅವರ ಆಯ್ಕೆ ಸರಿಯಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿಂ.ಲಿಂ.ನಾಗರಾಜ್ ಮಾಹಿತಿ ನೀಡಿದ್ದಾರೆ.

ಸಾಹಿತ್ಯ ಸಮ್ಮೇಳನ ಕನ್ನಡಿಗರ ಎಲ್ಲರ ಜಾತ್ರೆ. ಅದಕ್ಕೆ ಸುಖಾಸುಮ್ಮನೆ ಆರೋಪ ಮಾಡುವುದು ಬಿಡಿ, ಎಲ್ಲರೂ ಬನ್ನಿ ಕುಳಿತುಕೊಂಡು ಆರೋಗ್ಯಕರವಾದ ಚರ್ಚೆ ಮಾಡೋಣ. ಶಿವಲಿಂಗಯ್ಯರ ಕೃತಿಗಳನ್ನು ಓದುವ ಮೂಲಕ, ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳೋಣ. ಅದನ್ನು ಬಿಟ್ಟು ನುಡಿ ಜಾತ್ರೆಗೆ ಅಡ್ಡಪಡಿಸಿ ಅವಮಾನಿಸಲು ಮುಂದಾಗಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರ ಕಸಾಪ ಧ್ವನಿ ಎತ್ತಬೇಕು: ಶೃಂಗೇರಿಯಲ್ಲಿ ನಡೆದ ನಾಡಿನ ಜಾತ್ರೆಗೆ ಸರಕಾರದ ಸಚಿವರೊಬ್ಬರು ನೇತೃತ್ವ ವಹಿಸಿಕೊಂಡು ವಿರೋಧ ವ್ಯಕ್ತಪಡಿಸಿದ್ದರು. ಈಗ ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪ್ರಗತಿಪರರ ಆಯ್ಕೆ ಸಹಿಸದೇ, ಇದಕ್ಕೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಿಯಲ್ಲ. ಈ ಬಗ್ಗೆ ಕೇಂದ್ರ ಕಸಾಪ ಧ್ವನಿ ಎತ್ತಬೇಕಿದೆ ಎಂದು ಕಾದಂಬರಿಕಾರ ಕುಂ.ವೀರಭದ್ರಪ್ಪ ಆಗ್ರಹಿಸಿದ್ದಾರೆ.

ಅಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ: ಯಾವುದೇ ಕಾರಣಕ್ಕೂ ಅಧ್ಯಕ್ಷರ ಬದಲಾವಣೆ ಮಾಡುವುದಿಲ್ಲ. ಈಗಾಗಲೇ ನಿಗದಿ ಪಡಿಸಿದ ದಿನದಂದೇ ಸಮ್ಮೇಳನ ನಡೆಯಲಿದೆ. ಇದಕ್ಕಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು 5 ಲಕ್ಷ ರೂ. ಅನುದಾನ ನೀಡಿದೆ. ಸಾರ್ವಜನಿಕರು ಕೂಡ ದೇಣಿಗೆ ನೀಡಿದ್ದಾರೆ ಎಂದು ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿಂ.ಲಿಂ.ನಾಗರಾಜ್ ತಿಳಿಸಿದ್ದಾರೆ.

ಒಂದು ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಜವಾಬ್ದಾರಿ, ಸ್ವತಂತ್ರವಿರುತ್ತದೆ. ನಾಡು, ನುಡಿ, ಸಾಂಸ್ಕೃತಿಕ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವ ಅರ್ಹತೆ ಪರಿಷತ್ತಿಗೆ ಇದೆ. ಈ ವಿಷಯದಲ್ಲಿ ಸರಕಾರ ಹಸ್ತಕ್ಷೇಪ ಸರಿಯಲ್ಲ.

-ಪ್ರೊ.ಕೆ.ಮರುಳಸಿದ್ದಪ್ಪ, ಹಿರಿಯ ಚಿಂತಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News