6 ನಗರ ಸ್ಥಳೀಯ ಸಂಸ್ಥೆಗಳಿಗೆ ಫೆ.9 ಕ್ಕೆ ಚುನಾವಣೆ

Update: 2020-01-14 16:53 GMT

ಬೆಂಗಳೂರು, ಜ.14: ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಿರುವ ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ರಾಜ್ಯದ 6 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದ್ದು, ಫೆ.9 ರಂದು ಚುನಾವಣೆ ನಡೆಯಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ (ನಗರಸಭೆ), ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ(ನಗರಸಭೆ), ಮೈಸೂರು ಜಿಲ್ಲೆಯ ಹುಣಸೂರು(ನಗರಸಭೆ), ಬಳ್ಳಾರಿ ಜಿಲ್ಲೆಯ ಸಿರಗುಪ್ಪ(ನಗರಸಭೆ), ತೆಕ್ಕಲಕೋಟೆ(ಪಟ್ಟಣ ಪಂಚಾಯತ್) ಹಾಗೂ ವಿಜಯಪುರ ಜಿಲ್ಲೆಯ ಸಿಂಧಗಿ(ಪುರಸಭೆ) ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.

ಜ.21 ರಂದು ಜಿಲ್ಲಾ ಚುನಾವಣಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ. ಜ.28ಕ್ಕೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಜ.29 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಜ.31 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗುತ್ತದೆ. ಫೆ.9 ರಂದು ಮತದಾನ ನಡೆಯಲಿದ್ದು, ಫೆ.10 ರಂದು ಅಗತ್ಯವಿದ್ದಲ್ಲಿ ಮರು ಮತದಾನ ನಡೆಯಲಿದೆ. ಫೆ.11 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆದು, ಅಂದೇ ಚುನಾವಣೆ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ಮತದಾನದ ಹಿನ್ನೆಲೆಯಲ್ಲಿ ಇಂದಿನಿಂದಲೇ ಚುನಾವಣೆ ನಡೆಯುವ ಕಡೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ವೆಚ್ಚಮಿತಿ: ಮಹಾನಗರ ಪಾಲಿಕೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 3 ಲಕ್ಷ ರೂ., ನಗರಸಭೆಯಲ್ಲಿ ಸ್ಪರ್ಧಿಸುವವರಿಗೆ 2 ಲಕ್ಷ ರೂ., ಪುರಸಭೆಯಲ್ಲಿ ಸ್ಪರ್ಧಿಸುವವರಿಗೆ 1.5 ಲಕ್ಷ ರೂ., ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಪರ್ಧಿಸುವವರಿಗೆ 1 ಲಕ್ಷ ರೂ.,ಗಳು ವೆಚ್ಚ ಮಿತಿ ನಿಗದಿ ಮಾಡಲಾಗಿದೆ.

ಭಾವಚಿತ್ರವಿರುವ ಮತಪತ್ರ: ಒಂದೇ ವಾರ್ಡಿನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದರಿಂದ ಅಭ್ಯರ್ಥಿಗಳನ್ನು ಗುರುತಿಸಲು ಸಾಧ್ಯವಾಗುವಂತೆ ಮತಪತ್ರದಲ್ಲಿ ಹೆಸರಿನ ಮುಂದೆ ಭಾವಚಿತ್ರ ಮುದ್ರಿಸಲಾಗುತ್ತಿದೆ.

ನೋಟಾಗೆ ಅವಕಾಶ: ಪ್ರತಿಬಾರಿಯಂತೆ ಈ ಬಾರಿಯೂ ಮತಯಂತ್ರಗಳಲ್ಲಿ ನೋಟಾಗೆ ಅವಕಾಶ ಕಲ್ಪಿಸಲಾಗಿದೆ. ಮತದಾರರು ತಮ್ಮ ರಹಸ್ಯ ಮತವನ್ನು ಇದಕ್ಕೂ ಚಲಾಯಿಸಲು ಅವಕಾಶವಿದೆ.

ಪ್ರಮಾಣಪತ್ರ: ಸ್ಪರ್ಧೆ ಮಾಡುವ ಪ್ರತಿಯೊಬ್ಬರೂ ನಾಮಪತ್ರದ ಜತೆಗೆ ತಮ್ಮ ಹಿನ್ನೆಲೆ, ಚರಾಸ್ತಿ, ಸ್ಥಿರಾಸ್ತಿ ವಿವರಗಳು, ಸ್ವ ವಿವರ, ವಿದ್ಯಾರ್ಹತೆ, ಆದಾಯದ ಮೂಲಗಳ ವಿವರ ಪ್ರಮಾಣ ಪತ್ರದಲ್ಲಿ ನಮೂದಿಸಬೇಕಿದೆ.

ವೀಕ್ಷಕರ ನೇಮಕ: ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಸಾಮಾನ್ಯ ವೀಕ್ಷಕರನ್ನು ಹಾಗೂ ಚುನಾವಣಾ ವೆಚ್ಚ ವೀಕ್ಷಕರನ್ನು ಆಯೋಗದಿಂದ ನೇಮಕ ಮಾಡಲಾಗಿದೆ.

ಉಪ ಚುನಾವಣೆ: ವಿವಿಧ ಕಾರಣಗಳಿಂದ ತೆರವುಗೊಂಡಿದ್ದ ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ.18, ಖಾನಾಪುರ ಪಟ್ಟಣ ಪಂಚಾಯತ್‌ನ ವಾರ್ಡ್ ನಂ.5 ಹಾಗೂ ಹಿರೇಕೆರೂರು ಪಟ್ಟಣ ಪಂಚಾಯತ್ ವಾರ್ಡ್ ನಂ.12 ಕ್ಕೆ ಉಪ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News