ಚಿಕ್ಕಮಗಳೂರಿನ 180 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ: ಯಡಿಯೂರಪ್ಪ

Update: 2020-01-14 17:04 GMT

ಚಿಕ್ಕಮಗಳೂರು, ಜ.14: ರಾಜ್ಯದಲ್ಲಿ ಅನಾವೃಷ್ಟಿ, ಅತಿವೃಷ್ಟಿಯಿಂದಾಗಿ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ರೈತರಿಗೆ ಎಲ್ಲ ರೀತಿಯ ಸಹಕಾರ ಕೊಡುವುದೇ ರಾಜ್ಯ ಸರಕಾರದ ಗುರಿ. ಮುಂದಿನ ಬಜೆಟ್‍ನಲ್ಲಿ ರಾಜ್ಯದ ರೈತ ಕಷ್ಟಗಳಿಗೆ ಎಲ್ಲ ರೀತಿಯ ನೆರವು ನೀಡುವ ನಿಟ್ಟಿನಲ್ಲಿ ಉತ್ತಮ ಯೋಜನೆಗಳನ್ನು ಜಾರಿ ಮಾಡಲಾಗುವುದು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಅಜ್ಜಂಪುರ ಸಮೀಪದ ಸುಕ್ಷೇತ್ರ ಸೊಲ್ಲಾಪುರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶ್ರೀ ಗುರುಸಿದ್ಧರಾಮ ಶಿವಯೋಗಿಗಳ 847ನೇ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಒಂದೆಡೆ ಅತಿವೃಷ್ಟಿಯಾಗಿದ್ದರೆ ಮತ್ತೊಂದೆಡೆ ಅನಾವೃಷ್ಟಿಯಾಗಿದೆ. ರೈತರು ಬೆಳೆಯುವ ಬೆಳೆಗೆ ವೈಜ್ಞಾನಿಕ ಬೆಲೆ ನೀಡಬೇಕಿದೆ. ಮುಂದಿನ ಬಜೆಟ್‍ನಲ್ಲಿ ಈ ಎಲ್ಲ ವಿಚಾರಗಳಿಗೆ ಹೆಚ್ಚಿನ ಆಧ್ಯತೆ ಕೊಡಲಾಗುವುದು ಎಂದರು.

ಶ್ರೀ ಸಿದ್ದರಾಮೇಶ್ವರರು ನೊಳಂಬರ ಕಾಲದಲ್ಲಿಯೇ ಕೆರೆಗಳಿಗೆ ಪುನಃಶ್ಚೇತನ ನೀಡಿದ್ದರು. ಜನತೆಗೆ ಕುಡಿಯುವ ನೀರು ಒದಗಿಸಲು ಶ್ರಮಿಸಿದ್ದರು. ಬಸವೇಶ್ವರರ ಕಾಯಕವೇ ಕೈಲಾಸ ಎಂಬುದನ್ನು ತಮ್ಮ ಜೀವನದಲ್ಲಿ ತೋರಿಸಿಕೊಟ್ಟಿದ್ದಾರೆ. ಕಾಯಕದಿಂದ ಜನರನ್ನು ಸರಿದಾರಿಯಲ್ಲಿ ಕರೆದೊಯ್ಯಲು ಸಾಧ್ಯ ಎಂಬುದನ್ನು ಮನಗಂಡು ಅದರಂತೆ ನಡೆದವರು ಎಂದು ಹೇಳಿದರು.

ಶ್ರೀ ಸಿದ್ದರಾಮ ಶ್ರೀಗಳು ಆ ಕಾಲದಲ್ಲಿ ರೈತರಿಗಾಗಿ ಕೆರೆಕಟ್ಟೆಗಳನ್ನು ಕಟ್ಟುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಇಂದು ಇರುವ ಕೆರೆಕಟ್ಟೆಗಳನ್ನು ಉಳಿಸಿಕೊಳ್ಳಬೇಕಾಗಿದೆ. ಕೆರೆಕಟ್ಟೆಗಳಿಗೆ ಪುನಶ್ಚೇತನ ಕಲ್ಪಿಸಬೇಕಾಗಿದೆ. ಜಲಾಶಯಗಳಿಂದ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕಿದೆ. ಅಂತರ್ಜಲವನ್ನು ಉಳಿಸಬೇಕಾಗಿದೆ. ಇದು ನಮ್ಮ ಸರ್ಕಾರಕ್ಕೆ ಇರುವ ಸವಾಲಾಗಿದೆ. ಮುಂದಿನ ಬಜೆಟ್‍ನಲ್ಲಿ ಗುರು ಸಿದ್ದರಾಮೇಶ್ವರರ ಕನಸನ್ನು ಈಡೇರಿಸಲು, ರೈತರಿಗೆ ಉತ್ತಮ ಜೀವನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ರೈತರನ್ನು ಸ್ವಾಭಿಮಾನಿಗಳಾಗಿ ಬದುಕುವಂತೆ ಮಾಡಬೇಕಿದೆ. ಈ ಹಿಂದೆಯೂ ತಾನು ಮುಖ್ಯಮಂತ್ರಿಯಾಗಿದ್ದಾಗ ರೈತರಿಗಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರೂ ರೈತರಿಗಾಗಿ ಹಲವು ಉತ್ತಮ ಯೋಜನೆಗಳನ್ನು ರೂಪಿಸಿದ್ದಾರೆ. ಇತ್ತೀಚೆಗಷ್ಟೇ ಭತ್ತಕ್ಕೆ ಬೆಂಬಲ ಬೆಲೆ ಕೊಡುವ ಮೂಲಕ ಸಹಕಾರ ನೀಡಲಾಗಿದೆ. ಮುಂದಿನ 3 ವರ್ಷಗಳಲ್ಲಿಯೂ ರೈತ ಪರವಾದ ಆಡಳಿತ ನೀಡುವುದಾಗಿ ಹೇಳಿದರು.

ಈ ಜಿಲ್ಲೆಯ ಬಯಲು ಭಾಗಗಳಾದ ಕಡೂರು, ತರೀಕೆರೆ ತಾಲೂಕುಗಳು ಹಾಗೂ ಚಿಕ್ಕಮಗಳೂರು ತಾಲೂಕಿನ ಬಯಲುಭಾಗಗಳ 180 ಕೆರೆಗಳಿಗೆ ನೀರು ತುಂಬಿಸುವ ಗೋಂದಿ ಯೋಜನೆಗೆ ಈಗಾಗಲೆ ಅನುಮೋದನೆ ನೀಡಲಾಗಿದೆ. 1200 ಕೋಟಿ ರೂ. ಯೋಜನೆ ಇದಾಗಿದ್ದು, ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಗುರು ಸಿದ್ದರಾಮ ಶಿವಯೋಗಿಗಳು ಕರ್ನಾಟಕಕ್ಕೆ ಮಾತ್ರ ಸೀಮಿತರಾಗದೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಪ್ರವಚನ ನೀಡಿ ಎಲ್ಲರ ಮನದಲ್ಲಿ ನೆಲೆಸಿದ ಯೋಗಿಗಳಾಗಿದ್ದಾರೆ. ಯಳನಾಡು, ಶ್ರೀಶೈಲ, ಸೊಲ್ಲಾಪುರ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಂಚರಿಸಿ ಆಧ್ಯಾತ್ಮ ಹಾಗೂ ಕಾಯಕ ತತ್ವಗಳನ್ನು ಪ್ರಚಾರ ಮಾಡಿದವರುಇಂತಹ ಶ್ರೀಗಳು ಎಳನಾಡು ಸೊಲ್ಲಾಪುರದಲ್ಲಿ ನೆಲೆಸಿರುವುದು ನಮ್ಮ ಸೌಭಾಗ್ಯ ಎಂದರು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಗುರು ಸಿದ್ಧರಾಮರ ಚರಿತ್ರೆಯನ್ನುಜೀವನದಲ್ಲಿ ಸನ್ಮಾರ್ಗ ಮುಕ್ತಿ ಕಾಣಬೇಕಾದರೆ ಆದರ್ಶಗಳಲ್ಲಿ ಪರೋಪಕಾರ ಜ್ಞಾನ ಸಿದ್ಧಿ ಎರಡನ್ನು ನೋಡಿದ್ದೇವೆ. ಆಧ್ಯಾತ್ಮದ ಕಡೆಗೆ ಚಿಕ್ಕ ವಯಸ್ಸಿನಲ್ಲೇ ಒಲವು ತೋರಿದವರು ಸಿದ್ದರಾಮ ಶ್ರೀಗಳು. ಕಾಯಕವೇ ಧರ್ಮ ಎನ್ನುವ ನಿಟ್ಟಿನಲ್ಲಿ ಪರೋಪಕಾರಿ ಕೆಲಸವನ್ನು ಮಾಡುತ್ತಾ ಕೆರೆಕಟ್ಟೆಗಳ ನಿರ್ಮಾಣ ಮಾಡಿ ಜನರಿಗೆ ಸ್ಪೂರ್ತಿದಾಯಕವಾದವರು. ಶರಣ, ಅಲ್ಲಮ ಪ್ರಭು ವೈಚಾರಿಕತೆಯಿಂದ ಪ್ರಭಾವ ಬೀರಿದವರು ಗುರು ಸಿದ್ದರಾಮ ಎಂದರು.

ಉಸ್ತುವಾರಿ ಸಚಿವ ಸಿ.ಟಿ.ರವಿ ಮಾತನಾಡಿ, ಶಿವಯೋಗಿ ಸಿದ್ದರಾಮಯ್ಯ ಗುರುಗಳು ನಾಡಿನಾದ್ಯಾಂತ ಸಂಚರಿಸಿ ಹಲವು ಕಾಯಕ ತತ್ವಗಳನ್ನು ಜನರಲ್ಲಿ ಮೂಡಿಸಿದವರು. ಅವರ ಜಯಂತಿಯನ್ನು 847 ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದು, ಅಂದಿನ ತತ್ವಗಳು ಇಂದಿಗೂ ಜೀವಂತವಾಗಿದ್ದು, ಅವುಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಅವರು ಬದುಕಿದ ಬದುಕೇ ಮಾನವಜನಾಂಗಕ್ಕೆ ಪ್ರೇರಣೆ ಕೊಡುತ್ತದೆ. ಆಸ್ತಿ ಮಾಡಿದವರನ್ನು ನೆನೆಸಲಾಗುವುದಿಲ್ಲ. ಒಳ್ಳೆಯ ಕೆಲಸವನ್ನು ಮಾಡಿದವರನ್ನು ನೆನೆಸಲಾಗುತ್ತದೆ. ಬಸವಣ್ಣನವರ ಹಾದಿಯಲ್ಲಿ ಸಾಗಿದ ಇವರು ಜನರನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುವಲ್ಲಿ ಶ್ರಮಿಸಿದ ಶರಣರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತರೀಕೆರೆ ಶಾಸಕ ಡಿ.ಎಸ್.ಸುರೇಶ್, ಕಡೂರು ಶಾಸಕ ಬೆಳ್ಳಿಪ್ರಕಾಶ್, ಹೊಸದುರ್ಗ ಶಾಸಕ ಗೂಳಿಹಟ್ಟಿಶೇಖರ್, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಎಸ್.ಎನ್.ನಾಗರಾಜ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮಾಜಿಅಧ್ಯಕ್ಷಗೋ.ರು.ಚನ್ನಬಸಪ್ಪ, ಯಳನಾಡು ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾಸ್ವಾಮಿಗಳು, ಅಭಿನವ ಮಲ್ಲಿಕಾರ್ಜುನ, ದೇಶೀಕೇಂದ್ರ ಚಿಕ್ಕನಾಯಕನಹಳ್ಳಿ ಹಾಗೂ ಹಲವು ಸಂಸ್ಥಾನದ ಶ್ರೀಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸ್ಪಿ ನಿನ್ನನ್ನು ಸಸ್ಪೆಂಡ್ ಮಾಡಬೇಕಾಗುತ್ತೆ: 
ಕ್ಷಮೆ ಕೋರಿದ ಸಿಎಂ:
ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಂದ ನಂತರ ಪತ್ರಕರ್ತರನ್ನು ಒಳಗೆ ತೆರಳಲು ಪೊಲೀಸರು ಬಿಡದೆ ತಡೆಗಟ್ಟಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪತ್ರಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಸ್ಥಳದಲ್ಲಿದ್ದ ಪೊಲೀಸರು ಕೆಲ ಪತ್ರಕರ್ತರ ಕುತ್ತಿಗೆಗೆ ಕೈ ಹಾಕಿ ತಳ್ಳಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪತ್ರಕರ್ತರು ಪೊಲೀಸರೊಂದಿಗೆ ವಾಗ್ವಾದ ಆರಂಭಿಸಿದರು ಎಂದು ಆರೋಪಿಸಲಾಗಿದೆ.

ಗಲಾಟೆ ಹೆಚ್ಚಾದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ, ಪತ್ರಕರ್ತರನ್ನು ಒಳಗೆ ಬಿಡಿ ಎಂದು ಪೊಲೀಸರಿಗೆ ಸೂಚಿಸಿದರು. ಆದರೂ ಪತ್ರಕರ್ತರು ಪೊಲೀಸರ ಕ್ರಮವನ್ನು ಖಂಡಿಸಿ ಕಾರ್ಯಕ್ರಮ ಬಹಿಷ್ಕರಿಸಲು ಮುಂದಾದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೊಲೀಸರು ತಮ್ಮ ದರ್ಪ, ದಬ್ಬಾಳಿಕೆಯನ್ನು ನಿಲ್ಲಿಸಬೇಕು. ಪತ್ರಕರ್ತರು ನಮ್ಮ ಆಹ್ವಾನದ ಮೇರೆಗೆ ಸುದ್ದಿ ಮಾಡಲು ಬಂದಿರುತ್ತಾರೆ. ಅವರನ್ನು ಒಳಗೆ ಬಿಡದಿದ್ದರೆ ಹೇಗೆ. ಇದೇ ರೀತಿಯ ದಬ್ಬಾಳಿಕೆ ಮುಂದುವರೆದರೆ ನಿಮ್ಮನ್ನು ಸಸ್ಪೆಂಡ್ ಮಾಡಬೇಕಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ ಅವರಿಗೆ ಎಚ್ಚರಿಕೆ ನೀಡಿದರಲ್ಲದೆ, ನಡೆದಿರುವ ಘಟನೆಗೆ ಪತ್ರಕರ್ತರಲ್ಲಿ ತಾವೇ ಕ್ಷಮೆ ಕೋರುವುದಾಗಿ ಹೇಳಿದರು.

ನಂತರ ತಮ್ಮ ಭಾಷಣದಲ್ಲಿಯೂ ಈ ವಿಚಾರ ಪ್ರಸ್ತಾಪಿಸಿದ ಸಿ.ಎಂ., ರಾಜ್ಯದ ಯಾವುದೇ ಭಾಗದಲ್ಲಿ ಆಗಲಿ ಪತ್ರಕರ್ತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆದರೆ ಸಹಿಸುವುದಿಲ್ಲ. ಆತ ಎಷ್ಟೇ ಉನ್ನತ ಮಟ್ಟದ ಅಧಿಕಾರಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂದು ಪತ್ರಕರ್ತರಿಗೆ ಆಗಿರುವ ತೊಂದರೆಗೆ ಕ್ಷಮೆ ಯಾಚಿಸುವುದಾಗಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News