‘ರಾಷ್ಟ್ರೀಯ ಏಕತೆ’ಗೆ ಕರೆ ನೀಡಿದ ಇರಾನ್ ಅಧ್ಯಕ್ಷ

Update: 2020-01-15 16:14 GMT

ಟೆಹರಾನ್, ಜ. 15: ಇರಾನ್ ಅಧ್ಯಕ್ಷ ಹಸನ್ ರೂಹಾನಿ ಬುಧವಾರ ‘ರಾಷ್ಟ್ರೀಯ ಏಕತೆ’ಗೆ ಕರೆ ನೀಡಿದ್ದಾರೆ ಹಾಗೂ ಇರಾನ್‌ನ ಆಡಳಿತದಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

 ಕಳೆದ ವಾರದ ಬುಧವಾರ ಯುಕ್ರೇನ್ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನವೊಂದನ್ನು ತಪ್ಪಾಗಿ ಹೊಡೆದುರುಳಿಸಿರುವುದನ್ನು ಇರಾನ್ ಶನಿವಾರ ಒಪ್ಪಿಕೊಂಡ ಬಳಿಕ, ದೇಶಾದ್ಯಂತ ನಿರಂತರ ನಾಲ್ಕು ದಿನಗಳ ಕಾಲ ಪ್ರತಿಭಟನೆಗಳು ನಡೆದಿವೆ.

ಇರಾನಿಯನ್ನರು ‘ವೈವಿಧ್ಯತೆ’ಯನ್ನು ಬಯಸುತ್ತಾರೆ ಎಂದು ಹೇಳಿದ ರೂಹಾನಿ, ಫೆಬ್ರವರಿ 21ರಂದು ನಡೆಯಲಿರುವ ರಾಷ್ಟ್ರೀಯ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳನ್ನು ಅನರ್ಹಗೊಳಿಸದಂತೆ ಚುನಾವಣಾ ಪ್ರಾಧಿಕಾರಗಳನ್ನು ಒತ್ತಾಯಿಸಿದರು.

‘‘ಜನರು ನಮ್ಮ ಒಡೆಯರು ಹಾಗೂ ನಾವು ಅವರ ಸೇವಕರು. ಸೇವಕರು ತಮ್ಮ ಒಡೆಯರೊಂದಿಗೆ ಗೌರವ, ನಿಖರತೆ ಮತ್ತು ಪ್ರಾಮಾಣಿಕತೆಯಿಂದ ವ್ಯವಹರಿಸಬೇಕು’’ ಎಂದು ಸಂಪುಟ ಸಭೆಯ ಬಳೀಕ ಮಾತನಾಡಿದ ರೂಹಾನಿ ಹೇಳಿದರು.

‘‘ಅಧಿಕಾರಿಗಳು ತಮ್ಮನ್ನು ಪ್ರಾಮಾಣಿಕತೆ ಮತ್ತು ವಿಶ್ವಾಸದಿಂದ ಕಾಣಬೇಕೆಂದು ಜನರು ಬಯಸುತ್ತಾರೆ’’ ಎಂದು ಸರಕಾರಿ ಟೆಲಿವಿಶನ್‌ನಲ್ಲಿ ನೇರಪ್ರಸಾರಗೊಂಡ ಭಾಷಣದಲ್ಲಿ ಅವರು ಹೇಳಿದರು.

ಪದೇ ಪದೇ ಈ ರೀತಿಯ ಬೃಹತ್ ಪ್ರಮಾದಗಳು ಸಂಭವಿಸುತ್ತಿರುವುದು ‘ಅಸ್ವೀಕಾರಾರ್ಹ’ ಹಾಗೂ ‘ಊಹೆಗೆ ನಿಲುಕದ್ದು’ ಎಂದು ಹೇಳಿದ ರೂಹಾನಿ, ಇವುಗಳು ಇರಾನ್‌ನ ರಾಜಕೀಯ ವ್ಯವಸ್ಥೆಯ ಕುರಿತ ‘ಬೃಹತ್ ನಿರ್ಧಾರ’ವೊಂದಕ್ಕೆ ಪ್ರೇರಣೆಯಾಗಬೇಕು ಎಂದರು.

ಸಶಸ್ತ್ರ ಪಡೆಗಳು ಕ್ಷಮೆ ಕೋರಬೇಕು

ಪ್ರಯಾಣಿಕ ವಿಮಾನವನ್ನು ಹೊಡೆದುರುಳಿಸಿರುವುದಕ್ಕಾಗಿ ಸಶಸ್ತ್ರ ಪಡೆಗಳು ಕ್ಷಮೆ ಕೋರಬೇಕು ಹಾಗೂ ಆ ಪ್ರಮಾದ ಯಾಕೆ ಸಂಭವಿಸಿತು ಎನ್ನುವುದಕ್ಕೆ ವಿವರಣೆ ನೀಡಬೇಕು ಎಂದು ಹಸನ್ ರೂಹಾನಿ ಹೇಳಿದರು.

ಉದ್ವಿಗ್ನತೆ ಶಮನದಲ್ಲಿ ಭಾರತದ ಪಾತ್ರಕ್ಕೆ ಅವಕಾಶವಿದೆ

ಕೊಲ್ಲಿ ವಲಯದಲ್ಲಿ ನೆಲೆಸಿರುವ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಭಾರತ ಪಾತ್ರವಹಿಸಬಹುದಾಗಿದೆ ಎಂದು ಇರಾನ್ ವಿದೇಶ ಸಚಿವ ಜವಾದ್ ಝಾರಿಫ್ ಬುಧವಾರ ಹೇಳಿದ್ದಾರೆ.

‘‘ಭಾರತವು ಮಹತ್ವದ ಭಾಗೀದಾರ ದೇಶವಾಗಿರುವುದರಿಂದ ಕೊಲ್ಲಿ ವಲಯದಲ್ಲಿನ ಉದ್ವಿಗ್ನತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪಾತ್ರವೊಂದನ್ನು ನಿಭಾಯಿಸಬಹುದಾಗಿದೆ’’ ಎಂದು ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News