ಚಿತ್ರನಟಿ ರಶ್ಮಿಕಾ ಮಂದಣ್ಣ ನಿವಾಸಕ್ಕೆ ಐಟಿ ದಾಳಿ

Update: 2020-01-16 12:43 GMT

ಮಡಿಕೇರಿ,ಜ.16: ಬಹುಭಾಷಾ ಚಿತ್ರನಟಿ ರಶ್ಮಿಕಾ ಮಂದಣ್ಣ ಅವರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದು ಬೆಳಗ್ಗೆ 7.30 ಗಂಟೆ ಸುಮಾರಿಗೆ ವೀರಾಜಪೇಟೆ ಪಟ್ಟಣದ ಹೊರ ವಲಯದ ಕುಕ್ಲೂರು ಗ್ರಾಮದಲ್ಲಿರುವ ನಟಿಯ ಕುಟುಂಬಕ್ಕೆ ಸೇರಿದ ಬೃಹತ್ ಬಂಗಲೆಗೆ ಸುಮಾರು 10 ಮಂದಿ ಇದ್ದ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ವಿಚಾರಣೆ ಕೈಗೊಂಡಿದ್ದಾರೆ.

ನಟಿಯ ಅಭಿಮಾನಿಗಳೆಂದು ಹೇಳಿಕೊಂಡು ಎರಡು ಬಾಡಿಗೆ ವಾಹನಗಳಲ್ಲಿ ಬಂದ ಐಟಿ ಅಧಿಕಾರಿಗಳು, ಬಂಗಲೆಯನ್ನು ಪ್ರವೇಶಿಸಿ, ಒಬ್ಬರೇ ಇದ್ದ ರಶ್ಮಿಕಾ ಮಂದಣ್ಣ ಅವರ ತಂದೆ ಮದನ್ ಮಂದಣ್ಣ ಅವರನ್ನು ವಿವಿಧ ಆದಾಯ ಮೂಲಗಳ ಬಗ್ಗೆ ವಿಚಾರಣೆಯನ್ನು ಆರಂಭಿಸಿದರು. 

ಕೋಟ್ಯಾಧಿಪತಿಯಾಗಿರುವ ಮದನ್ ಮಂದಣ್ಣ ಅವರು ಕಾಫಿ ತೋಟವನ್ನು ಹೊಂದಿದ್ದಾರಲ್ಲದೆ, ಉದ್ಯಮಿಯೂ ಆಗಿದ್ದಾರೆ.ವಿರಾಜಪೇಟೆಯಲ್ಲಿ ಕೋಟಿ ಮೌಲ್ಯಕ್ಕೂ ಮೀರಿದ ಸೆರಿನಿಟಿ ಕಲ್ಯಾಣ ಮಂಟಪವನ್ನು ಹೊಂದಿದ್ದು, ಐಟಿ ಅಧಿಕಾರಿಗಳು ಸಭಾಂಗಣದ ಕಛೇರಿಗೂ ತೆರಳಿ ವ್ಯವಸ್ಥಾಪಕರನ್ನು ವಿಚಾರಣೆಗೆ ಒಳಪಡಿಸಿದರು. ಅಲ್ಲದೆ, ಕೆಲವು ದಾಖಲೆಗಳನ್ನು ಪರಿಶೀಲಿಸಿದರು. 

ಈ ನಡುವೆ ನಟಿ ರಶ್ಮಿಕಾ ಮಂದಣ್ಣ ಅವರಿಗೆ ತುರ್ತು ಸಮನ್ಸ್ ಜಾರಿ ಮಾಡಿ, ವೀರಾಜಪೇಟೆಗೆ ಬರುವಂತೆ ಸೂಚಿಸಿದರು. ತಮಿಳುನಾಡಿನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ ಅವರು ಸಂಜೆ ಅಲ್ಲಿಂದ ವೀರಾಜಪೇಟೆಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.

ರಶ್ಮಿಕಾ ಸದ್ಯ ಕನ್ನಡ ಮತ್ತು ತೆಲುಗು ಚಿತ್ರದಲ್ಲಿ ಬೇಡಿಕೆಯಿರುವ ನಟಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News