ಮೊದಲ ಟ್ವೆಂಟಿ-20: ವಿಶ್ವ ಚಾಂಪಿಯನ್ ವಿಂಡೀಸ್‌ಗೆ ಐರ್ಲೆಂಡ್ ಶಾಕ್

Update: 2020-01-16 07:54 GMT

ಸೈಂಟ್ ಜಾರ್ಜ್, ಜ.16: ಆರಂಭಿಕ ಆಟಗಾರ ಪಾಲ್ ಸ್ಟ್ಟಿರ್ಲಿಂಗ್ ಜೀವನಶ್ರೇಷ್ಠ(95)ಇನಿಂಗ್ಸ್ ನೆರವಿನಿಂದ ಐರ್ಲೆಂಡ್ ತಂಡ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್‌ಗೆ ಬುಧವಾರ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಕೇವಲ ನಾಲ್ಕು ರನ್‌ನಿಂದ ಸೋಲುಣಿಸಿ ಶಾಕ್ ನೀಡಿದೆ.

  ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 208 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ವಿಂಡೀಸ್  20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 204 ರನ್ ಗಳಿಸಿತು. ವಿಂಡೀಸ್ 10 ಓವರ್‌ನೊಳಗೆ ಕೇವಲ 2 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿ ಗೆಲುವಿನತ್ತ ಹೆಜ್ಜೆ ಹಾಕಿತ್ತು. ವಿಂಡೀಸ್‌ಗೆ ಗೆಲ್ಲಲು ಕೊನೆಯ ಓವರ್‌ನಲ್ಲಿ 13 ರನ್ ಅಗತ್ಯವಿತ್ತು. ಆಲ್‌ರೌಂಡರ್ ಜೋಶ್ ಲಿಟ್ಲ್(3-29) ಕೊನೆಯ ಓವರ್‌ನಲ್ಲಿ ರುಥರ್‌ಫೋರ್ಡ್(26) ಹಾಗೂ ಅಪಾಯಕಾರಿ ಬ್ಯಾಟ್ಸ್‌ಮನ್ ಡ್ವೇಯ್ನ್ ಬ್ರಾವೊ(9) ವಿಕೆಟ್ ಕಬಳಿಸಿ ಐರ್ಲೆಂಡ್‌ಗೆ ಗೆಲುವಿನ ಹಾದಿ ಸುಗಮಗೊಳಿಸಿದರು. ಕೊನೆಯ ಎಸೆತದಲ್ಲಿ ಗೆಲ್ಲಲು 5 ರನ್ ಅಗತ್ಯವಿದ್ದಾಗ ಕ್ರೀಸ್‌ನಲ್ಲಿದ್ದ ಹೇಡನ್ ವಾಲ್ಶ್ ತಂಡಕ್ಕೆ ಗೆಲುವಿನ ರನ್ ಗಳಿಸಲು ವಿಫಲ ಯತ್ನ ನಡೆಸಿದರು.

ಐರ್ಲೆಂಡ್ ಎರಡನೇ ಬಾರಿ ವಿಂಡೀಸ್ ವಿರುದ್ಧ ಟ್ವೆಂಟಿ-20 ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಆತಿಥೇಯ ವಿಂಡೀಸ್ ಪರ ಆರಂಭಿಕ ಬ್ಯಾಟ್ಸ್‌ಮನ್ ಎವಿನ್ ಲೆವಿಸ್ ಸರ್ವಾಧಿಕ ಸ್ಕೋರ್(53,28 ಎಸೆತ, 6 ಬೌಂಡರಿ,3 ಸಿಕ್ಸರ್)ಗಳಿಸಿದರು. ಏಕದಿನ ಪಂದ್ಯಗಳಲ್ಲಿ 95 ಹಾಗೂ 102 ರನ್ ಗಳಿಸಿದ್ದ ಲೆವಿಸ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಆರನೇ ಬಾರಿ ಅರ್ಧಶತಕ ಗಳಿಸಿದರು.

ವಿಂಡೀಸ್ ನಾಯಕ ಕಿರೊನ್ ಪೊಲಾರ್ಡ್(31 ರನ್, 15 ಎಸೆತ)ಐರ್ಲೆಂಡ್ ಕೈಯಿಂದ ಪಂದ್ಯವನ್ನು ಕಸಿಯುವ ಭೀತಿ ಹುಟ್ಟಿಸಿದರು. ಐರ್ಲೆಂಡ್ ಫೀಲ್ಡರ್‌ಗಳು ಉತ್ತಮ ಫೀಲ್ಡಿಂಗ್ ನಡೆಸಿ ಪಂದ್ಯವನ್ನು ಕೊನೆಯ ಓವರ್ ತನಕ ಕೊಂಡೊಯ್ದರು.

  ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ತಂಡದ ಪರ ಸ್ಟಿರ್ಲಿಂಗ್ ಆಕರ್ಷಕ ಏಳನೇ ಅರ್ಧಶತಕ(95, 47 ಎಸೆತ, 6 ಬೌಂಡರಿ,8 ಸಿಕ್ಸರ್)ಸಿಡಿಸಿದ್ದಲ್ಲದೆ ಸಹ ಆರಂಭಿಕ ಕೆವಿನ್ ಒ’ಬ್ರಿಯಾನ್(48 ರನ್) ಜೊತೆಗೆ ಮೊದಲ ವಿಕೆಟ್‌ಗೆ 154 ರನ್ ಜೊತೆಯಾಟ ನಡೆಸಿದರು. ಆರಂಭದಲ್ಲಿ ಐರ್ಲೆಂಡ್‌ನ ಬ್ಯಾಟಿಂಗ್ ಅಬ್ಬರ ಹೇಗಿತ್ತೆಂದರೆ ಅದು 6.3ನೇ ಓವರ್‌ನಲ್ಲಿ 100 ಹಾಗೂ 12ನೇ ಓವರ್‌ನಲ್ಲಿ 150 ರನ್ ಗಳಿಸಿತು. ಇಬ್ಬರು ಆರಂಭಿಕರು ಔಟಾದ ಬಳಿಕ ವಿಂಡೀಸ್ ಬೌಲರ್‌ಗಳು ಐರ್ಲೆಂಡ್‌ನ ರನ್ ವೇಗಕ್ಕೆ ಕಡಿವಾಣ ಹಾಕಿದರು.

2016ರ ಸೆಪ್ಟಂಬರ್‌ನ ಬಳಿಕ ಮೊದಲ ಬಾರಿ ಅಂತರ್‌ರಾಷ್ಟ್ರೀಯ ಪಂದ್ಯವೊಂದರಲ್ಲಿ ಕಾಣಿಸಿಕೊಂಡ ಬ್ರಾವೊ ಅವರು ಎಸೆದ ಮೊದಲ ಓವರ್‌ನಲ್ಲಿ ಸ್ಟಿರ್ಲಿಂಗ್ 18 ರನ್ ಕಲೆಹಾಕಿದರು. ಹಿರಿಯ ಬೌಲರ್ ಈ ಹಿನ್ನಡೆಯಿಂದ ಬೇಗನೆ ಚೇತರಿಸಿಕೊಂಡು 4 ಓವರ್‌ಗಳಲ್ಲಿ 28 ರನ್‌ಗೆ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಐರ್ಲೆಂಡ್: 20 ಓವರ್‌ಗಳಲ್ಲಿ 208/7

(ಸ್ಟಿರ್ಲಿಂಗ್ 95, ಒ’ಬ್ರಿಯಾನ್ 48, ಬ್ರಾವೊ 2-28, ಕಾಟ್ರೆಲ್ 2-37, ಪೀರ್ 2-45)

ವೆಸ್ಟ್‌ಇಂಡೀಸ್: 20 ಓವರ್‌ಗಳಲ್ಲಿ 204/7

(ಲೆವಿಸ್ 53, ಪೊಲಾರ್ಡ್ 31, ಲಿಟ್ಲ್ 3-29, ಯಂಗ್ 2-31)

ಪಂದ್ಯಶ್ರೇಷ್ಠ: ಸ್ಟಿರ್ಲಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News