ಅನರ್ಹ ಪಡಿತರ ಚೀಟಿದಾರರ ಪತ್ತೆಗೆ ಅಗತ್ಯ ಕ್ರಮವಹಿಸಲಾಗಿದೆ: ನಾಗರಾಜf

Update: 2020-01-16 18:00 GMT
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ನಾಗರಾಜ್

ಚಿಕ್ಕಮಗಳೂರು, ಜ.16: ಸರಕಾರ ಅನರ್ಹ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಕೆಲ ಸಂದೇಹಾಸ್ಪದ ವ್ಯಕ್ತಿಗಳಿಗೆ ನೋಟಿಸ್ ನೀಡಲಾಗಿದ್ದು, ಈ ನೋಟಿಸ್‍ಗೆ ಅನರ್ಹ ಪಡಿತರ ಚೀಟಿದಾರರು ಸ್ಪಂದಿಸುತ್ತಿದ್ದಾರೆಂದು ಇಲಾಖೆ ಉಪನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.

ಗುರುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಚೀಟಿದಾರರು ತಮ್ಮ ಪಡಿತರ ಚೀಟಿಗಳನ್ನು ಶರಣಾಗತಿ ಮಾಡಲು ಸರಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಈ ಸಂಬಂಧ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನರ್ಹ ಪಡಿತರ ಚೀಟಿದಾರರನ್ನು ಪತ್ತೆಗೆ ಅಗತ್ಯ ಕ್ರಮವಹಿಸಿದೆ ಎಂದ ಅವರು, ಈ ಆದೇಶದ ಹಿನ್ನೆಲೆಯಲ್ಲಿ ಕೆಲ ಅನರ್ಹ ಪಡಿತರ ಚೀಟಿದಾರರನ್ನು ಇಲಾಖೆಗೆ ಅವುಗಳನ್ನು ತಂದೊಪ್ಪಿಸಿದ್ದಾರೆ ಎಂದರು.

ಅನರ್ಹ ಪಡಿತರ ಚೀಟಿದಾರರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿವಿಧ ಮೂಲಗಳಿಂದ ಶಂಕಾಸ್ಪದ ಪಡಿತರ ಚೀಟಿದಾರರ ಮಾಹಿತಿ ಕಲೆ ಹಾಕಿದ್ದು, ಈ ಸಂಬಂಧ ಜಿಲ್ಲೆಯಾದ್ಯಂತ ಇರುವ ಇಂತಹ ಪಡಿತರ ಚೀಟಿದಾರರ ಒಂದು ಪಟ್ಟಿಯನ್ನು ಕಳಿಸಿದೆ. ಈ ಪಟ್ಟಿಯಲ್ಲಿರುವವರಿಗೆ ಇಲಾಖೆಯಿಂದ ಈಗಾಗಾಲೇ ನೋಟಿಸ್ ನೀಡಲಾಗಿದ್ದು, ನೋಟಿಸ್‍ಗೆ ಅನರ್ಹ ಪಡಿತರ ಚೀಟಿದಾರರು ಸ್ಪಂದಿಸುತ್ತಿದ್ದಾರೆ.

ತ್ವರಿತಗತಿಯಲ್ಲಿ ಅನರ್ಹ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚುವ ನಿಟ್ಟನಲ್ಲಿ ಇಲಾಖೆ ವತಿಯಿಂದ ಕಾರ್ಯಪ್ರವೃತ್ತವಾಗಿದ್ದು, ಜಿಲ್ಲಾದ್ಯಂತ ಶರಣಾಗತಿ ಮಾಡಲಾದ ಪರಿತರ ಚೀಟಿಗಳು ಮತ್ತು ಪತ್ತೆ ಹಚ್ಚಲಾದ ಪಡಿತರ ಚೀಟಿಗಳ ಅಂಕಿಅಂಶಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದ್ದು, ಶೀಘ್ರ ಈ ಮಾಹಿತಿ ನೀಡುವುದಾಗಿ ಅವರು ತಿಳಿಸಿದರು.

ಸರಕಾರ ಪಡಿತರ ಚೀಟಿಗಳ ವಿತರಣೆ ಸಂಬಂಧ ನಾಲ್ಕು ವಿಭಾಗಗಳಲ್ಲಿ ಕುಟುಂಬಗಳನ್ನು ವಿಂಗಡಣೆ ಮಾಡಿದ್ದು, ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಳನ್ನು ನಿರ್ದಿಷ್ಟ ಮಾನದಂಡಗಳನ್ನು ನಿಗದಿ ಮಡಿದೆ. ಈ ಮಾನದಂಡಗಳ ಆಧಾರದ ಮೇಲೆ ಸರಕಾರ ಎಪಿಎಲ್ ಪಡಿತರದಾರರನ್ನು ಆಧ್ಯತೇತರ ಪಡಿತರ ಕುಟುಂಬಗಳು(ಎನ್‍ಪಿಎಚ್‍ಎಲ್) ಮತ್ತು ಬಿಪಿಎಲ್ ಪಡಿತರ ಕುಟುಂಬಗಳನ್ನು ಆಧ್ಯತಾ ಪಡಿತರ ಕುಟುಂಬಗಳು(ಪಿಎಚ್‍ಎಲ್) ಎಂದು ಮರುನಾಮಕರಣ ಮಾಡಿದೆ. ಈ ಮಾನದಂಡಗಳ ಆಧಾರದ ಮೇಲೆ ಎಪಿಎಲ್(ಎನ್‍ಪಿಎಚ್‍ಎಲ್) ಮತ್ತು ಬಿಪಿಎಲ್(ಪಿಎಚ್‍ಎಲ್) ಪಡಿತರ ಚೀಟಿಗಳ ಹಂಚಿಕೆಗೆ ಸರಕಾರ ಕ್ರಮಕೈಗೊಂಡಿದೆ ಎಂದು ನಾಗರಾಜ್ ಮಾಹಿತಿ ನೀಡಿದರು.

ಪಡಿತರ ಚೀಟಿದಾರರು ಇಕೆವೈಸಿ ನೋಂದಣಿಗೆ ಜ.10 ಕೊನೆ ದಿನ ಎಂಬ ಗೊಂದಲದಿಂದಾಗಿ ನ್ಯಾಯಬೆಲೆ ಅಂಡಿಗಳ ಮುಂದೆ ಒಮ್ಮೆಗೆ ಭಾರೀ ಸಂಖ್ಯೆಯಲ್ಲಿ ಪಡಿತರಚೀಟಿದಾರರು ದೌಡಾಯಿಸಿದ್ದರಿಂದ ಸರ್ವರ್ ಸಮಸ್ಯೆ ಕಾಣಿಸಿಕೊಂಡಿತ್ತು. ಇ ಕೆವೈಸಿ ನೋಂದಣಿಗೆ ರಾಜ್ಯ ಸರಕಾರ ಮಾರ್ಚ್ ತಿಂಗಳಾಂತ್ಯದವರೆಗೂ ಕಾಲಾವಕಾಶ ನೀಡಿದೆ. ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಮನಗಂಡು ಮಾರ್ಚ್‍ವರೆಗೆ ಕಾಲಾವಕಾಶ ಇರುವುದರಿಂದ ಪ್ರತಿದಿನ ನ್ಯಾಯಬೆಲೆ ಅಂಗಡಿಯವರೆ ಖುದ್ದಾಗಿ ಪಡಿತರ ಚೀಟಿದಾರರಿಗೆ ಕರೆ ಮಾಡಿ ಕನಿಷ್ಠ 5 ಪಡಿತರ ಕುಟುಂಬಗಳ ನೋಂದಣಿ ಮಾಡುವಂತೆ ಈಗಾಗಗಲೇ ಸೂಚನೆ ನೀಡಲಾಗಿದೆ. ಹೀಗೆ ಮಾಡುವುದರಿಂದ ಸರ್ವರ್ ಸಮಸ್ಯೆ ತಲೆದೋರುವುದಿಲ್ಲ. ನೆಟ್‍ವರ್ಕ್ ಸಮಸ್ಯೆ ಇರುವು ನ್ಯಾಯಬೆಲೆ ಅಂಗಡಿಗಳಲ್ಲಿ ಇಕೆವೈಸಿ ನೋಂದಣಿಗೆ ಅಗತ್ಯಕ್ರಮಕೈಗೊಳ್ಳಲಾಗುವುದು. ಹಿಂದೆ ಪಡಿತರ ಚೀಟಿದಾರರ ಕುಟುಂಬಗಳಲ್ಲಿ ಮರಣ ಹೊಂದಿದವರ ಬಗ್ಗೆ ಮಾಹಿತಿ ಸಿಗದೇ ಮರಣ ಹೊಂದಿದವರ ಹೆಸರಿಗೂ ಪಡೆತರ ಪಡೆಯಲಾಗುತ್ತಿತ್ತು. ಇಂತಹವರ ಪತ್ತೆ ಕಷ್ಟವಾಗುತಿತ್ತು. ಇಕೆವೈಸಿಯಿಂದಾಗಿ ಮರಣ ಹೊಂದಿದವರ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಸಿಗಲಿದೆ ಎಂದು ಅವರು ಮಾಹಿತಿ ನೀಡಿದರು.

2103ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿ ಬಳಿಕೆ ಎಪಿಎಲ್ ಕಾರ್ಡ್‍ಗಳನ್ನು ಎನ್‍ಪಿಎಚ್‍ಎಲ್(ಆದ್ಯತೇತರ ಪಡಿತರ ಕುಟುಂಬಗಳು) ಎಂತಲೂ, ಬಿಪಿಎಲ್ ಕಾರ್ಡ್‍ಗಳನ್ನು ಪಿಎಚ್‍ಎಲ್ ( ಆದ್ಯತಾ ಪಡಿತರ ಕುಟುಂಬಗಳು) ಎಂತಲೂ ಕರೆಯಲಾಗುತ್ತಿದೆ. ಈ ಕಾರ್ಡ್‍ಗಳೊಂದಿಗೆ ಅಂತ್ಯೋದಯ ಕಾರ್ಡ್ ಚಾಲ್ತಿಯಲ್ಲಿದೆ. ಅನರ್ಹ, ಅರ್ಹ ಪಡಿತರ ಚೀಟಿದಾರರ ಪತ್ತೆಗೆ ಕಂದಾಯ ಇಲಾಖೆ, ಆರ್‍ಟಿಒ, ನಗರಸಭೆಯಂತಹ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ದಾಖಲೆಗಳನ್ನು ಪಡೆದುಕೊಂಡು ಇವುಗಳ ಸಹಾಯದಿಂದ ಪಡಿತರ ಚೀಟಿದಾರರ ಆದಾಯ, ಆಸ್ತಿ, ಜಮೀನು, ಹೊಂದಿರುವ ವಾಹನಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಪರಿಶೀಲಿಸಿ ಅರ್ಹ, ಅನರ್ಹ ಪಡಿತರ ಚೀಟಿದಾರರನ್ನು ಪತ್ತೆ ಮಾಡಲಾಗುವುದು ಎಂದು ಇದೇ ವೇಳೆ ನಾಗರಾಜ್ ತಿಳಿಸಿದರು.

ಯಾರಿಗೆ ಬಿಪಿಎಲ್, ಯಾರಿಗೆ ಎಪಿಎಲ್
ಸರಕಾರಿ ಇಲಾಖೆಗಳ ಸಿಬ್ಬಂದಿ, ಅಧಿಕಾರಿಗಳು ಮತ್ತು ಆದಾಯ ತೆರಿಗೆ ಪಾವತಿ ಮಾಡುವವರು ಮೊದಲನೇ ವರ್ಗದಲ್ಲಿದ್ದು, ಆದಾಯ ತೆರಿಗೆ ಪಾವತಿ ಮಾಡುವವರು ಆಧ್ಯತೇತರ ಪಡಿತರ ಕುಟುಂಬಗಳ ವ್ಯಾಪ್ತಿಗೆ ಬರುವುದರಿಂದ ಇಂತವರಿಗೆ ಬಿಪಿಎಲ್(ಎನ್‍ಪಿಎಚ್‍ಎಲ್) ಕಾರ್ಡುಗಳು ಸಿಗುವುದಿಲ್ಲ. ಎರಡನೇ ವರ್ಗದಲ್ಲಿ 1 ಹೆಕ್ಟೇರ್ ಜಮೀನು ಹೊಂದಿರುವವರು ಮತ್ತು ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿ ವಿಸ್ತೀರ್ಣದ ಮನೆ ಹೊಂದಿರುವವರಿದ್ದು, 1 ಹೆಕ್ಟೇರ್ ಒಳಗೆ ಜಮೀನು ಹೊಂದಿರುವವರು ಬಿಪಿಎಲ್ ವ್ಯಾಪ್ತಿಗೆ ಒಳಪಟ್ಟರೇ, ಅದಕ್ಕಿಂತಲೂ ಹೆಚ್ಚು ಭೂಮಿಗಿಂತ ಹೊಂದಿದ್ದರೇ ಬಿಪಿಎಲ್ ವ್ಯಾಪ್ತಿಗೆ ಒಳಪಡುವುದಿಲ್ಲ. ಅಂತೆಯೇ 1000 ಚದರ ಅಡಿ ವಿಸ್ತೀರ್ಣಕ್ಕೂ ಮೇಲ್ಪಟ್ಟವರು ಬಿಪಿಎಲ್ ವ್ಯಾಪ್ತಿಗೆ ಒಳಪಡುವುದಿಲ್ಲ.  ಮೂರನೇ ವರ್ಗದಲ್ಲಿ ಜೀವನೋಪಾಯಕ್ಕೆ ಹೊಂದಿರುವ ವಾಹನಗಳನ್ನು ಹೊರತುಪಡಿಸಿ ಇತರ ನಾಲ್ಕು ಚಕ್ರದ ವಾಹನಗಳನ್ನು ಸ್ವಂತ ಬಳಕೆಗೆ ಹೊಂದಿರುವವರಿದ್ದು, ಜೀವನೋಪಾಯಕ್ಕಾಗಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವವರು ಬಿಪಿಎಲ್ ವ್ಯಾಪ್ತಿಗೆ ಒಳಪಡಲಿದ್ದು, ಸ್ವಂತಕ್ಕೆ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವವರು ಬಿಪಿಎಲ್ ವ್ಯಾಪ್ತಿಗೆ ಒಳಪಡುವುದಿಲ್ಲ. ನಾಲ್ಕನೇ ವರ್ಗದಲ್ಲಿ 1 ಲಕ್ಷ 20 ಸಾವಿರ ರೂ. ಮೇಲ್ಪಟ್ಟು ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಾಗಿರುವುದಿಲ್ಲ.
- ನಾಗರಾಜ್, ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಚಿಕ್ಕಮಗಳೂರು


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News