​2020ರ ಮೊದಲ ಭಾರತೀಯ ಉಪಗ್ರಹ ಉಡಾವಣೆ

Update: 2020-01-17 03:39 GMT
ಫೋಟೊ : clicknow.in

ಹೊಸದಿಲ್ಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಮಿತ, ಈ ವರ್ಷದ ಮೊದಲ ಜಿಸ್ಯಾಟ್-30 ಸಂವಹನ ಉಪಗ್ರಹವನ್ನು ಯುರೋಪಿಯನ್ ಅಧಿಕ ತೂಕ ಉಡಾವಣೆ ಸಾಮರ್ಥ್ಯದ ವಾಹನ ಅರೈನ್-5 (ವಿಎ 251)ಮೂಲಕ ಫ್ರೆಂಚ್ ಗಯಾನದಿಂದ ಶುಕ್ರವಾರ ನಸುಕಿನ 2.35ರ ವೇಳೆಗೆ ಯಶಸ್ವಿಯಾಗಿ ಉಡಾಯಿಸಲಾಯಿತು.

ಜಿಸ್ಯಾಟ್-30 ಉಪಗ್ರಹವನ್ನು ಉಡಾವಣೆಯ 38 ನಿಮಿಷಗಳ ಬಳಿಕ ಕಕ್ಷೆಗೆ ಸೇರಿಸಲಾಯಿತು.

ಒಟ್ಟು 3357 ಕೆ.ಜಿ. ತೂಕದ ಜಿಸ್ಯಾಟ್-30, ವಿಸ್ತತ ವ್ಯಾಪ್ತಿಯೊಂದಿಗೆ ಹಾಲಿ ಇರುವ ಇನ್ಸಾಟ್-4ಎ ಉಪಗ್ರಹದ ಸೇವೆಗಳನ್ನು ಒದಗಿಸಲಿದೆ. ಕೆಯು ಬ್ಯಾಂಡ್ ಹಾಗೂ ವಿಸ್ತರಿತ ವ್ಯಾಪ್ತಿಯ ಸಿ-ಬ್ಯಾಂಡ್ ಸೇವೆಗಳನ್ನೂ ಒದಗಿಸಲಿದ್ದು, ಭಾರತೀಯ ಭೂ ಪ್ರದೇಶ, ದ್ವೀಪ ಪ್ರದೇಶ, ಕೊಲ್ಲಿ ರಾಷ್ಟ್ರಗಳು, ಬಹುತೇಕ ಏಷ್ಯನ್ ದೇಶಗಳು ಮತ್ತು ಆಸ್ಟ್ರೇಲಿಯಾದ ವ್ಯಾಪ್ತಿಯಲ್ಲೂ ಸೇವೆ ಒದಗಿಸಲು ಸಮರ್ಥವಾಗಿರುತ್ತದೆ.

15 ವರ್ಷಗಳ ಜೀವಿತಾವಧಿ ಹೊಂದಿರುವ ಜಿಸ್ಯಾಟ್-30 ಉಪಗ್ರಹದಲ್ಲಿ ಇಸ್ರೋದ ವಿಸ್ತರಿತ ಐ-3ಕೆ ಬಸ್ ಸಂರಚನೆಯನ್ನು ಅಳವಡಿಸಿಕೊಳ್ಳಲಾಗಿದ್ದು, ಇಸ್ರೋದ ಹಿಂದಿನ ಇನ್ಸಾಟ್ ಮತ್ತು ಜಿಸ್ಯಾಟ್ ಉಪಗ್ರಹ ಸರಣಿಯ ಪರಂಪರೆಯಿಂದ ಇದು ಚಾಲಿತವಾಗಲಿದೆ. ಇದರ ಪೇಲೋಡ್ ನಿರ್ದಿಷ್ಟವಾಗಿ ವಿನ್ಯಾಸಗೊಂಡಿದ್ದು, ಬಾಹ್ಯಾಕಾಶ ನೌಕೆಯಲ್ಲಿ ಗರಿಷ್ಠ ಸಂಖ್ಯೆಯ ಟ್ರಾನ್ಸ್‌ಪಾಂಡರ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ವಿಎಸ್‌ಎಟಿ ಜಾಲ, ಟೆಲಿವಿಷನ್ ಅಪ್‌ಲಿಂಕಿಂಗ್, ಟೆಲೆಪೋರ್ಟ್ ಸೇವೆ, ಡಿಜಿಟಲ್ ಉಪಗ್ರಹ ಸುದ್ದಿ ಸಂಗ್ರಹ, ಡಿಟಿಎಚ್ ಸೇವೆಗಳು, ಸೆಲ್ಯುಲರ್ ಬ್ಯಾಕ್‌ಹೌಲ್ ಸಂಪರ್ಕ ಮತ್ತು ಇಂಥ ಹಲವು ಅನ್ವಯಿಕೆಗಳಿಗೆ ಇದು ಹೆಚ್ಚು ನೆರವಾಗಲಿದೆ.

ಜಿಸ್ಯಾಟ್-30 ಕಾರ್ಯಾರಂಭದ ಬಳಿಕ, ಗ್ರಾಮೀಣ ಪ್ರದೇಶಗಳ ಡಿಜಿಟಲ್ ಅಂತರವನ್ನು ಕಿರಿದುಗೊಳಿಸಲು ಬಾಹ್ಯಾಕಾಶ ಅನ್ವಯಿಕೆಗಳನ್ನು ಬಳಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News