ಸುಪ್ರೀಂ ತೀರ್ಪಿನೊಂದಿಗೆ ರಾಮಮಂದಿರದಲ್ಲಿ ಆರೆಸ್ಸೆಸ್ ಪಾತ್ರ ಮುಗಿದಿದೆ: ಮೋಹನ್ ಭಾಗ್ವತ್

Update: 2020-01-18 03:51 GMT

ಆಗ್ರಾ, ಜ.18: ರಾಮಮಂದಿರ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡುವ ಮೂಲಕ, ರಾಮಮಂದಿರ ನಿರ್ಮಾಣದ ಮಹತ್ವದ ಬಗ್ಗೆ ಜನಾಭಿಪ್ರಾಯ ಮೂಡಿಸುವ ಹಾಗೂ ಜಾಗೃತಿ ಮೂಡಿಸುವ ಸಂಘ ಪರಿವಾರದ ಕೆಲಸ ಮುಗಿದಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ಕಾಶಿ ಹಾಗೂ ಮಥುರಾ ಮಂದಿರಗಳ ವಿಚಾರ ಆರೆಸ್ಸೆಸ್ ಕಾರ್ಯಸೂಚಿಯಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೊರಾದಾಬಾದ್‌ಗೆ ನಾಲ್ಕು ದಿನಗಳ ಭೇಟಿ ನೀಡಿರುವ ಅವರ ಜತೆ ಆರೆಸ್ಸೆಸ್ ಕಾರ್ಯಕರ್ತರು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವಸ್ಥಾನ ನಿರ್ಮಿಸುವ ವಿಚಾರ ಇದೀಗ ಸರ್ಕಾರ ಮತ್ತು ಟ್ರಸ್ಟ್‌ಗೆ ಸೇರಿದ್ದು. ಆದರೆ ದೇವಸ್ಥಾನ ನಿರ್ಮಾಣ ಆರಂಭವಾಗುವವರೆಗೂ ವಿಶ್ವ ಹಿಂದೂ ಪರಿಷತ್‌ನ ಪಾತ್ರ ಇರುತ್ತದೆ ಎಂದು ಹೇಳಿದ್ದಾರೆ.

ಬೃಜ್, ಮೀರಠ್ ಹಾಗೂ ಉತ್ತರಾಖಂಡ ಪ್ರಾಂತ್ಯಗಳ ಸಂಘದ ಕಾರ್ಯಕರ್ತರ ಜತೆ ಮತ್ತು ಪದಾಧಿಕಾರಿಗಳ ಜತೆ ಭಾಗ್ವತ್ ಮಾತುಕತೆ ನಡೆಸಿದರು. ಸಂಘದ ಆಸಕ್ತಿ ಕೇವಲ ರಾಮಮಂದಿರ ವಿಚಾರವಾಗಿ ಮಾತ್ರ; ವಿವಾದಿತ ಮಥುರಾ ಮತ್ತು ಕಾಶಿ ವಿಚಾರಗಳು ತಮ್ಮ ಕಾರ್ಯಸೂಚಿಯಲ್ಲಿಲ್ಲ ಎಂದು ವಿವರಿಸಿದರು. ಸುಮಾರು 90 ಮಂದಿ ಈ ಸಂವಾದದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

ಸಿಎಎ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಕಾರ್ಯಕರ್ತರು ಪ್ರಶ್ನಿಸಿದಾಗ, ಈ ವಿಚಾರದಲ್ಲಿ ಮೋದಿ ಸರ್ಕಾರವನ್ನು ಬೆಂಬಲಿಸುವುದಾಗಿ ಖಚಿತಪಡಿಸಿದರು. ಇದು ಜನರಿಗೆ ಪ್ರಯೋಜನವಾಗುವ ವಿಚಾರವಾಗಿರುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News