ವಿಶ್ವದ ಕುಬ್ಜ ವ್ಯಕ್ತಿ ನೇಪಾಳದಲ್ಲಿ ನಿಧನ

Update: 2020-01-18 05:18 GMT

ಕಠ್ಮಂಡು, ಜ.18: ವಿಶ್ವದ ಕುಬ್ಜ ವ್ಯಕ್ತಿ, ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರವಾಗಿದ್ದ ಖಗೇಂದ್ರ ಥಾಪ ಮಗರ್ ನೇಪಾಳದ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿರುವುದಾಗಿ ಅವರ ಕುಟುಂಬ ಮೂಲಗಳು ತಿಳಿಸಿವೆ. 67.08 ಸೆಂಟಿಮೀಟರ್(2 ಅಡಿ,2.41 ಇಂಚು)ಎತ್ತರದ ಖಗೇಂದ್ರ ಕಠ್ಮಂಡುವಿನ ಪೊಖಾರದಲ್ಲಿರುವ ಆಸ್ಪತ್ರೆಯಲ್ಲಿ ನ್ಯುಮೋನಿಯಾದಿಂದ ಮೃತಪಟ್ಟಿದ್ದಾರೆ.

1992ರ ಅಕ್ಟೋಬರ್ 14ರಂದು ನೇಪಾಳದಲ್ಲಿ ಜನಿಸಿದ್ದ ಖಗೇಂದ್ರ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದರು. ಖಗೇಂದ್ರ ನಿಧನಕ್ಕೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮುಖ್ಯ ಸಂಪಾದಕ ಕ್ರೆಗ್ ಗ್ಲೆನ್‌ಡೆ ಶೋಕ ವ್ಯಕ್ತಪಡಿಸಿದ್ದಾರೆ. "ನ್ಯುಮೋನಿಯಾದಿಂದಾಗಿ ಅವರು ಆಸ್ಪತ್ರೆ ಹೋಗಿ, ಬರುತ್ತಿದ್ದರು. ಈ ಬಾರಿ ಅವರಿಗೆ ಹೃದಯಕ್ಕೆ ನ್ಯುಮೋನಿಯಾ ಬಾಧಿಸಿದ್ದು, ಅವರು ಇಂದು ಮೃತಪಟ್ಟಿದ್ದಾರೆ'' ಎಂದು ಖಗೇಂದ್ರ ಅವರ ಸಹೋದರ ಮಹೇಶ್ ತಿಳಿಸಿದ್ದಾರೆ.

ಖಗೇಂದ್ರ ಥಾಪನನ್ನು 2010ರಲ್ಲಿ 18ನೇ ವಯಸ್ಸಿನಲ್ಲಿ ವಿಶ್ವದ ಕುಬ್ಜ ವ್ಯಕ್ತಿ ಎಂದು ಘೋಷಿಸಲಾಗಿತ್ತು. ಅವರನ್ನು ತಪಾಸಣೆ ನಡೆಸಿದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳು ಅವರಿಗೆ ಪ್ರಮಾಣಪತ್ರವನ್ನು ನೀಡಿದ್ದರು. ಥಾಪ ಕೈಯಲ್ಲಿ ಹಿಡಿದಿದ್ದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣಪತ್ರ ಅವರಿಗಿಂತ ಸ್ವಲ್ಪವಷ್ಟೇ ಎತ್ತರವಿತ್ತು.

‘‘ಖಗೇಂದ್ರ ಹುಟ್ಟುವಾಗಲೇ ಕುಬ್ಜನಾಗಿದ್ದ. ಅವನು ನಿಮ್ಮ ಅಂಗೈಯಷ್ಟು ಉದ್ದವಿದ್ದ. ಆತ ತುಂಬಾ ಚಿಕ್ಕವನಿದ್ದ ಕಾರಣ ಅವನನ್ನು ಸ್ನಾನ ಮಾಡಿಸುವುದು ಕಷ್ಟಕರವಾಗಿತ್ತು’’ ಎಂದು ಖಗೇಂದ್ರ ಅವರ ತಂದೆ ರೂಪ್ ಬಹದೂರ್ ಹೇಳಿದ್ದಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತಿಳಿಸಿದೆ.

27ರ ಹರೆಯದ ಖಗೇಂದ್ರ 12ಕ್ಕೂ ಅಧಿಕ ದೇಶಗಳಿಗೆ ಪ್ರಯಾಣಿಸಿದ್ದು, ಯುರೋಪ್ ಹಾಗೂ ಅಮೆರಿಕದ ಟಿವಿಗಳಲ್ಲಿ ಕಾಣಿಸಿಕೊಂಡಿದ್ದರು. ಖಗೇಂದ್ರ ನೇಪಾಳ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿದ್ದರು. ಭಾರತದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಅಮಗೆ ಸೇರಿದಂತೆ ವಿಶ್ವದ ಇತರ ಕುಬ್ಜರನ್ನು ಖಗೇಂದ್ರ ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News