ಮೈಸೂರು ಮನಪಾ: ಮೇಯರ್ ಆದ ಮೊದಲ ಅಲ್ಪಸಂಖ್ಯಾತ ಮಹಿಳೆ ತಸ್ನೀಂ

Update: 2020-01-18 16:11 GMT

ಮೈಸೂರು, ಜ.18: ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ತಸ್ನೀಂ, ಉಪಮೇಯರ್ ಆಗಿ ಸಿ.ಶ್ರೀಧರ್ ಆಯ್ಕೆಯಾಗಿದ್ದಾರೆ.

ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಶನಿವಾರ ಎರಡನೇ ಅವಧಿಗೆ ಪ್ರಾದೇಶಿಕ ಆಯುಕ್ತ ಯಶವಂತ್ ಚುನಾವಣೆ ಪ್ರಕ್ರಿಯೆ ನಡೆಸಿದರು.

ಕಾಂಗ್ರೆಸ್,- ಜೆಡಿಎಸ್ ಎರಡನೇ ಅವದಿಗೂ ಮೈತ್ರಿ ಮುಂದುವರಿಸಿದ್ದು, ಎರಡನೇ ಅವಧಿಗೆ 26ನೇ ಮೀನಾ ಬಝಾರ್ ವಾಡ್೯ನ ಜೆಡಿಎಸ್ ಅಭ್ಯರ್ಥಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ತಸ್ನೀಂ ಬಿಜೆಪಿಯ ಗೀತಾಶ್ರೀ ಯೋಗಾನಂದ ವಿರುದ್ದ 47 ಮತಗಳನ್ನು ಪಡೆದು ಆಯ್ಕೆಯಾದರು.

ಉಪಮೇಯರ್ ಆಗಿ 38ನೇ ಗಿರಿಯಾಬೋವಿ ಪಾಳ್ಯದ ಪರಿಶಿಷ್ಟ ಜಾತಿಯ ಸಿ.ಶ್ರೀಧರ್ 47 ಮತಗಳನ್ನು ಪಡೆದು ಎರಡನೇ ಅವದಿಗೆ ಆಯ್ಕೆಯಾದರು.

ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಮಹಿಳೆಯೊಬ್ಬರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ನೂತನ ಮೇಯರ್, ಉಪಮೇಯರ್ ಅವರಿಗೆ ಹಿಂದಿನ ಮೇಯರ್  ಪುಷ್ಪಾಲತಾ ಜಗನ್ನಾಥ್ ಮೇಯರ್ ಗೌನ್ ತೊಡಿಸಿ ಹಾರ ಹಾಕಿ ಶುಭ ಹಾರೈಸಿದರು.  ಪ್ರಾದೇಶಿಕ ಆಯುಕ್ತ ಯಶವಂತ್, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಕಾರ್ಯದರ್ಶಿ ಗಾಯತ್ರಿ ಪುಷ್ಪಗುಚ್ಚ ನೀಡಿ ಶುಭಕೋರಿದರು.

ಮೇಯರ್ ಆದ ಮೊದಲ ಅಲ್ಪಸಂಖ್ಯಾತ ಮಹಿಳೆ 

ಮೈಸೂರು ಮಹಾನಗರ ಪಾಲಿಕೆಗೆ ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಮಹಿಳೆಯೋರ್ವರು ಮೇಯರ್ ಸ್ಥಾನವನ್ನು ಅಲಂಕರಿಸಿದ್ದಾರೆ. 26ನೇ ಮೀನ ಬಜಾರ್ ವಾರ್ಡ್ ನ ತಸ್ನೀಂ 33ನೇ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಮೊದಲ ಅಲ್ಪಸಂಖ್ಯಾತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಸ್ನೀಂ ಬಿ.ಎ. ಪದವೀಧರೆಯಾಗಿದ್ದು, ಇದೇ ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇವರ ಪತಿ ಸೈಯದ್ ಸಮೀವುಲ್ಲಾ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಎರಡನೇ ಅವಧಿಯ ಮೇಯರ್ ಸ್ಥಾನ ಬಿಸಿಎಂ ಮಹಿಳೆಗೆ, ಉಪಮೇಯರ್ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿತ್ತು.

ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ಜೆಡಿಎಸ್ ನಿಂದ ಆಯ್ಕೆಯಾಗಿದ್ದ ತಸ್ನೀಂ ಮೇಯರ್ ಆಗಿ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಸಿ.ಶ್ರೀಧರ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News