ಎಸ್‌ಡಿಪಿಐನಂತೆ ಆರೆಸ್ಸೆಸ್ ಕೂಡ ಕಾನೂನು ಬಾಹಿರ ಚಟುವಟಿಕೆ ನಡೆಸಿಲ್ಲವೇ ?: ಸಿದ್ದರಾಮಯ್ಯ ಪ್ರಶ್ನೆ

Update: 2020-01-18 13:12 GMT

ಬೆಂಗಳೂರು, ಜ. 18: ಯಾವುದೇ ಪಕ್ಷ ಅಥವಾ ಸಂಘಟನೆ ಯಾವುದೇ ಮುಖಂಡರನ್ನು ಗುರಿಯನ್ನಾಗಿಸಿಕೊಂಡು ದಾಳಿ ನಡೆಸುವುದು ಸಲ್ಲ. ಎಸ್‌ಡಿಪಿಐನಂತೆ ಆರೆಸ್ಸೆಸ್ ಕೂಡ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್‌ಡಿಪಿಐ ನಿಷೇಧಿಸುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಆರೆಸ್ಸೆಸ್ ಕೂಡ ಇದೇ ರೀತಿಯ ಚಟುವಟಿಕೆಗಳನ್ನು ನಡೆಸಿಲ್ಲವೇ ಎಂದು ಪ್ರಶ್ನಿಸಿದರು. ಯಾವ ವ್ಯಕ್ತಿಯ ಮೇಲೆ ದಾಳಿ ನಡೆಸುವುದು ಸಲ್ಲ. ಬಿಜೆಪಿ, ಕಾಂಗ್ರೆಸ್ ಎಂಬ ಯಾವುದೇ ಭೇದವಿಲ್ಲ. ಎಲ್ಲರೂ ಒಂದೇ ಎಂದು ಹೇಳಿದರು.

ದಾರಿ ತಪ್ಪಿಸಲು: ಕೇಂದ್ರ ಗೃಹ ಸಚಿವ ಅಮಿತ್ ಶಾ ನೆರೆ ಹಾವಳಿಯಿಂದ ಜನ ಸಂಕಷ್ಟದಲ್ಲಿದ್ದಾಗ ರಾಜ್ಯಕ್ಕೆ ಭೇಟಿ ನೀಡಲಿಲ್ಲ. ಈಗ ಯಾವ ಪುರುಷಾರ್ಥಕ್ಕೆ ಬಂದಿದ್ದಾರೆ. ಸುಳ್ಳು ಹೇಳಿ ಜನರ ದಾರಿ ತಪ್ಪಿಸಲು ಬಂದಿರಬಹುದು ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಮಹದಾಯಿ ವಿವಾದ ಬಗೆಹರಿಸುತ್ತೇವೆ ಎಂದು ಚುನಾವಣೆ ವೇಳೆ ಭರವಸೆ ನೀಡಿದ್ದರು. ಆದರೆ, ಈ ವಿಷಯದಲ್ಲಿ ಗೊಂದಲ ನೀತಿ ಅನುಸರಿಸಲಾಗುತ್ತಿದೆ ಎಂದ ಅವರು, ಅಮಿತ್ ಶಾ ಹುಬ್ಬಳ್ಳಿ ಪ್ರವಾಸ ಕೈಗೊಳ್ಳುತ್ತಿದ್ದು, ಅಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.

ನೆರೆ ಸಂತ್ರಸ್ತರಿಗೆ ಕೇಂದ್ರ ಸಮರ್ಪಕ ಪರಿಹಾರ ನೀಡಿಲ್ಲ. ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಅವಕಾಶ ಕೊಡುತ್ತಿಲ್ಲ. ಈಗ ಅಮಿತ್ ಶಾ ಹಾಗೂ ಯಡಿಯೂರಪ್ಪ ಒಂದೇ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳುತ್ತಿದ್ದಾರೆ. ಅವರೊಂದಿಗೆ ನಳಿನ್ ಕುಮಾರ್ ಕಟೀಲು ಕೂಡ ಇದ್ದಾರೆ. ಬಿಜೆಪಿಯಲ್ಲಿ ಚರ್ಚೆಯ ವಾತಾವರಣವೇ ಇಲ್ಲ ಎಂದು ಟೀಕಿಸಿದರು.

ಅಭಿಪ್ರಾಯ ಹೇಳಿದ್ದೇನೆ: ವಿಪಕ್ಷ ನಾಯಕ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಬೇರ್ಪಡಿಸಬಾರದೆಂದು ವರಿಷ್ಠರ ಮುಂದೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಮಹಾರಾಷ್ಟ್ರದಲ್ಲಿ ಬೇರ್ಪಡಿಸಿದ್ದಾರೆ. ಆದರೆ ಅಲ್ಲಿನ ವಾತಾವರಣವೇ ಬೇರೆ, ರಾಜ್ಯದ ಸ್ಥಿತಿಯೇ ಬೇರೆ ಎಂದು ಸ್ಪಷ್ಟನೆ ನೀಡಿದರು.

ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅದನ್ನು ಅಂಗೀಕರಿಸುವುದು ಅಥವಾ ತಿರಸ್ಕರಿಸುವುದು ಹೈಕಮಾಂಡ್‌ಗೆ ಬಿಟ್ಟದ್ದು ಎಂದ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಇರಬೇಕೆಂದು ತಿಳಿಸಿದ್ದೇನೆ. ಆದರೆ, ನಾಲ್ವರನ್ನು ನೇಮಿಸಿ ಎಂದು ಹೇಳಿಲ್ಲ ಎಂದು ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News