ಕುಡಿಯಲು ಹಣ ನೀಡದ್ದಕ್ಕೆ ತಂದೆಯನ್ನೇ ಕೊಲೆಗೈದ ಪುತ್ರ

Update: 2020-01-18 12:47 GMT
ಲೋಕೇಶ್

ಮಡಿಕೇರಿ, ಜ.18: ದೊಣ್ಣೆಯಿಂದ ಹಲ್ಲೆ ಮಾಡಿ ಪುತ್ರನೊಬ್ಬ ತನ್ನ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಸೋಮವಾರಪೇಟೆ ಸಮೀಪದ ಗೋಣಿಮರೂರು ಜೇನುಕುರುಬರ ಹಾಡಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಗೋಣಿಮರೂರು ಹಾಡಿ ನಿವಾಸಿ ಕರಿಯಪ್ಪ (46) ಎಂಬವರನ್ನು ಅವರ ಪುತ್ರ ಲೋಕೇಶ್(25) ಹತ್ಯೆ ಮಾಡಿದ್ದು, ಘಟನೆ ಸಂದರ್ಭ ತಾಯಿ ಲೀಲಾ (38) ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. 

ಮದ್ಯಪಾನ ಮಾಡಲು ತಂದೆ ಕರಿಯಪ್ಪ ಅವರಲ್ಲಿ ಲೋಕೇಶ್ ಹಣ ಕೇಳಿದ್ದು, ಹಣ ನೀಡಲು ನಿರಾಕರಿಸಿದ್ದರಿಂದ ಮರದ ದೊಣ್ಣೆಯಿಂದ ತಲೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಬಂದ ತಾಯಿ ಲೀಲಾ ಅವರ ಮೇಲೂ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.

ತಲೆ ಭಾಗಕ್ಕೆ ಗಂಭೀರ ಗಾಯವಾದ ಹಿನ್ನೆಲೆ ಕರಿಯಪ್ಪ ಅವರು ಸ್ಥಳದಲ್ಲೇ ಬಿದ್ದು ಅಸುನೀಗಿದ್ದಾರೆ. ತಾಯಿ ಲೀಲಾ ಅವರ ಮೇಲೂ ಹಲ್ಲೆ ನಡೆಸಿದ್ದರಿಂದ ಗಂಭೀರ ಪ್ರಮಾಣದ ಗಾಯಗಳುಂಟಾಗಿದ್ದು, ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ಇಂದು ಮಧ್ಯಾಹ್ನ ಬಾಣಾವರ ಸಮೀಪ ಅರೋಪಿ ಲೋಕೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್‍ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಅವರುಗಳ ನೇತೃತ್ವದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News