ವಿಮಾನ ಪತನವು ಸೇನಾಧಿಕಾರಿಯ ‘ತ್ಯಾಗ’ವನ್ನು ಮಂಕಾಗಿಸಲು ಬಿಡಬಾರದು: ಖಾಮಿನೈ

Update: 2020-01-18 14:25 GMT

ಟೆಹರಾನ್, ಜ. 18: ಯುಕ್ರೇನ್ ಏರ್‌ಲೈನ್ಸ್ ವಿಮಾನವನ್ನು ಕಣ್ತಪ್ಪಿನಿಂದಾಗಿ ಹೊಡೆದುರುಳಿಸಿರುವುದನ್ನು ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ದೇಶದ ಜನತೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಶುಕ್ರವಾರ ಹೇಳಿದ್ದಾರೆ ಹಾಗೂ ವಿಮಾನ ಅಪಘಾತವನ್ನು ದೇಶದ ವಿರೋಧಿಗಳು ಅಪಪ್ರಚಾರ ಉದ್ದೇಶಗಳಿಗಾಗಿ ದುರುಪಯೋಗಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

2012ರ ಬಳಿಕ ಮೊದಲ ಬಾರಿಗೆ ರಾಜಧಾನಿ ಟೆಹರಾನ್‌ನಲ್ಲಿ ವಾರದ ಮುಖ್ಯ ಪ್ರಾರ್ಥನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಜನವರಿ 8ರಂದು ನಡೆದ ಘಟನೆ (ಯುಕ್ರೇನ್ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನ ಪತನ)ಯು ಭಯಾನಕ ದುರಂತವಾಗಿದೆ ನಿಜ, ಆದರೆ ಅಮೆರಿಕ ವಿಮಾನದ ದಾಳಿಯಲ್ಲಿ ಹತರಾದ ಇರಾನ್‌ನ ಅತ್ಯಂತ ಸಮರ್ಥ ಸೇನಾಧಿಕಾರಿಗಳ ಪೈಕಿ ಒಬ್ಬರಾಗಿದ್ದ ಕಾಸಿಮ್ ಸುಲೈಮಾನಿಯ ‘ತ್ಯಾಗ’ವನ್ನು ಮರೆಮಾಚಲು ಅದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

ಯುಕ್ರೇನ್ ಏರ್‌ಲೈನ್ಸ್‌ಗೆ ಸೇರಿದ ನಾಗರಿಕ ವಿಮಾನವು ಟೆಹರಾನ್ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ನಗರದ ಹೊರವಲಯದಲ್ಲಿ ಪತನಗೊಂಡಿತ್ತು. ಈ ವಿಮಾನವನ್ನು ಶತ್ರು ಕ್ಷಿಪಣಿಯೆಂಬುದಾಗಿ ತಪ್ಪಾಗಿ ಭಾವಿಸಿ ಕಿರು ವ್ಯಾಪ್ತಿಯ ಕ್ಷಿಪಣಿಯೊಂದರ ಮೂಲಕ ಅದನ್ನು ಸೇನೆಯು ಹೊಡೆದುರುಳಿಸಿತ್ತು ಎಂದು ಕೆಲವು ದಿನಗಳ ಬಳಿಕ ಇರಾನ್ ಹೇಳಿಕೆ ನೀಡಿತ್ತು. ವಿಮಾನದಲ್ಲಿದ್ದ ಎಲ್ಲ 176 ಮಂದದಿ ಪ್ರಾಣ ಕಳೆದುಕೊಂಡಿದ್ದಾರೆ.

ಎಂಟು ವರ್ಷಗಳಲ್ಲಿ ಮೊದಲ ಬಾರಿಗೆ ಶುಕ್ರವಾರದ ಪ್ರಾರ್ಥನಾ ಉಪದೇಶವನ್ನು ನೀಡಿದ ಖಾಮಿನೈ, ಇರಾಕ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ನಾವು ಮಾಡಿದ ಯಶಸ್ವಿ ಕ್ಷಿಪಣಿ ದಾಳಿಗಳು ನಮಗೆ ದೇವರ ಬೆಂಬಲ ಇರುವುದನ್ನು ಸೂಚಿಸುತ್ತವೆ ಎಂದರು.

 ‘ಜರ್ಮನಿ, ಫ್ರಾನ್ಸ್, ಬ್ರಿಟನ್ ಅಮೆರಿಕದ ‘ಸೇವಕರು’

ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್‌ಗಳು ಅಮೆರಿಕದ ‘ಸೇವಕರು’ ಹಾಗೂ ಅವುಗಳು ವಿಶ್ವಾಸಾರ್ಹತೆ ಹೊಂದಿಲ್ಲ ಎಂದು ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಶುಕ್ರವಾರ ತನ್ನ ಶುಕ್ರವಾರದ ಪ್ರವಚನದಲ್ಲಿ ಕಿಡಿಗಾರಿದ್ದಾರೆ. ಅದೇ ವೇಳೆ, ಅಮೆರಿಕದ ಅಧಿಕಾರಿಗಳನ್ನು ‘ಹಾಸ್ಯಗಾರರು’ ಎಂಬುದಾಗಿ ಬಣ್ಣಿಸಿದ್ದಾರೆ.

‘‘ಇರಾನ್ ಪರಮಾಣು ಒಪ್ಪಂದದಿಂದ ಅಮೆರಿಕ ಹೊರ ಹೋದ ಬಳಿಕ, ಈ ಮೂರು ಸರಕಾರಗಳು ಅರ್ಥವಿಲ್ಲದ ಮಾತುಗಳನ್ನು ಆಡುತ್ತಿವೆ. ಆದರೆ, ಈ ದೇಶಗಳು ವಿಶ್ವಾಸಾರ್ಹವಲ್ಲ ಎಂಬುದಾಗಿ ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಯಾಕೆಂದರೆ, ಈ ದೇಶಗಳು ಬೇಕಾದ ಏನನ್ನೂ ಮಾಡುವುದಿಲ್ಲ ಹಾಗೂ ಅಮೆರಿಕದ ಸೇವೆಯನ್ನು ಮಾಡುತ್ತಿರುತ್ತವೆ’’ ಎಂದು ಖಾಮಿನೈ ಹೇಳಿರುವುದಾಗಿ ಇರಾನ್ ಸುದ್ದಿ ಸಂಸ್ಥೆ ‘ಇರ್ನ’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News