ಭೀಮ್ ಆರ್ಮಿಯ ಆಝಾದ್ ದಿಲ್ಲಿಯಲ್ಲಿ ಕಚೇರಿ ಹೊಂದಿದ್ದಾರೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಿ: ನ್ಯಾಯಾಲಯದ ಸೂಚನೆ

Update: 2020-01-18 14:29 GMT

ಹೊಸದಿಲ್ಲಿ,ಜ.18: ಇಲ್ಲಿಯ ಜಾಮಾ ಮಸೀದಿ ಬಳಿ ಡಿ.20ರಂದು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಝಾದ್ ಅವರು,ದಿಲ್ಲಿಯಲ್ಲಿ ಸಾಪ್ತಾಹಿಕ ಸಭೆಗಳನ್ನು ನಡೆಸಲು ಕಚೇರಿಯೊಂದನ್ನು ಹೊಂದಿದ್ದಾರೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳುವಂತೆ ಇಲ್ಲಿಯ ನ್ಯಾಯಾಲಯವು ಶನಿವಾರ ಪೊಲೀಸರಿಗೆ ಸೂಚಿಸಿದೆ.

ದರಿಯಾಗಂಜ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆಝಾದ್‌ಗೆ ಜಾಮೀನು ನೀಡಿದ ಸಂದರ್ಭದಲ್ಲಿ ನಾಲ್ಕು ವಾರಗಳ ಕಾಲ ಅವರು ದಿಲ್ಲಿಗೆ ಭೇಟಿ ನೀಡುವುದನ್ನು ನ್ಯಾಯಾಲಯವು ನಿರ್ಬಂಧಿಸಿತ್ತು ಮತ್ತು ದಿಲ್ಲಿಯಲ್ಲಿ ಚುನಾವಣೆಗಳವರೆಗೆ ಯಾವುದೇ ಧರಣಿಯನ್ನು ನಡೆಸದಂತೆ ಅವರಿಗೆ ನಿರ್ದೇಶ ನೀಡಿತ್ತು.

ದಿಲ್ಲಿಯಲ್ಲಿಯ ಆಝಾದ್ ಅವರ ಕಚೇರಿಯು ರಾಜಕೀಯ ಪಕ್ಷದ ಕಚೇರಿಯೇ ಎನ್ನುವುದನ್ನು ಚುನಾವಣಾ ಆಯೋಗದ ಮೂಲಕ ದೃಢಪಡಿಸಿಕೊಳ್ಳುವಂತೆ ಮತ್ತು ಜ.21ರೊಳಗೆ ವರದಿಯನ್ನು ಸಲ್ಲಿಸುವಂತೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಕಾಮಿನಿ ಲಾವು ಅವರು ಪೊಲೀಸರಿಗೆ ನಿರ್ದೇಶ ನೀಡಿದರು.

ತನ್ನ ಜಾಮೀನು ಆದೇಶದಲ್ಲಿ ವಿಧಿಸಲಾಗಿರುವ ಷರತ್ತುಗಳನ್ನು ಪರಿಷ್ಕರಿಸುವಂತೆ ಕೋರಿ ಆಝಾದ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿದೆ. ತನ್ನ ಮೇಲೆ ಹೇರಿರುವ ನಿರ್ಬಂಧಗಳು ಜಾಗ್ರತಿ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮತ್ತು ಬಡವರು,ದುರ್ಬಲರು,ಶೋಷಿತ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ಸಲಹೆಗಳನ್ನು ನೀಡುವ ಮತ್ತು ಅವರನ್ನು ಮುನ್ನಡೆಸುವ ತನ್ನ ಮೂಲಭೂತ ಹಕ್ಕನ್ನು ಉಲ್ಲಂಘಿಸಿದೆ ಎಂದು ಆಝಾದ್ ಅರ್ಜಿಯಲ್ಲಿ ವಾದಿಸಿದ್ದಾರೆ.

ನ್ಯಾಯವಾದಿಗಳಾದ ಮೆಹಮೂದ ಪ್ರಾಚಾ ಮತ್ತು ಒ.ಪಿ.ಭಾರ್ತಿ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಆಝಾದ್ ಅವರು ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ದಮನಿತ ಮತ್ತು ಶೋಷಿತ ವರ್ಗಗಳ ನಾಯಕರಾಗಿದ್ದು,ಅವರಲ್ಲಿ ಸಾಮಾಜಿಕ ಮತ್ತು ರಾಜಕೀಯ ಅರಿವನ್ನು ಮೂಡಿಸಲು ಶ್ರಮಿಸುತ್ತಿದ್ದಾರೆ. ಅವರು ದಿಲ್ಲಿಯಲ್ಲಿನ ತನ್ನ ಸ್ಥಳೀಯ ವಿಳಾಸದಲ್ಲಿ ‘ಭೀಮ್ ಆರ್ಮಿ ಏಕತಾ ಮಿಷನ್’ನ ಸಾಪ್ತಾಹಿಕ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಆಝಾದ್ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತುರ್ತು ಸಂದರ್ಭಗಳಲ್ಲಿ ದಿಲ್ಲಿಗೆ ಭೇಟಿ ನೀಡಲು ಪ್ರತಿಬಾರಿಯೂ ದಿಲ್ಲಿ ಡಿಸಿಪಿಯ ಅನುಮತಿಯನ್ನು ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ ಮತ್ತು ಇದು ಅವರ ಜೀವಕ್ಕೆ ಅಪಾಯವನ್ನುಂಟು ಮಾಡಬಹುದು ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News