ಐಟಿ ದಾಳಿ: ನಟಿ ರಶ್ಮಿಕಾ ಮಂದಣ್ಣ ಕುಟುಂಬಸ್ಥರಿಗೆ ಸಮನ್ಸ್ ಜಾರಿ

Update: 2020-01-18 14:29 GMT
Photo: Facebook\ Rashmika Mandanna

ಮಡಿಕೇರಿ, ಜ.18: ಐಟಿ ಅಧಿಕಾರಿಗಳ ದಾಳಿಯಿಂದ ಶಾಕ್ ಆಗಿದ್ದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಕುಟುಂಬಸ್ಥರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೇ ಜ.20 ರಂದು ಮೈಸೂರಿನ ಐಟಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಸಮನ್ಸ್ ಜಾರಿಯಾಗಿದೆ ಎಂದು ತಿಳಿದು ಬಂದಿದೆ.

ಐಟಿ ಅಧಿಕಾರಿಗಳು ಕೊಡಗಿನ ವಿರಾಜಪೇಟೆಯಲ್ಲಿರುವ ರಶ್ಮಿಕಾ ಮಂದಣ್ಣ ಅವರ ಮದನ್ ಮಂದಣ್ಣ ಅವರಿಗೆ ಸೇರಿದ ಮನೆಯಲ್ಲಿ ಸತತ ಎರಡು ದಿನಗಳ ಕಾಲ ವಿಚಾರಣೆ ನಡೆಸಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಜೊತೆಗೆ ದಾಖಲೆ ಇಲ್ಲದ 25 ಲಕ್ಷ ರೂ. ಮತ್ತು ತೆರಿಗೆ ವಂಚನೆ ಮಾಡಿದ ಆಸ್ತಿಯ ಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. 

ದಾಳಿ ವೇಳೆ ರಶ್ಮಿಕಾ ತಂದೆ ಮನೆಯಲ್ಲಿ ಅಘೋಷಿತ ಆದಾಯ ಪತ್ತೆಯಾಗಿದ್ದು, ತೆರಿಗೆ ಪಾವತಿಯಾಗದ ಬಗ್ಗೆಯೂ ಸಂಶಯ ಮೂಡಿದೆ. ಮದನ್ ಮಂದಣ್ಣ ಅವರ ಒಡೆತನದ ಬೃಹತ್ ಬಂಗಲೆ, ಸೆರೆನಿಟಿ ಕಲ್ಯಾಣ ಮಂಟಪ, ಕಾಫಿ ತೋಟ, ಹೊಸದಾಗಿ ಖರೀದಿ ಮಾಡಿ ಬಿಟ್ಟಂಗಾಲದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್, ಪೆಟ್ರೋಲ್ ಬಂಕ್ ಜಾಗದ ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು.

ಸತತ 29 ಗಂಟೆಗಳ ವಿಚಾರಣೆ ಬಳಿಕ ಐಟಿ ಅಧಿಕಾರಿಗಳ ತಂಡ ಮಂದಣ್ಣ ಅವರ ಮನೆಯಲ್ಲಿ ಸಿಕ್ಕ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ದಾಖಲೆಗಳ ಆಧಾರದಲ್ಲಿ ಕುಟುಂಬಸ್ಥರನ್ನು ಸೋಮವಾರ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News