ಪೌರತ್ವ ಕಾಯ್ದೆಯನ್ನು ವಿರೋಧಿಸುವವರು 'ದಲಿತ ವಿರೋಧಿಗಳು': ಹುಬ್ಬಳ್ಳಿಯಲ್ಲಿ ಅಮಿತ್ ಶಾ

Update: 2020-01-18 16:00 GMT

ಹುಬ್ಬಳ್ಳಿ, ಜ. 18: ‘ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸುತ್ತಿರುವವರು ದಲಿತ ವಿರೋಧಿಗಳು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದೌರ್ಜನ್ಯಕ್ಕೆ ಗುರಿಯಾಗಿ ಭಾರತಕ್ಕೆ ಬಂದವರ ಪೈಕಿ ಶೇ.70ರಷ್ಟು ದಲಿತರೇ ಇದ್ದಾರೆ. ಅವರಿಗೆ ಪೌರತ್ವ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಸಿಎಎ ಪರ ಜನ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಯಾವುದೇ ಕಾರಣಕ್ಕೂ ಓಟ್ ಬ್ಯಾಂಕ್ ನೀತಿ ಅನುಸರಿಸುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್, ಆಮ್ ಆದ್ಮಿ, ಜೆಡಿಎಸ್ ಸೇರಿದಂತೆ ವಿಪಕ್ಷಗಳು ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಸಿಎಎ ವಿರೋಧಿಸುತ್ತಿವೆ ಎಂದು ದೂರಿದರು.

ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಶೋಷಣೆಗೆ ಒಳಗಾಗಿ ಭಾರತಕ್ಕೆ ಬಂದವರ ಸ್ಥಿತಿಯನ್ನು ನೋಡಿದರೆ ಕಣ್ಣೀರು ಬರುತ್ತದೆ. ಅವರಿಗೆ ಉತ್ತಮ ಜೀವನ ಕಟ್ಟಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದರು.
ದೇಶವನ್ನು ಧರ್ಮದ ಆಧಾರದ ಮೇಲೆ ವಿಂಗಡಣೆ ಮಾಡಿದ್ದು ಕಾಂಗ್ರೆಸ್. ದೇಶದಲ್ಲಿರುವ ಮುಸ್ಲಿಮರು, ಕ್ರೈಸ್ತರು ಸೇರಿದಂತೆ ಎಲ್ಲರನ್ನೂ ಬಿಜೆಪಿ ಸಮಾನವಾಗಿ ಕಾಣುತ್ತದೆ ಎಂದ ಅವರು, ದೇಶಕ್ಕೆ ಬಂದವರಿಗೆ ರಕ್ಷಣೆ ನೀಡುವುದು ಸರಕಾರದ ಜವಾಬ್ದಾರಿ ಎಂದರು.

ನೆರೆಯ ದೇಶಗಳಿಂದ ಬಂದು ಭಾರತದಲ್ಲಿ ನೆಲೆ ಕಂಡ ಸಂತ್ರಸ್ತರಿಗೆ ಆಶ್ರಯ ನೀಡಬೇಕೆಂದು ಮಹಾತ್ಮ ಗಾಂಧೀಜಿ 1946ರಲ್ಲಿ ಹೇಳಿದ್ದರು. ಅಲ್ಲದೆ, ಮಾಜಿ ಪ್ರಧಾನಿ ನೆಹರೂ ಸೇರಿದಂತೆ ಅನೇಕ ನಾಯಕರ ಆಶಯ ಇದೇ ಆಗಿತ್ತು. ಅದನ್ನು ಪ್ರಧಾನಿ ಮೋದಿ ನೇತೃತ್ವದ ಸರಕಾರ ಈಡೇರಿಸಿದೆ ಎಂದು ಅವರು ತಿಳಿಸಿದರು.

ರಾಜಸ್ಥಾನದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪಾಕಿಸ್ತಾನ ಸೇರಿದಂತೆ ಇನ್ನಿತರ ದೇಶಗಳಿಂದ ನಿರಾಶ್ರಿತರಾಗಿ ಬಂದಿರುವವರಿಗೆ ಪೌರತ್ವ ನೀಡುವುದಾಗಿ ಭರವಸೆ ನೀಡಿದೆ. ಅದೇ ಕೆಲಸವನ್ನು ನಾವು ಮಾಡಲು ಮುಂದಾಗುತ್ತಿರುವುದರಿಂದ, ತಮ್ಮ ಓಟ್ ಬ್ಯಾಂಕ್ ಎಲ್ಲಿ ಕೈ ಬಿಡುತ್ತದೆಯೋ ಎಂಬ ಆತಂಕದಿಂದ ವಿರೋಧಿಸುತ್ತಿದ್ದಾರೆ ಎಂದು ಅವರು ದೂರಿದರು.

ದೇಶದ ಮುಸ್ಲಿಮರ ನಾಗರಿಕತ್ವವನ್ನು ಕಸಿಯಲಾಗುತ್ತದೆ ಎಂಬ ಭ್ರಮೆಯನ್ನು ಕಾಂಗ್ರೆಸ್ ನಾಯಕರು ಹುಟ್ಟು ಹಾಕುತ್ತಿದ್ದಾರೆ. ಮುಸ್ಲಿಮರ ನಾಗರಿಕತ್ವವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ. ಈ ದೇಶದ ಮೇಲೆ ಅನ್ಯ ಧರ್ಮೀಯರ ಹಕ್ಕು ಎಷ್ಟಿದೆಯೇ, ಅಷ್ಟೇ ಹಕ್ಕು ಮುಸ್ಲಿಮರದ್ದು ಇದೆ ಎಂದು ಅಮಿತ್ ಶಾ ಹೇಳಿದರು.

ಮಂದಿರ ನಿರ್ಮಾಣ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೋ ಬೇಡವೋ ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿದ ಅವರು, ವಿಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ ಅಮಿತ್ ಶಾ ಟೀಕಿಸಿದರು.

ಮೋದಿ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮೂಲಕ ಉಗ್ರರು ಹಾಗೂ ಪಾಕಿಸ್ತಾನಕ್ಕೆ ಉತ್ತರ ನೀಡಿದರು. ಆದರೆ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್ ಸೇರಿದಂತೆ ಇನ್ನಿತರ ವಿಪಕ್ಷ ನಾಯಕರು ಇದಕ್ಕೆ ಸಾಕ್ಷಿ ಕೇಳುತ್ತಾರೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಕಾಂಗ್ರೆಸ್ ನಾಯಕರ ಹೇಳಿಕೆ ಒಂದೇ ರೀತಿಯಲ್ಲಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಸಿಎಎ ವಿಚಾರದಲ್ಲಿ ಯಾವುದೇ ರೀತಿಯ ಸಂವಾದ ನಡೆಸಲು ರಾಹುಲ್ ಗಾಂಧಿ ಸಮಯ ಹಾಗೂ ದಿನಾಂಕವನ್ನು ನಿಗದಿಗೊಳಿಸಿದರೆ, ನಮ್ಮ ಪ್ರಹ್ಲಾದ್ ಜೋಶಿ ಅವರ ಜೊತೆ ಚರ್ಚೆ ನಡೆಸಲು ಸಿದ್ಧವಾಗಿದ್ದಾರೆ ಎಂದು ಅಮಿತ್ ಶಾ ಸವಾಲು ಹಾಕಿದರು.

ಮೋದಿ ಜತೆ ಹೆಜ್ಜೆ ಹಾಕಿ: ಇದೇ ವೇಳೆ ನೆರೆದಿದ್ದ ಜನರಿಗೆ ನಿಮ್ಮ ಮೊಬೈಲ್ ಫೋನ್ ಕೈಗೆತ್ತಿಕೊಳ್ಳಿ ಎಂದ ಅಮಿತ್ ಶಾ, ‘88662 88662ಕ್ಕೆ ಕರೆ ಮಾಡಿ ದೇಶದ ಒಳಿತಿಗಾಗಿ ಜಾರಿಗೆ ತಂದಿರುವ ಸಿಎಎ ಪರ ಪ್ರಧಾನಿ ಮೋದಿ ಜತೆ ಹೆಜ್ಜೆ ಹಾಕಿ’ ಅವರು ಮನವಿ ಮಾಡಿದರು.

ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ಡಿಸಿಎಂ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಚಿವರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ಸಿ.ಸಿ. ಪಾಟೀಲ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲು ಸೇರಿದಂತೆ ಇನ್ನಿತರರು ಹಾಜರಿದ್ದರು.

‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮೆಲ್ಲರ ಶ್ರಮದಿಂದ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇವೆ ಎಂಬ ಭರವಸೆಯನ್ನು ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಅವರಿಗೆ ಈ ಸಂದರ್ಭದಲ್ಲಿ ನೀಡುತ್ತೇನೆ’
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News