ಪೌರತ್ವವು ಹಕ್ಕುಗಳ ಜೊತೆ ಕರ್ತವ್ಯವನ್ನು ಕೂಡಾ ನೀಡುತ್ತದೆ; ಸಿಜೆಐ ಬೊಬ್ಡೆ

Update: 2020-01-18 15:59 GMT

ನಾಗಪುರ,ಜ.18: ಪೌರತ್ವವೆಂದರೆ ಜನತೆಗೆ ಹಕ್ಕು ದೊರೆಯುವುದಷ್ಟೇ ಅಲ್ಲ, ಸಮಾಜದಲ್ಲಿ ಅವರಿಗಿರುವ ಕರ್ತವ್ಯಗಳನ್ನು ಕೂಡಾ ನೀಡುತ್ತದೆ ಎಂದು ಭಾರತದ ಮುಖ್ಯನ್ಯಾಯಮೂರ್ತಿ ಬೊಬ್ಡೆ ಶನಿವಾರ ಹೇಳಿದ್ದಾರೆ.

 ನಾಗಪುರದಲ್ಲಿ ಶುಕ್ರವಾರ ರಾಷ್ಟ್ರ ಸಂತ ತುಕಾಡೊಜಿ ಮಹಾರಾಜ್ ವಿವಿಯ 107ನೇ ಘಟಿಕೋತ್ಸವದಲ್ಲಿ ಮಾತನಾಡುತ್ತಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ವಿಪರೀತವಾಗಿ ವಾಣಿಜ್ಯೀಕರಣಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬುದ್ಧಿಮತ್ತೆ ಮತ್ತು ಚಾರಿತ್ರ್ಯದ ಬೆಳವಣಿಗೆ ಶಿಕ್ಷಣದ ಮುಖ್ಯ ಗುರಿಯಾಗಿರಬೇಕೆಂದು ಅವರು ಅಭಿಪ್ರಾಯಿಸಿದರು.

ಇಂದು ಶಿಕ್ಷಣವು ಎಲ್ಲೆಡೆ ಪ್ರಸರಣಗೊಳ್ಳುತ್ತಿದೆ. ದುರುದೃಷ್ಟವಶಾತ್ ಕೆಲವು ವಿಶ್ವವಿದ್ಯಾನಿಲಯಗಳು ತೀವ್ರವಾಗಿ ವಾಣಿಜ್ಯ ಮನಸ್ಥಿತಿಯನ್ನು ಹೊಂದಿವೆ ಎಂದರು. ಕಾನೂನು ಬೋಧಿಸುವ ಕೆಲವು ನಿರ್ದಿಷ್ಟ ಸಂಸ್ಥೆಗಳ ಬಗ್ಗೆ ತನಗಿರುವ ವೈಯಕ್ತಿಕ ತಿಳುವಳಿಕೆಯಿಂದ ಈ ಮಾತನ್ನು ತಾನು ಹೇಳುತ್ತಿರುವುದಾಗಿ ಬೊಬ್ಡೆ ತಿಳಿಸಿದ್ದಾರೆ.

 ಸಕ್ರಿಯವಾದ ಪೌರನಾಗಿರುವ ಹೊಣೆಗಾರಿಕೆಯು ನಿಮ್ಮೆಲ್ಲರ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಬೊಬ್ಡೆ, ಪೌರತ್ವವೆಂದರೆ ಕೇವಲ ಹಕ್ಕುಗಳನ್ನು ಪಡೆಯುವಷ್ಟೇ ಅಲ್ಲ, ಸಮಾಜಕ್ಕೆ ಆತ ಕರ್ತವ್ಯಗಳನ್ನು ಕೂಡಾ ಅದು ಹೊರಿಸುತ್ತದೆ ಎಂದವರು ಹೇಳಿದರು

ಆರ್‌ಟಿಎಂಎನ್‌ಯುನ ಹಳೆ ವಿದ್ಯಾರ್ಥಿಯೆಂದು ತನ್ನನ್ನು ಕರೆದುಕೊಂಡ ಅವರು, ವಿಶ್ವವಿದ್ಯಾನಿಲಯವು ನಿಜಕ್ಕೂ ತಾಯಿಯಂತೆ. ಅದು ತನ್ನ ಮಕ್ಕಳಿಗೆ ಜ್ಞಾನ, ಕೌಶಲ್ಯವನ್ನು ನೀಡುತ್ತದೆ ಮತ್ತು ಅವರ ಜೀವನದುದ್ದಕ್ಕೂ ರಕ್ಷಣೆ ನೀಡುತ್ತದೆ’’ ಎಂದು ಬೊಬ್ಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News