ಮುಂದುವರಿದ 'ಫಾಸ್ಟಾಗ್' ಗೊಂದಲ: ಟೋಲ್ ಸಿಬ್ಬಂದಿ-ವಾಹನ ಚಾಲಕರ ನಡುವೆ ವಾಗ್ವಾದ

Update: 2020-01-18 16:43 GMT

ಬೆಂಗಳೂರು, ಜ.18: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟಾಗ್ ಅಳವಡಿಕೆ ವ್ಯವಸ್ಥೆ ಜಾರಿಯಾಗಿ ಮೂರು ದಿನಗಳು ಕಳೆಯುತ್ತಿದ್ದರೂ, ಅಧಿಕ ಶುಲ್ಕ ಪಾವತಿಸುವ ವಿಚಾರವಾಗಿ ಟೋಲ್ ಸಿಬ್ಬಂದಿ ಹಾಗೂ ವಾಹನಗಳ ಚಾಲಕರ ನಡುವೆ ವಾಗ್ವಾದ ಮುಂದುವರಿದಿದೆ.

ಟೋಲ್‌ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ನಿವಾರಣೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟಾಗ್ ಅಳವಡಿಸಿಕೊಂಡ ವಾಹನಗಳಿಗೆ ಫಾಸ್ಟಾಗ್ ಪಥದಲ್ಲಿಯೇ ಸಂಚರಿಸಲು ಅವಕಾಶ ನೀಡುತ್ತಿದೆ. ಫಾಸ್ಟಾಗ್ ಇಲ್ಲದ ವಾಹನಗಳನ್ನು ನಗದು ಪಥದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಫಾಸ್ಟಾಗ್ ಇಲ್ಲದ ವಾಹನಗಳು ಫಾಸ್ಟಾಗ್ ಪಥದಲ್ಲಿ ಸಂಚರಿಸುತ್ತಿರುವುದರಿಂದ ಟೋಲ್ ಸಿಬ್ಬಂದಿ ಕೇಂದ್ರ ಸರಕಾರದ ಆದೇಶದ ಪ್ರಕಾರ ಅಧಿಕ ಶುಲ್ಕ ವಸೂಲಿ ಮಾಡುತ್ತಿವೆ. ಇದು ವಾಹನ ಚಾಲಕರು ಹಾಗೂ ಟೋಲ್ ಸಿಬ್ಬಂದಿಯ ನಡುವೆ ವಾಗ್ವಾದ ಮತ್ತು ಗಲಾಟೆಗೆ ಕಾರಣವಾಗುತ್ತಿದೆ. ನಿಯಮದ ಪ್ರಕಾರ ದುಪ್ಪಟ್ಟು ಶುಲ್ಕ ನೀಡಲೇಬೇಕು ಎಂದು ಸಿಬ್ಬಂದಿ ಹೇಳುತ್ತಿದ್ದು, ಚಾಲಕರು ಜಗಳಕ್ಕೆ ನಿಲ್ಲುತ್ತಿದ್ದಾರೆ. ಇದರಿಂದ ವಾಹನಗಳಲ್ಲಿ ಪ್ರಯಾಣಿಸುವ ಇತರರು ಕಿರಿಕಿರಿ ಅನುಭವಿಸುವಂತಾಗುತ್ತಿದೆ.

ಸ್ಕಾನರ್‌ನಲ್ಲಿ ತಾಂತ್ರಿಕ ಸಮಸ್ಯೆ: ರಾಜ್ಯದ ಟೋಲ್ ಪ್ಲಾಜಾಗಳ ಫಾಸ್ಟಾಗ್ ಲೈನ್‌ಗಳಲ್ಲಿ ಅಳವಡಿಕೆ ಮಾಡಿರುವ ಸ್ಕಾನರ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗುತ್ತಲೇ ಇದೆ. ಇದು ಮುಂದುವರಿದಿರುವ ಪರಿಣಾಮ ಟೋಲ್ ಸಿಬ್ಬಂದಿ ಹ್ಯಾಂಡ್ ರೀಡರ್ ಮೂಲಕ ವಾಹನಗಳ ಫಾಸ್ಟಾಗ್ ಸ್ಟಿಕ್ಕರ್‌ಗಳನ್ನು ಸ್ಕಾನ್ ಮಾಡುತ್ತಿದ್ದಾರೆ. ಇದರಿಂದಲೂ ಸಂಚಾರ ದಟ್ಟಣೆಯಾಗುತ್ತಿದೆ.

ದಟ್ಟಣೆ ಕಡಿಮೆಯಾಗಿಲ್ಲ: ಸ್ಕಾನರ್‌ಗಳಲ್ಲಿನ ತಾಂತ್ರಿಕ ದೋಷ ಹಾಗೂ ವಾಹನಗಳ ಚಾಲಕರು ಮತ್ತು ಟೋಲ್ ಸಿಬ್ಬಂದಿಗಳ ನಡುವಿನ ವಾಗ್ವಾದಗಳಿಂದ ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗಿಯೇ ಇದೆ.

ಕ್ಯಾಶ್‌ಲೆಸ್ ಹೊರೆ: ಫಾಸ್ಟಾಗ್ ವ್ಯವಸ್ಥೆ ಜಾರಿಯಾಗುವ ಮೊದಲು ಟೋಲ್‌ಗಳ ಮೂಲಕ ಸಂಚರಿಸುವ ವಾಹನಗಳಿಗೆ ಎರಡೂ ಕಡೆ(ಹೋಗುವ ಹಾಗೂ ಹಿಂದಿರುಗಿ ಬರುವ)ಯ ಶುಲ್ಕವನ್ನು ಒಂದೇ ಬಾರಿಗೆ ಪಾವತಿಸಿದರೆ ರಿಯಾಯಿತಿ ಸಿಗುತ್ತಿತ್ತು. ಇದೀಗ ಫಾಸ್ಟಾಗ್ ಪಥದಲ್ಲಿ ಈ ವ್ಯವಸ್ಥೆಯಿದೆ. ಆದರೆ, ನಗದು ರೂಪದಲ್ಲಿ ಪಾವತಿಸುವವರಿಗೆ ಈ ವ್ಯವಸ್ಥೆಯಿಲ್ಲ. ಹೀಗಾಗಿ, ಅಧಿಕ ಶುಲ್ಕ ಪಾವತಿಸಿ ಸಂಚಾರ ಮಾಡಬೇಕಾಗಿದ್ದು, ಇದಕ್ಕೆ ವಾಹನಗಳ ಚಾಲಕರು ಮತ್ತಷ್ಟು ವಾಗ್ವಾದಕ್ಕಿಳಿಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News